ADVERTISEMENT

ಚಂದನವನದ ಇಷ್ಕ್

​ಪ್ರಜಾವಾಣಿ ವಾರ್ತೆ
Published 10 ಜನವರಿ 2019, 19:30 IST
Last Updated 10 ಜನವರಿ 2019, 19:30 IST
ಅರ್ಜುನ್‌ಯೋಗಿ ಮತ್ತು ಸಿರಿ ಪ್ರಹ್ಲಾದ್‌
ಅರ್ಜುನ್‌ಯೋಗಿ ಮತ್ತು ಸಿರಿ ಪ್ರಹ್ಲಾದ್‌   

‘ಇಷ್ಕ್‌’ ಎಂಬ ಹೆಸರು ಕೇಳಿದಾಕ್ಷಣ ಬಾಲಿವುಡ್‌ನ ಸಿನಿಮಾದ ನೆನಪು ಬರುತ್ತದೆ. ಆದರೆ ಇದು ಹಿಂದಿಯ ಇಷ್ಕ್‌ ಅಲ್ಲ. ಚಂದನವನದ ಇಷ್ಕ್‌. ಹೌದು, ಕನ್ನಡ ಚಿತ್ರರಂಗದಲ್ಲಿಯೂ ಇಷ್ಕ್‌ ಹೆಸರಿನ ಚಿತ್ರವೊಂದು ಸೆಟ್ಟೇರಿದೆ.

ಇತ್ತೀಚೆಗೆ ನಟ ದರ್ಶನ್ ಈ ಚಿತ್ರಕ್ಕೆ ಕ್ಲಾಪ್‌ ಮಾಡಿ ಶುಭ ಹಾರೈಸಿದ್ದಾರೆ.ನನ್ನ ಹೆಸರು ರಾಹುಲ್. ಇವಳು ರಮ್ಯಾ. ನಮ್ಮ ನಮ್ಮ ಪ್ರೇಮಕಥೆಯನ್ನು ಡೈರಿಯಲ್ಲಿ ಬರೆಯುತ್ತಿದ್ದೇವೆ. ಪೂರ್ಣ ಬರೆದ ನಂತರ ನಿಮಗೆ ತೋರಿಸುತ್ತೇವೆ.ನೋಡಲು ಸಿದ್ದರಾಗಿರಿ’ ಎಂದು ನಾಯಕ ಅರ್ಜುನ್‍ಯೋಗಿ ಕ್ಯಾಮೆರಾಕ್ಕೆ ಕೈ ತೋರಿಸುವ ದೃಶ್ಯವನ್ನು ಚಿತ್ರೀಕರಿಸಿಕೊಳ್ಳಲಾಯಿತು.

ನಂತರ ಮಾಧ್ಯಮದ ಜತೆ ಮಾತಿಗೆ ಮಾತಿಗೆ ತೊಡಗಿತು ಚಿತ್ರತಂಡ. ಮೊದಲು ಮಾತು ಶುರು ಮಾಡಿದ್ದು ನಿರ್ದೇಶಕ ನವೀನ್ ಆರ್. ಮಂಡ್ಯ. ಈ ಹಿಂದೆ ಸಂಕಲನಕಾರನಾಗಿ, ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಇರುವ ನವೀನ್‌ ಇದೇ ಅನುಭವದ ಆಧಾರದ ಮೇಲೆ ನಿರ್ದೇಶನದ ಟೋಪಿ ಧರಿಸುತ್ತಿದ್ದಾರೆ.

ADVERTISEMENT

‘ಇದೊಂದು ನವಿರಾದ ಪ್ರೇಮಕಥೆ. ಅದರ ಜತೆಗೆ ಸಾಕಷ್ಟು ಕಮರ್ಷಿಯಲ್ ಅಂಶಗಳು, ಕೌಟುಂಬಿಕ ಕಥೆ, ಗೆಳೆತನದ ಎಳೆ ಎಲ್ಲವೂ ಇದೆ. ವಾಸ್ತವದ ಆಧಾರದ ಮೇಲೆಯೇ ಕಥೆಯನ್ನು ಹೆಣೆಯಲಾಗಿದೆ. ಮಾತಿನ ಭಾಗವನ್ನು ಪೂರ್ತಿಯಾಗಿ ಬೆಂಗಳೂರಿನಲ್ಲಿಯೇ ಚಿತ್ರೀಕರಿಸಿ ಹಾಡಿನ ಚಿತ್ರೀಕರಣಕ್ಕಾಗಿ ತಾಜ್‌ಮಹಲ್‌ಗೆ ಹೋಗುವ ಇರಾದೆ ಇದೆ’ ಎಂದರು ನಿರ್ದೇಶಕರು.

ಚಿತ್ರದ ಮುಖ್ಯ ಪಾತ್ರವೊಂದರಲ್ಲಿ ರವಿಶಂಕರ್ ಅವರನ್ನು ಕರೆತರುವ ಆಲೋಚನೆಯಲ್ಲಿ ತಂಡವಿದೆ. ಈಗಾಗಲೇ ಅವರ ಜತೆ ಒಂದು ಸುತ್ತಿನ ಮಾತುಕತೆಯನ್ನೂ ಆಡಿ ಮುಗಿದಿದೆಯಂತೆ.

ವಡಸಲಮ್ಮ ಕಂಬೈನ್ಸ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿದೆ.

‘ಕಾಲೇಜು ವಿದ್ಯಾರ್ಥಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪಾರ್ಟ್‌ ಟೈಂ ಕೆಲಸ ಮಾಡಿ ಕಾಲೇಜಿಗೆ ಹೋಗುತ್ತಿರುತ್ತೇನೆ. ಆಗ ಹುಡುಗಿ ಪರಿಚಯ ಆಗುತ್ತದೆ. ಪ್ರೇಮ ಘಟಿಸುತ್ತದೆ. ಮುಂದೇನಾಗುತ್ತದೆ ಎನ್ನುವುದನ್ನು ತೆರೆಯ ಮೇಲೆಯೇ ನೋಡಬೇಕು’ ಎಂದರು ಅರ್ಜುನ್‌ ಯೋಗಿ. ಪಾತ್ರಕ್ಕೆ ಹೊಂದಿಕೊಳ್ಳಲು ಅವರು ತಮ್ಮ ದೇಹದ ತೂಕವನ್ನು 6 ಕೆ.ಜಿ. ಕಡಿಮೆ ಮಾಡಿಕೊಂಡಿದ್ದಾರೆ.

ಕಿರುತೆರೆ ನಟಿಯಾಗಿದ್ದ ಸಿರಿ ಪ್ರಹ್ಲಾದ್ ಅವರಿಗೆ ಇದು ಮೊದಲ ಸಿನಿಮಾ. ನಾಯಕಿಯ ಅಣ್ಣನಾಗಿ ರಂಗಭೂಮಿ ಕಲಾವಿದ ವಿಕಾಸ್, ಖಳನಟನಾಗಿ ಮುರಳಿ ಕಾಣಿಸಿಕೊಳ್ಳುತ್ತಿದ್ದಾರೆ. ಶಿವಸೀನ ಛಾಯಾಗ್ರಹಣ ಚಿತ್ರಕ್ಕಿದೆ. ಸಿನಿಮಾದಲ್ಲಿನ ಐದು ಹಾಡುಗಳಿಗೆ ಜಯಂತ ಕಾಯ್ಕಿಣಿ ಮತ್ತು ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.