ಕುಪ್ಪಂಡಾಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಕೋಮಲ್ ನಟನೆಯ ‘ಕೋಣ’ ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಚಿತ್ರವು ಅ.31ರಂದು ತೆರೆಕಾಣಲಿದೆ.
‘ಬಿಗ್‌ಬಾಸ್’ ಖ್ಯಾತಿಯ ತನಿಷಾ ಕುಪ್ಪಂಡ, ಕಾರ್ತಿಕ್ ಕಿರಣ್ ಸಂಕಪಾಲ್, ರವಿಕಿರಣ್ ಎನ್. ನಿರ್ಮಾಣ ಮಾಡಿರುವ ಈ ಸಿನಿಮಾದಲ್ಲಿ ‘ಲಕ್ಷ್ಮಿ’ ಎಂಬ ಪಾತ್ರದಲ್ಲಿ ತನಿಷಾ ನಟಿಸಿದ್ದಾರೆ. ‘ಕೋಣ ಎನ್ನುವ ಪದ ಚಿಕ್ಕ ವಯಸ್ಸಿನಿಂದ ಎಲ್ಲರಿಗೂ ಕನೆಕ್ಟ್ ಆಗಿರುತ್ತದೆ. ನಾನು ಶಾಲೆಯಲ್ಲಿ ಓದಬೇಕಾದರೆ ನಮ್ಮ ಟೀಚರ್ ‘ಕೋಣ’ ಎಂದೇ ಬೈಯುತ್ತಿದ್ದರು. ನನಗೆ ಆಗ ಕೋಪ ಬರುತ್ತಿತ್ತು. ಈಗ ‘ಕೋಣ’ ಎನ್ನುವುದೇ ಶೀರ್ಷಿಕೆಯಾಗಿದೆ. ಈ ಚಿತ್ರ ನನಗೆ ತೃಪ್ತಿ ಕೊಟ್ಟಿದೆ’ ಎನ್ನುತ್ತಾರೆ ಕೋಮಲ್.
ತನಿಷಾ ಕುಪ್ಪಂಡ ಮಾತನಾಡಿ, ‘ಸಿನಿಮಾದಲ್ಲಿ ಕೋಮಲ್ ಅವರು ‘ನಾರಾಯಣ’ ಎಂಬ ಪಾತ್ರ ಮಾಡಿದ್ದು, ಅವರ ಪತ್ನಿಯಾಗಿ ನಾನು ನಟಿಸಿದ್ದೇನೆ. ಬಹಳ ಭಿನ್ನವಾದ ಪಾತ್ರ ನನಗಿಲ್ಲಿದೆ. ನಿರ್ಮಾಪಕಿಯಾಗಿಯೂ ಹೊಸ ಹೆಜ್ಜೆಯನ್ನು ಇಡುತ್ತಿದ್ದೇನೆ’ ಎಂದರು.
ಕೀರ್ತಿರಾಜ್, ರಿಥ್ವಿ ಜಗದೀಶ್, ರಘು ರಾಮನಕೊಪ್ಪ, ವಿಜಯ್ ಚೆಂಡೂರ್, ಎಂ.ಕೆ.ಮಠ್, ರಂಜಿತ್ ಗೌಡ, ತುಕಾಲಿ ಸಂತೋಷ್, ಹುಲಿ ಕಾರ್ತಿಕ್, ನಿರಂಜನ್, ಅನಂತ್, ಶಿಶಿರ್ ಶಾಸ್ತ್ರಿ, ಗೋಲ್ಡ್ ಸುರೇಶ್, ಸುಷ್ಮಿತ, ಜಗಪ್ಪ, ಮಂಜು ಪಾವಗಡ, ಕುರಿ ಸುನಿಲ್, ನಮ್ರತಾ ಗೌಡ, ವಿನಯ್ ಗೌಡ, ಮೋಹನ್ ಕೃಷ್ಣರಾಜ್ ಹೀಗೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಡಾರ್ಕ್ ಕಾಮಿಡಿ ಜಾನರ್‌ನಲ್ಲಿರುವ ಈ ಸಿನಿಮಾವನ್ನು ಹರಿಕೃಷ್ಣ ನಿರ್ದೇಶಿಸಿದ್ದಾರೆ ಮಾಡುತ್ತಿದ್ದಾರೆ. ಒಂದು ನೈಜ ಘಟನೆಯನ್ನು ಆಧರಿಸಿ ಈ ಚಿತ್ರ ತಯಾರಾಗಿದೆ ಎಂದಿದೆ ಚಿತ್ರತಂಡ.
ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನ, ವೀನಸ್ ನಾಗರಾಜ ಮೂರ್ತಿ ಛಾಯಾಚಿತ್ರಗ್ರಹಣ, ಉಮೇಶ್ ಆರ್.ಬಿ. ಸಂಕಲನ, ವಿನೋದ್ ಕುಮಾರ್ ಸಾಹಸ ನಿರ್ದೇಶನ, ಮುರುಗ ಮಾಸ್ಟರ್ ನೃತ್ಯ ನಿರ್ದೇಶನ, ಶಶಿಕುಮಾರ್ ಸಂಭಾಷಣೆ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.