ADVERTISEMENT

ಚಂದ್ರಹಾಸ ಸಿನಿಮಾ ತಯಾರಿ ಕಥೆ

​ಪ್ರಜಾವಾಣಿ ವಾರ್ತೆ
Published 15 ಜನವರಿ 2022, 23:58 IST
Last Updated 15 ಜನವರಿ 2022, 23:58 IST
ಚಂದ್ರಹಾಸ ಸಿನಿಮಾ
ಚಂದ್ರಹಾಸ ಸಿನಿಮಾ   

ಭಾರತದ ಮೊದಲ ವಾಕ್ಚಿತ್ರ ‘ಆಲಂ ಆರಾ’ 1930ರಲ್ಲಿ ತೆರೆಕಂಡಿತು. ಅದೇ ಸರಿಸುಮಾರಿಗೆ ತಮಿಳು, ತೆಲುಗಿನಲ್ಲೂ ವಾಕ್ಚಿತ್ರಗಳು ಸಿದ್ಧವಾದವು. ಕನ್ನಡದಲ್ಲಿ ಅಂತಹ ಚಿತ್ರ ನೋಡಲು ಮಾತ್ರ ಮತ್ತೆ ಮೂರು ವರ್ಷ ಕಾಯಬೇಕಾಯಿತು. ಚಿತ್ರೀಕರಣ ಮೊದಲೇ ಪ್ರಾರಂಭವಾದರೂ ‘ಭಕ್ತ ಧ್ರುವ’ ತೆರೆಕಾಣಲು ತಡವಾಯಿತು. ‘ಸತಿ ಸುಲೋಚನಾ’ (1934) ತೆರೆಗೆ ಬಂದ ಪ್ರಥಮ ವಾಕ್ಚಿತ್ರವೆಂಬ ಹೆಗ್ಗಳಿಕೆ ಪಡೆಯಿತು. ‘ಸತಿ ಸುಲೋಚನಾ’, ‘ಭಕ್ತ ಧ್ರುವ’ಗಳು ‘ಮಾತನಾಡಿ’ ಇತಿಹಾಸ ಸೃಷ್ಟಿಸಿದವು.

ಪ್ರಾರಂಭದಲ್ಲಿ ಮೂಕಿ ಚಿತ್ರಗಳು ಬರುತ್ತಿದ್ದವು; ಅವುಗಳನ್ನು ಪ್ರದರ್ಶಿಸುತ್ತಿದ್ದ ಚಿತ್ರಮಂದಿರಗಳೇ ಮಾತನಾಡುವ ಚಿತ್ರಗಳನ್ನೂ ಪ್ರದರ್ಶಿಸಬೇಕಿತ್ತು. ಒಮ್ಮೆಲೇ ಪುಂಖಾನುಪುಂಖವಾಗಿ ಮಾತನಾಡುವ ಚಿತ್ರಗಳೇನೂ ಸಿದ್ಧವಾಗಲಿಲ್ಲ. ಮೂಕಿ ಚಿತ್ರಗಳ ವೇಗಕ್ಕೂ ಟಾಕಿ ಚಿತ್ರಗಳ ವೇಗಕ್ಕೂ ವ್ಯತ್ಯಾಸವಿತ್ತು. ಅದರಿಂದಾಗಿ ಮಾತು, ದೃಶ್ಯಗಳನ್ನು ಜೋಡಿಸುವಾಗ ವ್ಯತ್ಯಾಸವಾಗುತ್ತಿತ್ತು. ಅಲ್ಲದೆ, ಟಾಕಿ ಚಿತ್ರಗಳಿಗೆ ಚಿತ್ರಮಂದಿರಗಳೂ ತಾಂತ್ರಿಕವಾಗಿ ಸಿದ್ಧವಾಗಬೇಕಿತ್ತು. ಸೌಂಡ್‍ಬಾಕ್ಸ್ ಇತ್ಯಾದಿ ಪರಿಕರಗಳನ್ನು ಅಳವಡಿಸಬೇಕಿತ್ತು.

ಬಹುತೇಕ ರಂಗಭೂಮಿಯ ನಟ-ನಟಿಯರು ಆ ಸಂದರ್ಭದಲ್ಲಿ ಚಿತ್ರರಂಗಕ್ಕೆ ವಲಸೆ ಬಂದರು. ಟಾಕಿ ಚಿತ್ರಗಳು ಪ್ರಾರಂಭವಾದ ಮೇಲೆ ಕಥೆ ಹೇಳುವ ರೀತಿ ಸಹ ಬದಲಾಯಿತು. ಸಂಭಾಷಣೆ, ಹಾಡುಗಳ ಉಪಯೋಗ ಎಲ್ಲವೂ ಒಂದೊಂದು ಪ್ರಯೋಗವೇ ಎಂಬಂತೆ ಬಳಕೆಯಾಗತೊಡಗಿದವು. ಬಹುತೇಕ ಪೌರಾಣಿಕ ವಸ್ತುವನ್ನೇ ಆಯ್ದುಕೊಳ್ಳುತ್ತಿದ್ದರು. ನೇರವಾಗಿ ರಾಮಾಯಣ-ಮಹಾಭಾರತ ಮಹಾಕಾವ್ಯಗಳನ್ನು ತೆಗೆದುಕೊಳ್ಳದೇ ಅವುಗಳ ಗರ್ಭದಲ್ಲಿರುವ ಉಪಕಥೆಗಳನ್ನು ಚಲನಚಿತ್ರಕ್ಕೆ ವಸ್ತುವಾಗಿಸಿಕೊಂಡರು. ಸಾಮಾನ್ಯವಾಗಿ ಎಲ್ಲ ವೃತ್ತಿರಂಗಭೂಮಿಯಲ್ಲೂ ಇಂಥ ವಸ್ತು ಇರುವ ನಾಟಕ ಪ್ರಯೋಗವೇ ಯಶಸ್ವಿ ಆಗುತ್ತಿತ್ತು. ರಾಮಾಯಣ-ಮಹಾಭಾರತದ ಅತೀ ದೀರ್ಘ ಕಥಾ ಭಾಗಕ್ಕಿಂತ ಉಪಕಥೆಗಳನ್ನು ರಚಿಸಿ ಹೇಳುತ್ತಿದ್ದ ವಿಧಾನವೇ ಹೆಚ್ಚಾಗಿ ಚಲಾವಣೆಯಲ್ಲಿತ್ತು. ಅಂದಿನ ರಂಗಭೂಮಿಯ ನಕ್ಷತ್ರಗಳೇ ಚಲನಚಿತ್ರಕ್ಕೂ ಅನಿವಾರ್ಯವಾದರು.

ADVERTISEMENT

1936ರಲ್ಲೇ ಧಾರವಾಡದ ಕರ್ನಾಟಕ ಟಾಕೀಸ್‌ನ ಮುಧೋಳ್ಕರ ಸಹೋದರರು ದೇವುಡು ಅವರಿಂದ ರಚಿತವಾದ ‘ಮಾರ್ಕಂಡೇಯ’ ನಾಟಕವನ್ನು ‘ಚಿರಂಜೀವಿ’ ಹೆಸರಿನಲ್ಲಿ ಚಲನಚಿತ್ರ ಮಾಡಿದರು. 1937ರಲ್ಲಿ ‘ಚಿರಂಜೀವಿ’ ತೆರೆಗೆ ಬಂತು. ಇದು ಉತ್ತರ ಕರ್ನಾಟಕದವರು ನಿರ್ಮಿಸಿದ ಮೊಟ್ಟಮೊದಲ ಕನ್ನಡ ಚಿತ್ರ. 1947ರಲ್ಲಿ ಉತ್ತರ ಕರ್ನಾಟಕದವರಿಂದ ನಿರ್ಮಿತ ಎರಡನೆಯ ಕನ್ನಡ ಚಿತ್ರ ಮತ್ತು ಶಾಂತೇಶ ಪಾಟೀಲ ನಿರ್ದೇಶಿತ ಮೊಟ್ಟಮೊದಲ ಕನ್ನಡ ಚಿತ್ರ ‘ಚಂದ್ರಹಾಸ’ ಬಿಡುಗಡೆಗೊಂಡಿತು.

ಪಂಪಾ ಪಿಕ್ಚರ್ಸ್ ಅಡಿ ನಿರ್ಮಾಣಗೊಂಡ ಮೊಟ್ಟಮೊದಲ ಚಿತ್ರವಿದು. ಉತ್ತರ ಕರ್ನಾಟಕದ ಹಲವಾರು ಹೊಸ ಪ್ರತಿಭೆಗಳು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಪುಣೆಯ ಆರ್ಕೈವ್‍ನಲ್ಲಿದ್ದ ಈ ಚಿತ್ರದ ನೆಗೆಟಿವ್ ನೈಟ್ರೇಟ್ ಬಳಕೆಯ ಕಾರಣ ಹಾಗೂ ಅಂದಿನ ದಿನಗಳಲ್ಲಿ ನೆಗೆಟಿವ್ ರೋಲ್‍ಗಳ ಸಂರಕ್ಷಣೆಯ ತಾಂತ್ರಿಕತೆಗಳು ಬೆಳೆಯದಿದ್ದ ಕಾರಣ ಎಂದೋ ಹಾಳಾಗಿ ಹೋಗಿದೆ. ಚಿತ್ರ ನೋಡೋಣವೆಂದರೆ ಅತ್ತ ನೆಗೆಟಿವ್ ಇಲ್ಲ, ಇತ್ತ ಹಾಕಿದ ಹನ್ನೊಂದು ಪ್ರಿಂಟ್‍ಗಳೂ ಇಲ್ಲ!

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಿರೇಬೇವನೂರು ಗ್ರಾಮದ ಭೌತಶಾಸ್ತ್ರ ಸ್ನಾತಕೋತ್ತರ ಪದವೀಧರ ಶಾಂತೇಶ ಪಾಟೀಲರು ಮುಂಬೈನ ಸಾಗರ್ ಮೂವಿಟೋನ್‌ನಲ್ಲಿ ಸರ್ವೋತ್ತಮ ಬಾದಾಮಿಯವರೊಂದಿಗೆ ಧ್ವನಿಗ್ರಾಹಕರಾಗಿ ಕೆಲಸ ಮಾಡಿದವರು.

ಬಿ.ಡಿ.ಜತ್ತಿಯವರೊಂದಿಗೆ ಶಾಂತೇಶ ಪಾಟೀಲ, ಬಿ.ವಿ. ಭೂಮರೆಡ್ಡಿ ಮತ್ತಿತರ ಗಣ್ಯರು ಸೇರಿ ಪಂಪಾ ಪಿಕ್ಚರ್ಸ್ ಲಿಮಿಟೆಡ್ ಹುಟ್ಟುಹಾಕಿದರು. ಅದರ ಮೊದಲ ಕಾಣಿಕೆ ಚಂದ್ರಹಾಸ.

ಸುಮಾರು ನಾಲ್ಕೈದು ವರ್ಷಗಳಿಂದ ಈ ಚಿತ್ರ ಸಮಗ್ರ ಶೋಧಕಾರ್ಯದಲ್ಲಿ ಮುಳುಗಿದ್ದ ನನಗೆ ಹಲವು ರೋಚಕ ಮಾಹಿತಿಗಳು ಸಿಕ್ಕವು. ಶಾಂತೇಶ ಪಾಟೀಲರ ಪುತ್ರಿ ಜಯಶ್ರೀ ಸಿಕ್ಕೆದೇಸಾಯಿಯವರಿಂದ ಚಂದ್ರಹಾಸದ ಶೂಟಿಂಗ್‍ನ ಫೋಟೊಗಳು, ಹಂದಿಗನೂರು ಸಿದ್ರಾಮಪ್ಪ ಇವರ ಮೊಮ್ಮಗ ಭೀಮಸಿಂಗ್‌ ರಜಪೂತ ಅವರಿಂದ ಪಂಪಾ ಪಿಕ್ಚರ್ಸ್‍ನ ಲೆಟರ್‍ಹೆಡ್ ಸಿಕ್ಕವು. ಈ ಚಿತ್ರದ ಮುಖ್ಯನಟ ವಿಕಾಸ ಶಹಾರ ಪುತ್ರಿ ಕೋಮಲ್ ಅವರಿಂದ ಚಲನಚಿತ್ರದ ವಿಶೇಷ ಫೋಟೊಗಳು, ಬಾಲಪಾತ್ರಧಾರಿ ಚಂದ್ರಶೇಖರ ಮೋದಗಿಯವರ ಪುತ್ರ ಟಿ.ಸಿ. ಮೋದಗಿಯವರಿಂದ ಪದ್ಯಾವಳಿ ಪುಸ್ತಿಕೆ ದೊರೆಯಿತು.

ಮಲ್ಲಿಕಾರ್ಜುನ ಮನ್ಸೂರ, ನಲವಡಿ ಶ್ರೀಕಂಠ ಶಾಸ್ತ್ರಿ, ಅಮೀರ್‌ಬಾಯಿ ಕರ್ನಾಟಕಿ, ಎನ್ಕೆ ಕುಲಕರ್ಣಿ, ಸಿದ್ರಾಮಪ್ಪ ಹಂದಿಗನೂರ ಅವರಂತಹ ಘಟಾನುಘಟಿಗಳು ಈ ಚಿತ್ರಕ್ಕೆ ಕೈಜೋಡಿಸಿದ್ದು ಈಗ ಇತಿಹಾಸ.

‘ಚಂದ್ರಹಾಸ’ನ ಪ್ರವರ

* ಚಿತ್ರ ತಯಾರಿಸಿದ ಸಂಸ್ಥೆ: ಪಂಪಾ ಪಿಕ್ಚರ್ಸ್ ಲಿಮಿಟೆಡ್ (ಬಾಂಬೆ)

* ಸ್ಥಾಪನೆ: 1946, ಅಧಿಕೃತ ಬಂಡವಾಳ- ₹ 10,00,000, ಸ್ವೀಕೃತ ಬಂಡವಾಳ- ₹ 5,00,000.

* ನಿರ್ದೇಶಕ ಮಂಡಳಿಯ ಸದಸ್ಯರು: ರಾವಬಹದ್ದೂರ ಕೆ.ಬಿ.ಭದ್ರಾಪುರ–ಚೇರಮನ್, ಬಿ.ವಿ.ಭೂಮರೆಡ್ಡಿ, ಎಸ್.ಐ.ಗುತ್ತಿಗೋಳಿ, ಎಸ್.ಎಸ್.ಯಳಮೇಲಿ, ಡಾ ಬಿ.ಎಸ್.ಜೀರಗೆ, ಡಾ. ಎಸ್.ಬಿ.ಪಾಟೀಲ, ಬಿ.ವಿ.ಜಕಾತಿ, ಶಾಂತೇಶ ಪಾಟೀಲ-ಮ್ಯಾನೇಜಿಂಗ್ ಡೈರೆಕ್ಟರ್.
ಪಂಪಾ ಪಿಕ್ಚರ್ಸ್ ಪ್ರಧಾನ ಕಚೇರಿ: 16, ಸಿಯಾನ್,ಮಾತುಂಗಾ ಎಸ್ಟೇಟ್, ಸಿಯಾನ್, ಬಾಂಬೆ-22, ವಿತರಣಾ ಕಚೇರಿಗಳು: 1) ರಿಸಾಲ್ದಾರ್ ಲೇನ್, ಬೆಳಗಾಂ, 2) ಅಬ್ಬಾಸ್ ಬಿಲ್ಡಿಂಗ್, 11, ಕಾಕ್‍ಬರ್ನ್ ರೋಡ್, ಬೆಂಗಳೂರು.

* ಚಿತ್ರದ ತಾಂತ್ರಿಕ ವರ್ಗ:

* ನಿರ್ಮಾತೃ-ದಿಗ್ದರ್ಶಕ: ಶಾಂತೇಶ ಪಾಟೀಲ, ಕಥೆ: ಲಕ್ಷ್ಮೀಶ ಮಹಾಕವಿಯ ಜೈಮಿನಿ ಭಾರತ, ಚಿತ್ರಕಥೆ: ಶಾಂತೇಶ ಪಾಟೀಲ, ಕಥಾರೂಪಣ-ಸಂವಾದ: ಎನ್ಕೆ ಕುಲಕರ್ಣಿ, ಗೀತೆಗಳು: ನಲವಡಿ ಶ್ರೀಕಂಠ ಶಾಸ್ತ್ರಿ ಮತ್ತು ಗಂಗಾಧರ ವಾಲಿ, ಸಂಗೀತ: ಸಂಗೀತರತ್ನ ಮಲ್ಲಿಕಾರ್ಜುನ ಮನ್ಸೂರ, ನೃತ್ಯ: ಲಕ್ಷ್ಮೀನಾರಾಯಣ ಭಾರ್ಗವ, ಕಲೆ: ಜನಾರ್ಧನ ಗೋಂಧಳೇಕರ, ಛಾಯಾಲೇಖನ: ವಾಸುದೇವ ಕರ್ನಾಟಕಿ, ಧ್ವನಿಲೇಖನ: ವಿರೂಪಾಕ್ಷ ಜಿ. ಪಾಟೀಲ (ಹುಬ್ಬಳ್ಳಿ), ಚಿತ್ರಸಂಕಲನ: ಶಿವಾಜಿ ಅವಧೂತ, ಚಿತ್ರ ಕಲೆಗಾರರು: ಶಂತನು ಮಾಳಿ, ವ್ಯವಸ್ಥಾಪಕರು: ಜಯವಂತ ಭಂಡಾರಕರ ಮತ್ತು ಗುರುಪಾದ ಕೊಂಗಿ

* ಚಂದ್ರಹಾಸ ಕಲಾವಿದರು:

* ವಿಕಾಸ ಶಹಾ (ಚಡಚಣ), ತಿಲೋತ್ತಮ (ಬಿ.ಶಾರದಾ/ ವೈಶಾಲಿ ಕಾಸರವಳ್ಳಿಯವರ ಚಿಕ್ಕಮ್ಮ), ಸಿದ್ರಾಮಪ್ಪ ಹಂದಿಗನೂರ (ವಿಜಯಪುರ), ಅಮೀರ್‌ಬಾಯಿ ಕರ್ನಾಟಕಿ, ಎಂ.ನಾಗೇಂದ್ರ, ಶ್ಯಾಮಲಾ, ಕೆ.ಪಿ.ರಾವ್, ಮಾಧವಿ, ಚಂದ್ರಶೇಖರ ಮೋದಗಿ, ಲಲಿತಾ, ಕುಮುದ, ಶಶಿಧರ ಪಾಟೀಲ ಮತ್ತು ರವಿ ಪಾಟೀಲ (ಶಾಂತೇಶ ಪಾಟೀಲರ ಮಕ್ಕಳು), ವತ್ಸಲಾ, ಮೋಹನ ಕಿತ್ತೂರ, ಯಮುನಾಮೂರ್ತಿ (ಯಾಮಿನಿ), ಎ.ಜಿ.ನೀಲಗಾರ (ಧಾರವಾಡ)

* ಗಾಯಕರು: ಅಮೀರ್‌ಬಾಯಿ ಕರ್ನಾಟಕಿ, ಜೋಳದರಾಶಿ ದೊಡ್ಡನಗೌಡ, ವಿಜಯಾ ದೇಸಾಯಿ, ಹಂದಿಗನೂರು ಸಿದ್ರಾಮಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.