ADVERTISEMENT

Raj B Shetty New Movie: ‘ರಕ್ಕಸಪುರದೋಳ್‌’ ರಾಜ್‌

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 0:30 IST
Last Updated 21 ಅಕ್ಟೋಬರ್ 2025, 0:30 IST
ರಾಜ್‌ ಬಿ.ಶೆಟ್ಟಿ 
ರಾಜ್‌ ಬಿ.ಶೆಟ್ಟಿ    

ಪ್ರಯೋಗಗಳಿಗೆ ತಮ್ಮನ್ನು ತಾವು ಒಡ್ಡಿಕೊಂಡವರು ನಟ ರಾಜ್‌ ಬಿ.ಶೆಟ್ಟಿ. ‘ಒಂದು ಮೊಟ್ಟೆಯ ಕಥೆ’ಯಲ್ಲಿ ‘ಬೋಳುತಲೆ’ಯ  ಜನಾರ್ಧನನಾಗಿ, ‘ಗರುಡ ಗಮನ..’ದಲ್ಲಿ ರುದ್ರಭಯಂಕರ ಶಿವನಾಗಿ, ‘ಟೋಬಿ’ಯಲ್ಲಿ ಮಾತು ಬಾರದ ‘ಟೋಬಿ’ಯಾಗಿ, ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಲ್ಲಿ ನಂದಿಬಟ್ಟಲು ಹೂವಿನಂತ ಶುಭ್ರ ಮನಸ್ಸಿನ ‘ಅನಿಕೇತ್‌’ ಆಗಿ, ‘ರೂಪಾಂತರ’ದಲ್ಲಿ ಹೆಸರೇ ಇಲ್ಲದ ರೌಡಿಯಾಗಿ, ಇತ್ತೀಚೆಗೆ ತೆರೆಕಂಡ ‘ಸು ಫ್ರಮ್‌ ಸೋ’ನಲ್ಲಿ ನಗೆಗಡಲಲ್ಲಿ ತೇಲಾಡಿಸುವ ‘ಕರುಣಾಕರ ಗುರೂಜಿ’ಯಾಗಿ ಬಂದ ರಾಜ್‌ ಬಿ.ಶೆಟ್ಟಿ ಇದೀಗ ‘ರಕ್ಕಸಪುರದೋಳ್‌’ ಕಾಣಿಸಿಕೊಂಡಿದ್ದಾರೆ. 

ಸಾಹಸ ನಿರ್ದೇಶಕ ಕೆ.ರವಿವರ್ಮಾ ನಿರ್ಮಾಣದ, ರವಿ ಸಾರಂಗ ನಿರ್ದೇಶನದ ‘ರಕ್ಕಸಪುರದೋಳ್‌’ ಸಿನಿಮಾದ ಪೋಸ್ಟರ್‌ ಬಿಡುಗಡೆಯಾಗಿದ್ದು, ಕೈಯಲ್ಲೊಂದು ಗದೆ ಹಿಡಿದು ಕಿರೀಟ ಧರಿಸಿ ಯಮನಂತೆ ರಾಜ್‌ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಪ್ರೇಮ್‌ ಅವರ ಜೊತೆ ಕೆಲಸ ಮಾಡಿದ ಅನುಭವ ರವಿ ಅವರಿಗಿದೆ. ಇದೇ ಮೊದಲ ಬಾರಿಗೆ ಪೊಲೀಸ್‌ ಪಾತ್ರದಲ್ಲಿ ರಾಜ್‌ ಬಿ.ಶೆಟ್ಟಿ ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಮತ್ತೊಂದು ಭಿನ್ನವಾದ ಪಾತ್ರದೊಂದಿಗೆ ಅವರು ಪ್ರೇಕ್ಷಕರೆದುರಿಗೆ ಬರಲಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ಬಿ.ಸುರೇಶ್‌, ಅರ್ಚನಾ ಕೊಟ್ಟಿಗೆ ಮುಂತಾದವರು ತಾರಾಬಳಗದಲ್ಲಿದ್ದು, ನಾಯಕಿಯಾಗಿ ‘ಒಂದು ಸರಳ ಪ್ರೇಮಕಥೆ’ ಖ್ಯಾತಿಯ ಖ್ಯಾತಿಯ ಸ್ವತಿಷ್ಠಾ ಕೃಷ್ಣನ್‌ ಈ ಸಿನಿಮಾಗೆ ನಾಯಕಿಯಾಗಿದ್ದಾರೆ. ಆನಂದ್‌ ಆಡಿಯೊ ಸಿನಿಮಾದ ಆಡಿಯೊ ಹಕ್ಕುಗಳನ್ನು ಖರೀದಿಸಿದೆ. ಚಿತ್ರಕ್ಕೆ ವಿಲಿಯಂ ಡೇವಿಡ್‌ ಛಾಯಾಚಿತ್ರಗ್ರಹಣ, ಅರ್ಜುನ್‌ ಜನ್ಯ ಸಂಗೀತ ನಿರ್ದೇಶನವಿರಲಿದ್ದು, ಕ್ರಾಂತಿ ಕುಮಾರ್ ಸಂಭಾಷಣೆ ಬರೆದಿದ್ದಾರೆ.

ಕನ್ನಡದ ಜೊತೆಗೆ ಮಲಯಾಳ ಚಿತ್ರರಂಗದಲ್ಲೂ ಗುರುತಿಸಿಕೊಂಡಿರುವ ರಾಜ್‌ ‘ಟರ್ಬೊ’ ಹಾಗೂ ‘ರುಧಿರಂ’ ಎಂಬ ಸಿನಿಮಾ ಮಾಡಿದ್ದರು. ಗುರುದತ್‌ ಗಾಣಿಗ ನಿರ್ದೇಶನದ ಕನ್ನಡದ ‘ಕರಾವಳಿ’ ಹಾಗೂ ‘ಜುಗಾರಿ ಕ್ರಾಸ್‌’ನಲ್ಲೂ ರಾಜ್‌ ನಟಿಸಿದ್ದು, ಇವೆರಡೂ ಇನ್ನಷ್ಟೇ ತೆರೆಕಾಣಬೇಕಿವೆ. ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ ಆ್ಯಕ್ಷನ್‌ ಕಟ್‌ ಹೇಳಿರುವ ‘45’ ಸಿನಿಮಾ ಡಿ.25ರಂದು ತೆರೆಕಾಣುತ್ತಿದ್ದು, ಇದರಲ್ಲಿ ಶಿವರಾಜ್‌ಕುಮಾರ್‌, ಉಪೇಂದ್ರ ಜೊತೆ ರಾಜ್‌ ತೆರೆಹಂಚಿಕೊಂಡಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.