ಬೆಂಗಳೂರು: ನಟ ಸಾರ್ವಭೌಮ, ವರನಟ ಡಾ.ರಾಜ್‌ಕುಮಾರ್ ಅವರ ಜನ್ಮದಿನದ ಸಂದರ್ಭದಲ್ಲಿ ತಮ್ಮನ್ನು ದೇವರು ಎಂದು ಕರೆದ ‘ಅಣ್ಣಾವ್ರ’ನ್ನು ಸಾವಿರಾರು ಜನ ಸಾಮಾಜಿಕ ಜಾಲತಾಣಗಳ ಮುಖಾಂತರ ನೆನಪಿಸಿಕೊಂಡಿದ್ದಾರೆ.
ಎರಡನೇ ಮಗ, ನಟ ರಾಘವೇಂದ್ರ ರಾಜ್‌ಕುಮಾರ್ ಅವರು ಶನಿವಾರ ಬೆಳಗ್ಗೆ ಕಂಠೀರವ ಸ್ಟೂಡಿಯೊದಲ್ಲಿ ಇರುವ ರಾಜ್‌ಕುಮಾರ್ ಪುಣ್ಯಭೂಮಿಗೆ ಪೂಜೆ ಸಲ್ಲಿಸಿದರು. ರಾಜ್ಯದಾದ್ಯಂತ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿದ್ದ ಕಾರಣದಿಂದಾಗಿ ಅಭಿಮಾನಿಗಳೆಲ್ಲರೂ ಸರಳವಾಗಿಯೇ ವರನಟನ ಜನ್ಮದಿನವನ್ನು ಆಚರಿಸಿದರು.
ಕೊನೆಯ ಮಗ, ನಟ ಪುನೀತ್ ರಾಜ್‌ಕುಮಾರ್, ‘ಅಪ್ಪಾಜಿ ಅವರ 92ನೇ ಜನ್ಮದಿನದ ಪ್ರಯುಕ್ತ ನಮ್ಮ ಒಂದು ಪುಟ್ಟ ಕಾಣಿಕೆ’ ಎನ್ನುತ್ತಾ ‘ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ, ನಿನ್ನ ಪ್ರೇಮದ ನುಡಿಯ ಕೇಳಿ ನೂರು ನೆನಪು ಮೂಡಿದೆ. ತಂದೆಯಾಗಿ ತಾಯಿಯಾಗಿ ಮಮತೆಯಿಂದ ಬೆಳೆಸಿದೆ. ಬಿಸಿಲು ಮಳೆಗೆ ನರಳದಂತೆ ನಿನ್ನ ನೆರಳಲಿ ಸಲಹಿದೆ. ಆ ಪ್ರೀತಿಯ ಮನ ಮರೆವುದೇ’ ಎಂದು ಭಾವುಕವಾಗಿ ಹಾಡಿ ಅಪ್ಪಾಜಿಯನ್ನು ನೆನಪಿಸಿಕೊಂಡಿದ್ದಾರೆ. ಇದನ್ನು ಪಿಆರ್‌ಕೆ ಆಡಿಯೊ ಹೊರತಂದಿದೆ. 1976ರಲ್ಲಿ ತೆರೆಕಂಡ ‘ಬಡವರ ಬಂಧು’ ಚಿತ್ರದಲ್ಲಿ ಸ್ವತಃ ರಾಜ್‌ಕುಮಾರ್ ಈ ಹಾಡನ್ನು ಹಾಡಿದ್ದರು. ಇನ್‌ಸ್ಟಾಗ್ರಾಂನಲ್ಲಿ ಮೂರು ಲಕ್ಷಕ್ಕೂ ಅಧಿಕ ಜನರು ಈ ಹಾಡಿನ ವಿಡಿಯೊ ವೀಕ್ಷಿಸಿದ್ದಾರೆ.
ಇನ್ನು ‘ಜೀವ ಹೂವಾಗಿದೆ, ಭಾವ ಜೇನಾಗಿದೆ, ಬಾಳು ಹಾಡಾಗಿದೆ’ ಎಂದು ಹಾಡಿರುವ ಖ್ಯಾತ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್, ‘ಕನ್ನಡಿಗರ ಆರಾಧ್ಯ ದೈವ, ನಟಸಾರ್ವಭೌಮ, ನಮ್ಮೆಲ್ಲರ ಭಾರತ ರತ್ನ, ಡಾ. ರಾಜ್ ಕುಮಾರ್ ಅವರಿಗೆ ಜನ್ಮ ಜಯಂತಿಯ ಶುಭಾಶಯಗಳು’ ಎಂದು ಟ್ವೀಟ್ ಮಾಡಿದ್ದಾರೆ.
ನಿಜವಾದ ಬಂಗಾರದ ಮನುಷ್ಯ: ಖ್ಯಾತ ತೆಲುಗು ನಟ ಚಿರಂಜೀವಿ, ‘ಸರಳತೆ ಎನ್ನುವುದು ಶ್ರೇಷ್ಠ. ತಮ್ಮ ನುಡಿ ಮತ್ತು ನಡೆಯಿಂದ ಅಣ್ಣಾವ್ರು ನನಗೆ ಕಲಿಸಿದ ಮಹತ್ವದ ಪಾಠ ಇದು. ನನ್ನ ಜೀವನದ ಮೇಲೆ ಅವರ ಪ್ರಭಾವ ಹೆಚ್ಚಿದೆ. ಅವರನ್ನು ಜನ್ಮದಿನದ ಸಂದರ್ಭದಲ್ಲಿ ನಾನು ನೆನಪಿಸಿಕೊಳ್ಳುತ್ತೇನೆ. ಅವರು ನಿಜವಾದ ‘ಬಂಗಾರದ ಮನುಷ್ಯ’ ಎಂದು ಟ್ವೀಟ್ ಮಾಡಿದ್ದಾರೆ.
‘ನೀವು ಬದುಕುವುದನ್ನು ಕಲಿಸಿದ ಸಾಕಾರಮೂರ್ತಿ. ಸರಳತೆ, ಸಂಸ್ಕಾರಗಳ ಸಂಗಮ. ಒಬ್ಬ ನಟನಾಗಿ, ಮನುಷ್ಯನಾಗಿ ಹೇಗಿರಬೇಕೆಂದು ದಿಕ್ಸೂಚಿಯಾದ ದಾರಿದೀಪ. 92 ನೇ ಹುಟ್ಟುಹಬ್ಬದ ಸವಿನೆನಪು’ ಎಂದು ನಟ ಗಣೇಶ್ ಟ್ವೀಟ್ ಮಾಡಿದ್ದಾರೆ. ‘ಅಭಿಮಾನಿಗಳಲ್ಲಿ ದೇವರನ್ನು ಕಂಡ ಮೇರು ಕಲಾವಿದ, ಡಾ. ರಾಜ್ ಕುಮಾರ್ ಅವರಿಗೆ ಜನ್ಮದಿನದಂದು ಹೃತ್ಪೂರ್ವಕ ನಮನಗಳು’ ಎಂದು ನಟ ರಕ್ಷಿತ್ ಶೆಟ್ಟಿ ಹೇಳಿದ್ದಾರೆ.
‘ಭಾಷೆಯನ್ನ ತಾಯಿಯಂತೆ, ಗುರು ಹಿರಿಯರನ್ನ ತಂದೆಯಂತೆ, ಅಭಿಮಾನವನ್ನ ದೇವರಂತೆ, ಚಿತ್ರರಂಗವನ್ನ ಕುಟುಂಬದಂತೆ ಕಂಡಂತ ಕಲಾ ತಪಸ್ವಿ. ನಿಮ್ಮ ಜನ್ಮದಿನ ಈ ನಾಡು-ನುಡಿಗೆ ಮರು ಜೀವ ಕೊಡುತ್ತದೆ. ಮತ್ತೆ ಹುಟ್ಟಿ ಬನ್ನಿ ಈ ಮಣ್ಣ ಮೆಟ್ಟಿ ಬನ್ನಿ’ ಎಂದು ನಿರ್ದೇಶಕ ಸಂತೋಷ್ ಆನಂದರಾಮ್ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.