‘ಕಮರೊಟ್ಟು ಚೆಕ್‌ಪೋಸ್ಟ್’ ನಿರ್ದೇಶಿಸಿದ್ದ ಪರಮೇಶ್ ನಿರ್ದೇಶನದ ‘ಕಮರೊ2’ ಚಿತ್ರ ಬಿಡುಗಡೆಗೆ ಸಜ್ಜಾಗುತ್ತಿದೆ. ಸಿನಿಮಾ ಆಗಸ್ಟ್ 22ಕ್ಕೆ ತೆರೆಕಾಣುತ್ತಿದ್ದು, ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ.
ಕನ್ನಡದಲ್ಲಿ ತೀರ ಅಪರೂಪ ಎನ್ನಬಹುದಾದ ಪ್ಯಾರಾ ನಾರ್ಮಲ್ ಜಾನರ್‌ನ ‘ಕಮರೊ2’ ಹಾರಾರ್ ಕಥಾಹಂದರ ಹೊಂದಿದೆ. ಪವನ್ ಗೌಡ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
‘ನಾನು ಈ ಹಿಂದೆ ನಿರ್ದೇಶಿಸಿದ್ದ ‘ಕಮರೊಟ್ಟು ಚೆಕ್‌ಪೋಸ್ಟ್’ ಕೂಡಾ ಇದೇ ಜಾನರ್‌ನಲ್ಲಿತ್ತು. ಅದು ನನ್ನ ತಂತ್ರಜ್ಞಾನದ ಅನುಭವಕ್ಕಾಗಿ ಮಾಡಿದ ಚಿತ್ರ. ಅದರಲ್ಲಿ ಯಾವುದೇ ಪರಿಚಿತ ಕಲಾವಿದರು ಅಭಿನಯಿಸಿರಲಿಲ್ಲ. ಆದರೂ ಚಿತ್ರ ಅಪಾರ ಮೆಚ್ಚುಗೆ ಪಡೆಯಿತು. ಈಗ ಸೀಕ್ವೆಲ್ ಆಗಿ ‘ಕಮರೊ2’ ಬರುತ್ತಿದೆ. ಉಡುಪಿ, ಚಿಕ್ಕಮಗಳೂರು ಸುತ್ತಮುತ್ತ ಚಿತ್ರದ ಚಿತ್ರೀಕರಣ ಆಗಿದೆ. ಮೊದಲ ಬಾರಿಗೆ ವಿಭಿನ್ನಪಾತ್ರದಲ್ಲಿ ಪ್ರಿಯಾಂಕ ಉಪೇಂದ್ರ ನಟಿಸಿದ್ದಾರೆ. ಹಿಂದೆಂದೂ ಅವರು ಈ ಮಾದರಿಯ ಪಾತ್ರ ಮಾಡಿಲ್ಲ. ಕನ್ನಡದ ‘ಮಿಥುನ ರಾಶಿ’ ಸೇರಿದಂತೆ ತಮಿಳಿನ ಧಾರಾವಾಹಿಗಳಲ್ಲೂ ನಟಿಸಿರುವ ಅನಂತಸ್ವಾಮಿ, ರಜನಿ ಭಾರದ್ವಾಜ್ ಮುಖ್ಯಭೂಮಿಕೆಯಲ್ಲಿದ್ದಾರೆ. ನೀನಾಸಂ ಅಶ್ವಥ್, ನಾಗೇಂದ್ರ ಅರಸ್, ಮಹೇಶ್ ರಾಜ್, ಬೇಬಿ ಖುಷಿ ತಾರಾಬಳಗದಲ್ಲಿದ್ದಾರೆ. ವಿಶೇಷ ಪಾತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಬಣ್ಣಹಚ್ಚಿದ್ದಾರೆ’ ಎಂದರು ಪರಮೇಶ್.
ಎ.ಟಿ.ರವೀಶ ಸಂಗೀತ ನಿರ್ದೇಶನ, ಸಂಗಮೇಶ್ ವಿಎಫ್‌ಎಕ್ಸ್ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.