ADVERTISEMENT

ಜನರ ಮುಗುಳ್ನಗುವಿಗೆ ಕೃತಜ್ಞ: ಹಿರಿಯ ನಟ ರಮೇಶ್ ಭಟ್ ಸಿನಿ ಪಯಣ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 19:31 IST
Last Updated 6 ಜನವರಿ 2022, 19:31 IST
ರಮೇಶ್‌ ಭಟ್‌
ರಮೇಶ್‌ ಭಟ್‌   

ನಾನು ಕುಂದಾಪುರದ ಮಂಕಿ ಎಂಬ ಪುಟ್ಟ ಹಳ್ಳಿಯಿಂದ ಸಣ್ಣ ವಯಸ್ಸಿನಲ್ಲೇ ಅಪ್ಪನ ಜೊತೆ ಬೆಂಗಳೂರಿಗೆ ವಲಸೆ ಬಂದೆ. ಹಾಗೆ ನೋಡಿದರೆ ಅವಿಭಜಿತ ದಕ್ಷಿಣ ಕನ್ನಡದವರು ಹೆಚ್ಚಿನವರು ಎಲ್ಲೆಲ್ಲಿಗೋ ವಲಸೆ ಹೋದವರೇ. ನಾವು ಬೆಂಗಳೂರಿಗೆ ಬಂದೆವು. ಪುಟ್ಟ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದರು ನಮ್ಮ ಅಪ್ಪ. ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಮತ್ತೆ ಹೈಸ್ಕೂಲ್‌ ಶಿಕ್ಷಣ ಖಾಸಗಿ ಸಂಸ್ಥೆಯಲ್ಲಿ ಆಯಿತು. ಮುಂದೆಯೂ ಓದಬೇಕು ಅನ್ನಿಸಿತ್ತು. ಆದರೆ, ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಪಾಲಿಟೆಕ್ನಿಕ್‌ ಓದಿದೆ. ಮೈಸೂರು ಸ್ಯಾಂಡಲ್‌ ಸೋಪ್‌ ಕಾರ್ಖಾನೆಯಲ್ಲಿ ಕೆಲಸ ಪಡೆಯುವುದು ಅಂದಿನ ಕನಸಾಗಿತ್ತು. ಪಾಲಿಟೆಕ್ನಿಕ್‌ ಓದು ಮುಗಿಯುತ್ತಿದ್ದಾಗ ಈ ರಂಗದ ಗೀಳು ಆಗಲೇ ಅಂಟಿಕೊಂಡಿತ್ತು. ಅದಕ್ಕೂ ಮೊದಲು ಪ್ರಾಥಮಿಕ ಶಾಲೆಯಲ್ಲಿ ಯಾವುದೇ ನಾಟಕ, ಕಲಾ ಪ್ರದರ್ಶನಗಳಿಗೆ ಶಿಕ್ಷಕರು ನನ್ನನ್ನು ಹುರಿದುಂಬಿಸುತ್ತಿದ್ದರು. ಆಗಲೇ ನಾನೊಬ್ಬ ಮುಖ್ಯ ವ್ಯಕ್ತಿ ಅನ್ನುವುದು ತಲೆಯಲ್ಲಿ ತುಂಬಿಹೋಗಿತ್ತು.

ಮುಂದೆ ಬದುಕು ಹೇಗೋ ಸಾಗಬೇಕಲ್ಲಾ, ಅದಕ್ಕಾಗಿ ಗಾಂಧಿ ಬಜಾರ್‌ ಸಮೀಪ ಜ್ಯೋತಿಪ್ರಕಾಶ್‌ ಸ್ಟೋರ್‌ ಎಂಬ ಅಂಗಡಿ ತೆರೆದೆ. ಅದೊಂದು ಎಲ್ಲರಿಗೂ ಕೇಂದ್ರ ಸ್ಥಾನ ಆಗಿತ್ತು. ಅಂಗಡಿಯ ಒಂದು ಶೋಕೇಸಿನಲ್ಲಿ ಪ್ರತಿದಿನ ಒಬ್ಬ ನಟ ಅಥವಾ ನಟಿಯ ದೊಡ್ಡದಾದ ಚಿತ್ರ ಇರಿಸುತ್ತಿದ್ದೆ. ಅದನ್ನು ನೋಡಲೆಂದೇ ಕಾಲೇಜು ಹುಡುಗ ಹುಡುಗಿಯರು ಬರುತ್ತಿದ್ದರು. ಅವರಿಗೆ ಇದೊಂದು ‘ಸಂದೇಶ ಕೇಂದ್ರ’ವೂ ಆಗಿತ್ತು. ನಾಟಕ ಪ್ರದರ್ಶನಗಳ ಪ್ರಚಾರ ಪತ್ರ ಅಂಟಿಸಲೂ ಒಂದು ಫಲಕ ಇತ್ತು. ಹೀಗೆ ಇಲ್ಲಿ ಕಲಾವಿದರು, ಸಾಹಿತಿಗಳ ಪರಿಚಯ ಆಯಿತು. ವ್ಯಾಪಾರದ ಮಧ್ಯೆ ನಾಟಕಗಳ ಅವಕಾಶ ಬಂದಾಗೆಲ್ಲಾ ಬಿಡುವು ಮಾಡಿಕೊಂಡು ಹೋಗಿ ಅಭ್ಯಾಸ ಮಾಡಿಬರುತ್ತಿದ್ದೆ.

ಅದು 1978–79 ನನ್ನ ಬದುಕಿಗೆ ತಿರುವು ಸಿಕ್ಕಿತು. ಆ ತಿರುವು ಕೊಟ್ಟವರು ಶಂಕರ್‌ನಾಗ್‌. ಅವರ ಮೂಲಕ ನನಗೊಂದು ಗುರುತು ಸಿಕ್ಕಿದಂತಾಯಿತು. ಸಂಕೇತ್‌ ತಂಡ ಕಟ್ಟಿದ್ದು, ‘ಅಂಜು ಮಲ್ಲಿಗೆ’ ನಾಟಕವಾಡಿದ್ದು, ಮುಂದೆ ‘ಮಿಂಚಿನ ಓಟ’ ಸಿನಿಮಾ ಮಾಡಿದ್ದು, ಮಾಲ್ಗುಡಿ ಡೇಸ್‌ಗೆ ಸಹ ನಿರ್ದೇಶನ ಮಾಡಿದ್ದು...ಒಂದಾ ಎರಡಾ. ಶಂಕರ್‌ನಾಗ್‌ ಎನ್ನುವ ಮಾನವೀಯ ವ್ಯಕ್ತಿ ಜೊತೆ ಆತ್ಮೀಯ ಬಂಧ ಇತ್ತು. ಅವೆಲ್ಲಾ ಈಗ ನೆನಪುಗಳು.

ADVERTISEMENT

ಆಗ ನಾಟಕ, ಸಿನಿಮಾಕ್ಕೆ ಬಾ ಎಂದು ಶಂಕರ್‌ನಾಗ್‌ ಕರೆದಾಗ ಒಂದು ಆತಂಕವೂ ಇತ್ತು. ಅಂಗಡಿ ವ್ಯಾಪಾರ ಬಿಟ್ಟು ಹೋಗುವುದೇ? ಮುಂದೆ ಹೊಟ್ಟೆಪಾಡಿಗೆ ಏನು ಮಾಡಲಿ ಎಂಬ ಅಳುಕು ಅದು. ಆಗ ನೀನು ಇಲ್ಲಿ ಏನು ಗಳಿಸುತ್ತೀಯೋ ಅದನ್ನು ಸಿನಿಮಾದಲ್ಲೂ ಗಳಿಸಬಹುದು’ ಎಂದು ಹೇಳಿದ ಶಂಕರ್‌ನಾಗ್‌ ಭರವಸೆಯ ಮೇಲೆ ಗಟ್ಟಿಮನಸ್ಸು ಮಾಡಿ ಹೊರಟೇಬಿಟ್ಟೆ.

ಮುಂದೆ, ನೋಡಿ ಸ್ವಾಮಿ ನಾವಿರೋದೇ ಹೀಗೆ ಚಿತ್ರ ನಿರ್ಮಾಣ ಮಾಡಿದೆ. ಆ ಬಳಿಕ ಅವಕಾಶಗಳೇ ತುಂಬಾ ಕಡಿಮೆಯಾದವು. ಒಮ್ಮೆ ಭಾರ್ಗವ ಅವರು ‘ಜೀವನಚಕ್ರ’ ಸಿನಿಮಾದಲ್ಲಿ ಹಾಸ್ಯ ಪಾತ್ರ ಮಾಡಿದೆ. ಎಲ್ಲರಿಗೂ ಇಷ್ಟವಾಯಿತು.ಒಟ್ಟಾರೆ ಸಿನಿಮಾಗಳು ಸುಮಾರು 600 ಆಗಬಹುದೇನೋ. ಲೆಕ್ಕ ಇಟ್ಟಿಲ್ಲ.

ನಾನು ಮಾಡದ ಕೆಲಸ ಇಲ್ಲ. ಸಿನಿಮಾದ ಎಲ್ಲ ವಿಭಾಗಗಳಲ್ಲೂ ಕೆಲಸ ಮಾಡಿದ್ದೇನೆ.ಅಂಗಡಿ, ಹೋಟೆಲ್‌, ರೇಷ್ಮೆ ಸಾಕಣಿಕೆ ಮಾಡಿ ಕೈ ಸುಟ್ಟುಕೊಂಡಿದ್ದೂ ಆಗಿದೆ. ಬಳಿಕ ಪುಟ್ಟ ವಿನ್ಯಾಸ ಸಂಸ್ಥೆ (ಬ್ರಾಂಡ್‌ ಡಿಸೈನ್‌, ಮುದ್ರಣ ಇತ್ಯಾದಿ) ಹಾಕಿದ್ದೇವೆ. ಮಗ ಅದನ್ನು ನಡೆಸಿಕೊಂಡು ಹೋಗುತ್ತಿದ್ದಾನೆ. ಪತ್ನಿ, ಮಗ, ಇಬ್ಬರು ಮೊಮ್ಮಕ್ಕಳ ಜೊತೆ ಆನಂದವಾಗಿದ್ದೇನೆ.

ಬದುಕಿನಲ್ಲಿ ಸಾಕಷ್ಟು ಏರಿಳಿತ ಕಂಡಿದ್ದೇನೆ. ಕಾಲವೂ ಬದಲಾಗಿದೆ. ಸಿನಿಮಾ ಕ್ಷೇತ್ರವೂ ಸಾಕಷ್ಟು ಬದಲಾಗಿದೆ. ಸಂಬಂಧಗಳೂ ಬದಲಾಗಿವೆ. ಹೌದು ನಾನು ಅಂಗಡಿ ಇಟ್ಟುಕೊಂಡು ಹೊಟ್ಟೆಪಾಡು ನಡೆಸುತ್ತಿದ್ದವನು. ಅಂಥವನನ್ನು ಜನ ನಟ ಎಂದು ಗುರುತಿಸಿದ್ದಾರಲ್ಲಾ ನನಗದೇ ತೃಪ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.