ADVERTISEMENT

‘ಗುಳಿಗೆನ್ನೆ’ ಬೆಡಗಿ ‘ಬುಲ್ ‌ಬುಲ್‌’ ವೃತ್ತಿ ಬದುಕಿಗೆ ಏಳು ವರ್ಷ...

​ಪ್ರಜಾವಾಣಿ ವಾರ್ತೆ
Published 12 ಮೇ 2020, 9:39 IST
Last Updated 12 ಮೇ 2020, 9:39 IST
ರಚಿತಾ ರಾಮ್‌
ರಚಿತಾ ರಾಮ್‌   

‘ಬುಲ್ ‌ಬುಲ್‌’ ಚಿತ್ರದ ಮೂಲಕ ಬಣ್ಣದಲೋಕಕ್ಕೆ ಕಾಲಿಟ್ಟವರು ನಟಿ ರಚಿತಾ ರಾಮ್. ಅವರ ವೃತ್ತಿಬದುಕಿಗೆ ಈಗ ಏಳು ವರ್ಷ ತುಂಬಿದೆ. ಈ ಅವಧಿಯಲ್ಲಿ ವೈವಿಧ್ಯಮಯ ಪಾತ್ರಗಳಿಗೆ ಜೀವತುಂಬಿದ ಹೆಮ್ಮೆ ಅವರಲ್ಲಿದೆ. ಕನ್ನಡದ ಎಲ್ಲಾ ಸ್ಟಾರ್‌ ನಟರೊಟ್ಟಿಗೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಅವರದು. ಮತ್ತೊಂದೆಡೆ ಹೊಸಬರ ಚಿತ್ರಗಳಲ್ಲಿ ನಟನೆಗೂ ಅವರು ಹಿಂದಡಿ ಇಟ್ಟವರಲ್ಲ.

‘ನನ್ನ ಈ ಕಲಾ ಬದುಕಿಗೆ 7 ವರ್ಷಗಳು ತುಂಬಿದೆ ಅಂದ್ರೇ ನಂಬಕ್ಕೇ ಆಗ್ತಿಲ್ಲ...’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ ರಚಿತಾ. ‘ನನ್ನನ್ನ ಸಿನಿಮಾ ರಂಗಕ್ಕೆ ಪರಿಚಯ ಮಾಡಿಸಿದ ತೂಗುದೀಪ ಪ್ರೊಡಕ್ಷನ್ಸ್‌ಗೆ ಸದಾ ಚಿರಋಣಿಯಾಗಿರ್ತೀನಿ’ ಎಂದು ಕೃತಜ್ಞತೆ ಹೇಳುವುದನ್ನೂ ಈ ‘ಗುಳಿಗೆನ್ನೆ’ ಬೆಡಗಿ ಮರೆತಿಲ್ಲ.

‘ಬುಲ್ ಬುಲ್‌ನಿಂದ ಬೆಳ್ಳಿತೆರೆಗೆ ಇಟ್ಟ ಹೆಜ್ಜೆ ಇಂದಿಗೂ ಮಾಸಿಲ್ಲ. ಇದಕ್ಕೆ ಕಾರಣ ನನ್ನ ತಂದೆ– ತಾಯಿಯ ನಂಬಿಕೆ. ದೇವರ ಅನುಗ್ರಹ ಹಾಗೂ ನನ್ನ ಪ್ರೀತಿಯ ಅಭಿಮಾನಿಗಳ ಆಶೀರ್ವಾದ. ಈ ಪಯಣದಲ್ಲಿ ಕಲಿತ ಪಾಠಗಳು, ಅರಿತ ಮನಸುಗಳು, ಪ್ರತಿಯೊಂದು ಸಿನಿಮಾದ ನೆನಪುಗಳು ನೆನೆಸಿಕೊಂಡ್ರೆ ಕಣ್ತುಂಬಿ ಬರುತ್ತೆ’ ಎಂದು ಭಾವುಕರಾಗಿ ಹೇಳಿದ್ದಾರೆ.

ADVERTISEMENT

ಪ್ರಸ್ತುತ ರಚಿತಾ ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ನಟ ರಮೇಶ್‌ ಅರವಿಂದ್‌ ನಿರ್ದೇಶನದ ‘100’ ಸಿನಿಮಾದ ಶೂಟಿಂಗ್‌ ಪೂರ್ಣಗೊಂಡಿದೆ. ಇದರಲ್ಲಿ ರಮೇಶ್‌ ಅವರ ತಂಗಿಯಾಗಿ ರಚಿತಾ ಬಣ್ಣಹಚ್ಚಿದ್ದಾರೆ. ಪ್ರೇಮ್‌ ಆ್ಯಕ್ಷನ್‌ ಕಟ್‌ ಹೇಳಿರುವ ‘ಏಕ್‌ ಲವ್‌ ಯಾ’ ಸಿನಿಮಾಕ್ಕೂ ಅವರೇ ನಾಯಕಿ. ಇದರ ಪೋಸ್ಟ್‌ ಪ್ರೊಡಕ್ಷನ್‌ ನಡೆಯುತ್ತಿದೆ.

ಪುಲಿ ವಾಸು ನಿರ್ದೇಶನದ ತೆಲುಗಿನ ‘ದಿಸ್ ಪ್ರಾಪರ್ಟಿ ಬಿಲಾಂಗ್ಸ್ ಟು ಮೀನಾಕ್ಷಿ’ ಚಿತ್ರಕ್ಕೂ ರಚಿತಾ ಅವರೇ ಹೀರೊಯಿನ್. ಈ ಮೊದಲ ಇದಕ್ಕೆ ‘ಸೂಪರ್‌ ಮಚ್ಚಿ’ ಎಂಬ ಶೀರ್ಷಿಕೆ ಇಡಲಾಗಿತ್ತು. ‘ಮೆಗಾಸ್ಟಾರ್‌’ ಚಿರಂಜೀವಿ ಅವರ ಅಳಿಯ ಕಲ್ಯಾಣ್‌ ದೇವ್ ಇದರ ನಾಯಕ. ನಟ ರವಿಚಂದ್ರನ್ ನಿರ್ದೇಶಿಸುತ್ತಿರುವ ‘ರವಿ ಬೋಪಣ್ಣ’ ಚಿತ್ರದಲ್ಲೂ ಮುಖ್ಯಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ರಚಿತಾ ನಾಯಕಿಯಾಗಿ ನಟಿಸಲಿರುವ ‘ಡಾಲಿ’, ‘ಏಪ್ರಿಲ್’, ‘ವೀರಂ’, ‘ಸಂಜಯ್‌ ಅಲಿಯಾಸ್‌ ಸಂಜು’ ಚಿತ್ರಗಳ ಚಿತ್ರೀಕರಣ ಕಳೆದ ಮಾರ್ಚ್‌ನಿಂದ ಆರಂಭವಾಗಬೇಕಿತ್ತು. ಶೂಟಿಂಗ್‌ಗೆ ಕೊರೊನಾ ಭೀತಿ ತಟ್ಟಿದೆ. ಲಾಕ್‌ಡೌನ್‌ ಅವಧಿ ಪೂರ್ಣಗೊಂಡ ಬಳಿಕ ಈ ಸಿನಿಮಾಗಳ ಚಿತ್ರೀಕರಣ ಆರಂಭವಾಗುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.