ಯಶ್ ಶೆಟ್ಟಿ
ಯಶ್ ಶೆಟ್ಟಿ ಅಭಿನಯದ ‘ಜಂಗಲ್ ಮಂಗಲ್’ ಇಂದು(ಜು.4) ತೆರೆ ಕಾಣುತ್ತಿದೆ. ಒಂದು ದಶಕದಿಂದ ಚಿತ್ರರಂಗದಲ್ಲಿ ಪೋಷಕ, ಖಳನಟನಾಗಿ ಗುರುತಿಸಿಕೊಂಡಿರುವ ಅವರು ತಮ್ಮ ಸಿನಿಪಯಣದ ಕುರಿತು ಮಾತನಾಡಿದ್ದಾರೆ....
ಚಿತ್ರದಲ್ಲಿ ನಿಮ್ಮ ಪಾತ್ರವೇನು?
‘ಪ್ರವೀಣ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ದಕ್ಷಿಣ ಕನ್ನಡದ ಯುವಕ. ಬಿಸಿನೆಸ್ ನಡೆಸುತ್ತ ಇರುತ್ತಾನೆ. ಕೋವಿಡ್ ಸಮಯದಲ್ಲಿ ಉದ್ಯಮದಿಂದ ನಷ್ಟವಾಗುತ್ತದೆ. ಪ್ರೀತಿಯ ಬಲೆಯಲ್ಲಿ ಬಿದ್ದ ಆತ, ಸೋಲಿನ ಈ ಹತಾಶೆ ಮರೆಯಲು ತನ್ನ ಹುಡುಗಿಯನ್ನು ಕರೆದುಕೊಂಡು ಪ್ರವಾಸ ಹೋಗುತ್ತಾನೆ. ಆಗ ಏನಾಗುತ್ತದೆ ಎಂಬುದೇ ಚಿತ್ರದ ಕಥೆ.
ಮಂಗಳೂರಿಗೆ ಸೀಮಿತವಾಗಿರುವ ಸಿನಿಮಾವೇ?
ಪ್ರೇಮಿಗಳಿಬ್ಬರು ಕಾಡಿನಲ್ಲಿ ಸಿಲುಕಿಕೊಳ್ಳುವ ಕಥೆ. ಕುಕ್ಕೆ ಸುಬ್ರಮಣ್ಯದ ಬಳಿ ದಟ್ಟ ಕಾಡಿನಲ್ಲಿ ಚಿತ್ರೀಕರಣ ನಡೆದಿದೆ. ಹಾಗಂತ ಇದು ದಕ್ಷಿಣ ಕನ್ನಡಕ್ಕಷ್ಟೇ ಸೀಮಿತವಾದ ಕಥೆಯಲ್ಲ. ನಾವು ಆಗಾಗ ಮಲಯಾಳ ಸಿನಿಮಾಗಳನ್ನು ಹೊಗಳುತ್ತಿರುತ್ತೇವೆ. ಅಂಥದ್ದೆ ವಿಭಿನ್ನ ಜಾನರ್‌ನ ಕಥೆ. ಬಲ ರಾಜವಾಡಿ, ಉಗ್ರಂ ಮಂಜು, ಹರ್ಷಿತಾ ಚಂದ್ರಶೇಖರ್ ಹೊರತಾಗಿ ಉಳಿದವರು ಸ್ಥಳೀಯ ಕಲಾವಿದರು. ಪುತ್ತೂರು ಸುತ್ತಮುತ್ತಲಿನ ಪ್ರಾದೇಶಿಕ ಸೊಗಡನ್ನು ನಿರ್ದೇಶಕರು ತುಂಬ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಉತ್ತಮ ಸಿನಿಮಾಗಳು ಸೋಲುವುದಿಲ್ಲ. ಏನೋ ಒಂದು ಕೊರತೆ ಇರುತ್ತದೆ. ಈ ಚಿತ್ರದಲ್ಲಿ ಆ ರೀತಿ ಯಾವ ಕೊರತೆಯೂ ಇಲ್ಲದಂತೆ ಎಚ್ಚರವಹಿಸಿದ್ದೇವೆ. ಚಿತ್ರದ ಅವಧಿಯೇ 90 ನಿಮಿಷ. ಹೀಗಾಗಿ ಜನ ಕೈಹಿಡಿಯುತ್ತಾರೆ ಎಂಬ ಭರವಸೆಯಿದೆ.
ಈತನಕದ ಸಿನಿಪಯಣ ಹೇಗಿತ್ತು?
ನಾನು ಮೂಲತಃ ರಂಗಭೂಮಿ ಕಲಾವಿದ. ಉಡುಪಿಯಲ್ಲಿ ರಂಗ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದೆ. ನಂತರ ನೀನಾಸಂನಲ್ಲಿ ಒಂದು ವರ್ಷ ತರಬೇತಿ ಪಡೆದೆ. ಅದಾದ ಬಳಿಕ ದೆಹಲಿಯ ಎನ್‌ಎಸ್‌ಡಿಯಲ್ಲಿ ಮೂರು ವರ್ಷ ನಟನೆಯನ್ನೇ ಕಲಿತೆ. ಅಲ್ಲಿಂದ ಬಂದು ಮುಂಬೈನಲ್ಲಿ ಅಭಿನಯ ಕಲಿಸಿಕೊಡುತ್ತಿದೆ. 2014ರಲ್ಲಿ ‘ಜ್ವಲಂತಂ’ ಚಿತ್ರದಿಂದ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟೆ. ಈತನಕ 80ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವೆ. ಪೋಷಕ ನಟನಾಗಿ, ಖಳನಾಯಕನಾಗಿ ನಟಿಸಿದ್ದೆ ಹೆಚ್ಚು. ‘ಸಲಗ’ ವೃತ್ತಿ ಜೀವನಕ್ಕೆ ಬ್ರೇಕ್ ನೀಡಿದ ಸಿನಿಮಾ. ‘ಸೂಜಿದಾರ’ ಚಿತ್ರದಿಂದ ನಾಯಕನಾದೆ. ಸಿನಿಮಾ ಹಿಟ್ ಆಗಲಿಲ್ಲ. ಆದರೆ ಉತ್ತಮ ಪ್ರತಿಕ್ರಿಯೆ ಬಂತು. ಹಿಂದಿಯ ವೆಬ್ ಸಿರೀಸ್‌ನಲ್ಲಿ ನಟಿಸಿದೆ.
ನಾಯಕನಾಗಿಯೇ ಮುಂದುವರಿಯುವ ಹಂಬಲವಿದೆಯಾ?
ಎಲ್ಲರೂ ನಾಯಕನಾಗಿ ಯಶಸ್ಸು ಗಳಿಸಲು ಸಾಧ್ಯವಿಲ್ಲ. ರಂಗಭೂಮಿಯಿಂದ ಬಂದ ನನಗೆ ಈ ಸತ್ಯ ಚೆನ್ನಾಗಿ ಗೊತ್ತು. ಪ್ರಕಾಶ್ ರಾಜ್, ಅಚ್ಯುತ್ ಕುಮಾರ್, ಕೆ.ಕೆ.ಮೆನನ್, ರಂಗಾಯಣ ರಘು ಮುಂತಾದವರು ಪೋಷಕ ನಟರಾಗಿ ಚಿತ್ರಕ್ಕೆ ಶಕ್ತಿ ನೀಡುತ್ತಾರೆ. ಯಾವ ಪಾತ್ರವಾದರೂ ಅದಕ್ಕೆ ಜೀವ ತುಂಬುತ್ತಾರೆ. ನಾನು ಅದೇ ಹಾದಿಯಲ್ಲಿ ಯೋಚಿಸುತ್ತೇನೆ. ‘ಸೂಜಿದಾರ’ದ ಬಳಿಕ ನಾಯಕನಾಗಿ ಒಂದಷ್ಟು ಕಥೆಗಳು ಬಂದವು. ಆದರೆ ಒಪ್ಪಿಕೊಳ್ಳಲಿಲ್ಲ. ‘ಕೆಡಿ’ ಚಿತ್ರದಲ್ಲಿ ಉತ್ತಮ ಪಾತ್ರ ಮಾಡುತ್ತಿದ್ದೇನೆ. ರೆಟ್ರೊ ಲುಕ್‌ನ ಪಾತ್ರ. ಸಾಕಷ್ಟು ದೊಡ್ಡ ಕಲಾವಿದರ ಜತೆ ನಟಿಸುವ ಅವಕಾಶ ಲಭಿಸಿದೆ. ಹೀಗಾಗಿ ವರ್ಷಪೂರ್ತಿ ಆ ಪಾತ್ರಕ್ಕೆ ನೀಡಿರುವೆ. ‘ಜಂಗಲ್ ಮಂಗಲ್’ ಕಥೆ ತುಂಬ ಚೆನ್ನಾಗಿದೆ. ನಿರ್ದೇಶಕ ರಕ್ಷಿತ್ ಚಿತ್ರಕಥೆ ಬಹಳ ಚೆನ್ನಾಗಿದೆ. ಇಲ್ಲಿ ಕಥೆಯೇ ನಾಯಕ. ಹೀಗಾಗಿ ಒಪ್ಪಿಕೊಂಡೆ.
ಇಷ್ಟು ವರ್ಷಗಳ ಪಯಣದಲ್ಲಿ ಸವಾಲು ಎನಿಸಿದ್ದೇನು?
ಸರಿಯಾದ ಕೌಟಂಬಿಕ ಹಿನ್ನೆಲೆ ಇಲ್ಲದೆ ಪ್ರತಿಭೆಯೊಂದರಿಂದಲೇ ಯಶಸ್ಸು ಗಳಿಸುವುದು ಚಿತ್ರರಂಗದಲ್ಲಿ ಕಷ್ಟ. ಯಶಸ್ಸಿಗಾಗಿ ಸಾಕಷ್ಟು ಕಾಯಬೇಕು. ಜರ್ನಿ ಮಾಡಬೇಕು. ಆ ತಾಳ್ಮೆ ಬೇಕು. ಒಮ್ಮೆ ಹೆಸರು ಮಾಡುವುದೇ ಸವಾಲು. ಒಮ್ಮೆ ಹೆಸರು ಗಳಿಸಿದರೆ ಅವಕಾಶಗಳು ತಾನಾಗಿಯೇ ಬರುತ್ತವೆ. ಪ್ರತಿಭೆ ಇದ್ದರೆ ಸಾಲದು, ಜತೆಗೆ ನಮ್ಮ ವರ್ತನೆಯೂ ಮುಖ್ಯ. ನಾವು ತಂಡಕ್ಕೆ ವಿಧೇಯರಾಗಿದ್ದರೆ ಮಾತ್ರ ಆ ತಂಡದ ಮುಂದಿನ ಸಿನಿಮಾಗಳಲ್ಲಿಯೂ ಅವಕಾಶ ಸಿಗುತ್ತದೆ. ‘ಸಲಗ’ ಚಿತ್ರದವರೆಗೂ ಸಾಕಷ್ಟು ಸೈಕಲ್ ಹೊಡೆದೆ. ಅಲ್ಲಿಂದ ಬಳಿಕ ಅದೃಷ್ಟ ಬದಲಾಯಿತು.
ನಿಮ್ಮ ಮುಂದಿನ ಸಿನಿಮಾಗಳು?
ಅಖಿಲ್ ಅಕ್ಕಿನೇನಿ ಜತೆ ತೆಲುಗಿನ ‘ಲೆನಿನ್’ ಚಿತ್ರದಲ್ಲಿ ನಟಿಸುತ್ತಿರುವೆ. ‘ತಲ್ವಾರ್ ಪೇಟೆ’, ‘ಕರಿಕಾಡ’, ‘ವಿರಾಟ ಪರ್ವ’ ಸೇರಿದಂತೆ ಕನ್ನಡದಲ್ಲಿ ಒಂದಷ್ಟು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.