ADVERTISEMENT

‘ಕಣಂಜಾರು’ ಟೀಸರ್‌ಗೆ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2024, 18:17 IST
Last Updated 14 ಜುಲೈ 2024, 18:17 IST
ಅಪೂರ್ವ
ಅಪೂರ್ವ   

ಬಹುತೇಕ ಹೊಸಬರಿಂದಲೇ ಕೂಡಿರುವ ‘ಕಣಂಜಾರು’ ಚಿತ್ರದ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಆರ್.ಬಾಲಚಂದ್ರ ಚಿತ್ರವನ್ನು ನಿರ್ದೇಶಿಸಿ, ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ.

‘ಕಣಂಜಾರು ಕಾರ್ಕಳದ ಹತ್ತಿರ ಇರುವ ಒಂದು ಊರು. ಅಲ್ಲಿ ಒಂದು ಪಟ್ಟದ ಮನೆಯಿದೆ. ಕಾಡಿನ ಮಧ್ಯೆ ಇರುವ ದೈವದ ಮನೆಯದು. ಅದಕ್ಕೆ ಯಾರೂ ಬೀಗ ಹಾಕಿಲ್ಲ. ಅಲ್ಲಿ ಚಿತ್ರೀಕರಣ ನಡೆಸಲು ಯಾರಿಗೂ ಅನುಮತಿ ಕೊಡುವುದಿಲ್ಲ, ಆದರೆ ನಮಗೆ ದೇವರೇ ಪ್ರಸಾದ ಕೊಟ್ಟಾಗ ಚಿತ್ರೀಕರಣಕ್ಕೆ ಅನುಮತಿ ನೀಡಿದರು. ಇದು ಕರಾವಳಿ ತೀರದ ಕಥೆಯಾದರೂ ನಾವಿಲ್ಲಿ ಕಂಬಳ, ಕೋಲದ ಕಥೆ ಹೇಳುತ್ತಿಲ್ಲ’ ಎಂದು ಚಿತ್ರದ ಬಗ್ಗೆ ವಿವರಿಸಿದರು ಆರ್.ಬಾಲಚಂದ್ರ.

ಆರ್.ಪಿ. ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರ ಸಸ್ಪೆನ್ಸ್, ಥ್ರಿಲ್ಲರ್ ಕಥೆ ಹೊಂದಿದೆ. ‘ಟೀಸರ್‌ ಈಗಾಗಲೇ ಹನ್ನೆರಡು ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಟೈಟಲ್ ಮೋಷನ್ ಪೋಸ್ಟರ್ ಕೂಡ ಮೂರುವರೆ ಲಕ್ಷ ವೀಕ್ಷಣೆಯಾಗುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿತ್ತು’ ಎಂದು ಖುಷಿ ಹಂಚಿಕೊಂಡರು ನಿರ್ದೇಶಕರು.

ADVERTISEMENT

ಈ ಚಿತ್ರದಲ್ಲಿ ನಾಯಕಿಯಾಗಿ ‘ಕೃಷ್ಣ ಟಾಕೀಸ್’ ಖ್ಯಾತಿಯ ನಟಿ ಅಪೂರ್ವ ನಟಿಸಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು ಹರ್ಷವರ್ಧನ್‌ರಾಜ್ ಸಂಗೀತ ನೀಡಿದ್ದಾರೆ. ಶಶಾಂಕ್ ಶೇಷಗಿರಿ ಅವರ ಹಿನ್ನೆಲೆ ಸಂಗೀತ, ಮಂಜುನಾಥ ಹೆಗ್ಡೆ ಛಾಯಾಚಿತ್ರಗ್ರಹಣವಿದ್ದು, ಮುಂದಿನ ತಿಂಗಳು ಚಿತ್ರವನ್ನು ರಿಲೀಸ್ ಮಾಡುವ ಆಲೋಚನೆಯಲ್ಲಿದೆ ಚಿತ್ರತಂಡ.

ಶರ್ಮಿತಾ ಗೌಡ, ಹಿರಿಯ ನಟ ರಾಮಕೃಷ್ಣ, ಪಿ.ಎಸ್. ಶ್ರೀಧರ್, ಮೇಘ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.