ADVERTISEMENT

ಚೆಕ್‌ಪೋಸ್ಟ್‌ ದಾಟುವ ಕಷ್ಟ!

ವಿಜಯ್ ಜೋಷಿ
Published 31 ಮೇ 2019, 12:56 IST
Last Updated 31 ಮೇ 2019, 12:56 IST
ಗಡ್ಡಪ್ಪ
ಗಡ್ಡಪ್ಪ   

ಕಮರೊಟ್ಟು ಎನ್ನುವ ಊರಿನ ಚೆಕ್‌ಪೋಸ್ಟ್‌ ದಾಟಿ ತುಸು ದೂರ ಸಾಗಿದ ನಂತರ ಸಿಗುವ ಒಂಟಿ ಮನೆಯಲ್ಲಿ ನಡೆಯುವ ಕಥೆ ‘ಕಮರೊಟ್ಟು ಚೆಕ್‌ಪೋಸ್ಟ್‌’. ಕಥೆ ಇರುವುದು ಆ ಒಂಟಿ ಮನೆಯಲ್ಲಿ ನಡೆಯುವ ಪ್ಯಾರಾ ನಾರ್ಮಲ್‌ ಚಟುವಟಿಕೆಗಳ ಸುತ್ತ.

ಸನತ್ (ಸನತ್) ಮತ್ತು ಭೂಮಿಕಾ (ಸ್ವಾತಿ ಕೋಂಡೆ) ದಂಪತಿ ಈ ಚಿತ್ರದ ಪ್ರಮುಖ ಪಾತ್ರಧಾರಿಗಳು. ಸನತ್‌ ಸೃಜನಶೀಲ ಕೆಲಸವೊಂದರಲ್ಲಿ ತೊಡಗಿಕೊಂಡಿರುವವ. ಆದರೆ ಆತನಿಗೆ ಕೆಲಸದ ಒತ್ತಡಗಳ ನಡುವೆ ಒಂದು ಪುಟ್ಟ ಬ್ರೇಕ್‌ ಬೇಕಾಗುತ್ತದೆ. ಬ್ರೇಕ್‌ಗಾಗಿ ಆತ ಆಯ್ಕೆ ಮಾಡಿಕೊಳ್ಳುವುದು ತುಳುನಾಡಿನಲ್ಲಿ ಇರುವ ತನ್ನ ಆಪ್ತ ಸ್ನೇಹಿತನ ಮನೆಯನ್ನು.

ಕೆಲಸದ ನಡುವೆ ಬಿಡುವು ಪಡೆಯಲು ತುಳುನಾಡಿಗೆ ಹೊರಡುವ ಸನತ್, ತನ್ನ ಜೊತೆ ಇಬ್ಬರು ಸ್ನೇಹಿತರನ್ನೂ (ಉತ್ಪಲ್ ಮತ್ತು ಅಹಲ್ಯಾ ಸುರೇಶ್) ಸೇರಿಸಿಕೊಳ್ಳುತ್ತಾನೆ. ಸ್ನೇಹಿತನಿಗೆ ತಿಳಿಸದೆಯೇ ಅವನ ಮನೆಗೆ ಹೋಗುವ ಸನತ್‌ ತಂಡಕ್ಕೆ, ಅಲ್ಲಿ ಸ್ನೇಹಿತ ಇಲ್ಲದಿರುವುದು ಗೊತ್ತಾಗುತ್ತದೆ. ಆದರೂ ಅಲ್ಲಿಯೇ ಉಳಿದುಕೊಳ್ಳುವ ಸನತ್ ಹಾಗೂ ಉಳಿದವರಿಗೆ ಅಲ್ಲಿ ಅತೃಪ್ತ ಆತ್ಮಗಳ ಕಾಟ ಇರುವುದು ಗಮನಕ್ಕೆ ಬರುತ್ತದೆ.

ADVERTISEMENT

ಆ ಒಂಟಿ ಮನೆಯಲ್ಲಿ ಸಮಸ್ಯೆ ಇದೆ ಎಂಬುದು ವೀಕ್ಷಕರ ಗಮನಕ್ಕೆ ಬಂದಿರುತ್ತದೆ. ಆದರೆ ಪಾತ್ರಗಳ ಸಂಭಾಷಣೆ ಹಾಗೂ ಅವರು ಭಾವನೆಗಳನ್ನು ವ್ಯಕ್ತಪಡಿಸುವ ಬಗೆ ನೋಡಿದಾಗ, ಸಮಸ್ಯೆಯ ತೀವ್ರತೆ ಸರಿಯಾದ ರೀತಿಯಲ್ಲಿ ಪಾತ್ರಗಳಿಗೇ ಅರ್ಥವಾಗಿಲ್ಲವೇನೋ ಎಂದು ವೀಕ್ಷಕನಿಗೆ ಅನಿಸುತ್ತದೆ. ಕೆಲವು ಸನ್ನಿವೇಶಗಳ ಜೋಡಣೆಯಲ್ಲಿ ಬಿಗಿಯಾದ ಬಂಧ ಇಲ್ಲದಿರುವುದು ಇದಕ್ಕೆ ಕಾರಣವಿರಬಹುದು.

‘ತಿಥಿ’ ಚಿತ್ರದ ಗಡ್ಡಪ್ಪ ಈ ಸಿನಿಮಾದ ಪ್ರಮುಖ ಪಾತ್ರಧಾರಿಗಳಲ್ಲಿ ಒಬ್ಬರು. ಆದರೆ, ಅವರ ಕೆಲವು ಸಂಭಾಷಣೆಗಳನ್ನು ತಿಥಿ ಚಿತ್ರದಿಂದ ಯಥಾವತ್ತಾಗಿ ಎತ್ತಿಕೊಂಡಿರುವುದು ತಕ್ಷಣಕ್ಕೆ ಗೊತ್ತಾಗುತ್ತದೆ. ‘ಏನ್‌ ನಿನ್ ಪ್ರಾಬ್ಲಮ್ಮು’ ಎಂದು ಕೇಳುವುದು, ‘ಟೈಗರ್‌’ಗಾಗಿ ಹಂಬಲಿಸುವುದು ತಿಥಿ ಚಿತ್ರದ ಗಡ್ಡಪ್ಪನ ವ್ಯಕ್ತಿತ್ವದ ವೈಶಿಷ್ಟ್ಯಗಳು. ಈ ಚಿತ್ರದಲ್ಲಿ ಕೂಡ ನಿರ್ದೇಶಕ ಎ. ಪರಮೇಶ್ ಅವರು ಗಡ್ಡಪ್ಪನನ್ನು ಅದೇ ರೀತಿಯಲ್ಲಿ ತೋರಿಸಿದ್ದಾರೆ.

ಮನೆಯಲ್ಲಿ ಸಮಸ್ಯೆ ಕಂಡುಕೊಂಡ ನಂತರ ಸನತ್ ಧಾವಿಸುವುದು ಪ್ಯಾರಾನಾರ್ಮಲ್ ಶಕ್ತಿಗಳನ್ನು ಪತ್ತೆ ಮಾಡಿ, ಸಮಸ್ಯೆ ಬಗೆಹರಿಸುವ ತಜ್ಞೆ ಜೆಸ್ಸಿಕಾ (ನಿಶಾ ವರ್ಮ) ಅವರತ್ತ. ನೀರಸವಾಗಿ ಸಾಗುತ್ತಿದ್ದ ಸಿನಿಮಾ, ಜೆಸ್ಸಿಕಾ ಪ್ರವೇಶದ ನಂತರ ತುಸು ಸೊಗಸಾಗುತ್ತದೆ. ಕೆಲವೊಮ್ಮೆ ಸ್ಮಾರ್ಟ್‌ ತನಿಖಾಧಿಕಾರಿಯಂತೆಯೂ ಕಾಣಿಸುವ ಜೆಸ್ಸಿಕಾ ಸಿನಿಮಾ ಕಥೆಗೊಂದು ದಿಕ್ಕು ತಂದುಕೊಡುತ್ತಾರೆ. ಅವರು ಆ ಮನೆಯಲ್ಲಿನ ಅತೃಪ್ತ ಆತ್ಮಗಳನ್ನು ಹೇಗೆ ನಿವಾಳಿಸುತ್ತಾರೆ ಎನ್ನುವುದು ಚಿತ್ರದ ಕಥೆ.

ಚಿತ್ರದ ಎಲ್ಲ ಪಾತ್ರಗಳ ಸಂಭಾಷಣೆಗಳು ಬಿಗಿಯಾಗಿಲ್ಲ. ಹಾಗೆಯೇ ನಿರೂಪಣೆ ಸಹ ಕಥೆ ಬಯಸುವ ಬಿಗಿಯನ್ನು ಹೊಂದಿಲ್ಲ. ಚಿತ್ರದ ಕಥೆ, ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಂಡ ಸ್ಥಳ ಚೆನ್ನಾಗಿದ್ದರೂ ವೀಕ್ಷಕರ ನೋಟದ ಬಂಡಿ ಮಾತ್ರ ಚೆಕ್‌ಪೋಸ್ಟ್‌ ದಾಟುವುದೇ ಇಲ್ಲವೇನೋ ಅನಿಸಿಬಿಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.