ADVERTISEMENT

ಕಬ್ಜ ಸಿನಿಮಾದಲ್ಲಿ ಉಪ್ಪಿಯ ರಗಡ್‌ ಲುಕ್

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2019, 11:55 IST
Last Updated 15 ನವೆಂಬರ್ 2019, 11:55 IST
‘ಕಬ್ಜ’ ಚಿತ್ರದಲ್ಲಿ ಉಪೇಂದ್ರ
‘ಕಬ್ಜ’ ಚಿತ್ರದಲ್ಲಿ ಉಪೇಂದ್ರ   

ಆರ್‌. ಚಂದ್ರು ಮತ್ತು ‘ರಿಯಲ್‌ ಸ್ಟಾರ್‌’ ಉಪೇಂದ್ರ ಜೋಡಿ ‘ಐ ಲವ್‌ ಯು’ ಚಿತ್ರದ ಬಳಿಕ ‘ಕಬ್ಜ’ ಸಿನಿಮಾದಲ್ಲಿ ಮತ್ತೆ ಒಂದಾಗಿದೆ. ಇಬ್ಬರ ಕಾಂಬಿನೇಷನ್‌ನಡಿ ಈ ಹಿಂದೆ ತೆರೆಕಂಡಿದ್ದ ‘ಬ್ರಹ್ಮ’ ಚಿತ್ರವೂ ಸಕ್ಸಸ್‌ ಆಗಿತ್ತು. ಮತ್ತೆ ಇಬ್ಬರೂ ಒಂದಾಗಲು ‘ಕಬ್ಜ’ ವೇದಿಕೆ ಒದಗಿಸಿದೆ.

‘ಕಬ್ಜ’ –ಭೂಗತ ಜಗತ್ತಿನಲ್ಲಿ ಹೆಚ್ಚಾಗಿ ಬಳಕೆಯಲ್ಲಿ ಇರುವ ಪದ. ಇದಕ್ಕೆ ವಶಕ್ಕೆ ಪಡೆಯುವುದು, ಆಕ್ರಮಣ ಎಂದರ್ಥ. ಭೂಗತಲೋಕದ ಸುತ್ತವೇ ಇದರ ಕಥೆ ಹೆಣೆಯಲಾಗಿದೆ. ಹೊಸ ಆಯಾಮದಲ್ಲಿ ರೌಡಿಸಂ ಕಥೆ ಕಟ್ಟಿಕೊಡುವ ಉಮೇದಿನಲ್ಲಿದ್ದಾರೆ ನಿರ್ದೇಶಕ ಚಂದ್ರು.

‘ಓಂ’ ಚಿತ್ರದಲ್ಲಿ ‘ಹ್ಯಾಟ್ರಿಕ್‌ ಹೀರೊ’ ಶಿವರಾಜ್‌ಕುಮಾರ್‌ ಅವರ ಕೈಗೆ ಲಾಂಗ್‌ ಕೊಟ್ಟಿದ್ದರು ಉಪೇಂದ್ರ. ಬಳಿಕ ಉಪ್ಪಿ ತಾವು ನಟಿಸಿದ ಕೆಲವು ಚಿತ್ರಗಳಲ್ಲಿ ಲಾಂಗ್ ಝಳಪಿಸಿದ್ದೂ ಉಂಟು. ಈಗ ಅವರು ಮತ್ತೆ ಲಾಂಗ್‌ ಹಿಡಿಯಲು ಸಜ್ಜಾಗಿದ್ದಾರೆ. ಈಗಿನ ಜನರೇಷನ್‌ಗೆ ಇಷ್ಟವಾಗುವ ಕಥಾವಸ್ತು ಸಿನಿಮಾದಲ್ಲಿದೆ ಎಂಬುದು ಚಿತ್ರತಂಡದ ವಿವರಣೆ.

ADVERTISEMENT

‘ಐ ಲವ್‌ ಯು’ ಚಿತ್ರ ಕನ್ನಡ ಮತ್ತು ತೆಲುಗಿನಲ್ಲಿ ನಿರ್ಮಾಣವಾಗಿತ್ತು. ‘ಕಬ್ಜ’ ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು, ಮಲಯಾಳ, ಬಂಗಾಳಿ ಮತ್ತು ಮರಾಠಿ ಭಾಷೆಯಲ್ಲಿ ನಿರ್ಮಾಣವಾಗುತ್ತಿದೆ. ಏಳು ವಿಲನ್‌ಗಳು ನಟಿಸುತ್ತಿರುವುದು ಈ ಚಿತ್ರದ ಮತ್ತೊಂದು ವಿಶೇಷ. ಈಗಾಗಲೇ, ಟಾಲಿವುಡ್‌ನ ಖ್ಯಾತ ಖಳನಟ ಜಗಪತಿ ಬಾಬು ಇದರಲ್ಲಿ ನಟಿಸುವುದು ಖಾತ್ರಿಯಾಗಿದೆ.

‘ಕಬ್ಜ’ ಎಂಬತ್ತರ ದಶಕದ ಕಥೆ. ಹಾಗಾಗಿ, ಅದಕ್ಕೆ ತಕ್ಕಂತೆ ಉಪೇಂದ್ರ ಅವರ ಹೊಸ ಫೋಟೊಶೂಟ್‌ ಕೂಡ ಮಾಡಿಸಲಾಗಿದೆ. ರೆಟ್ರೊ ಶೈಲಿಯ ರಗಡ್‌ ಲುಕ್‌ನಲ್ಲಿ ಉಪ್ಪಿ ಮಿಂಚಿದ್ದಾರೆ. ಅವರ ಲುಕ್‌ ಅಭಿಮಾನಿಗಳಲ್ಲೂ ಸಂತಸ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.