ದಸ್ಕತ್ ಚಿತ್ರದ ದೃಶ್ಯ
ಈ ವರ್ಷ ಜನವರಿ–ಫೆಬ್ರುವರಿಯಲ್ಲಿ ಸಿನಿಮಾ ಬಿಡುಗಡೆಗೆ ಚಿತ್ರಮಂದಿರಗಳೇ ಸಿಗುತ್ತಿರಲಿಲ್ಲ. ಅಷ್ಟು ಚಿತ್ರಗಳು ತೆರೆಗೆ ಅಪ್ಪಳಿಸಿದ್ದವು. ಆದರೆ ಕಳೆದ ಒಂದು ತಿಂಗಳಿಂದ ಸರಿಯಾದ ಸಿನಿಮಾಗಳೇ ಇಲ್ಲದೇ ಚಿತ್ರಮಂದಿರಗಳು ಬಿಕೋ ಎನ್ನುತ್ತಿವೆ. ಈ ನಡುವೆ ‘ನಾಳೆ ರಜಾ ಕೋಳಿ ಮಜಾ’ ಸೇರಿದಂತೆ ನಾಲ್ಕು ಚಿತ್ರಗಳು ಈ ವಾರ ತೆರೆ ಕಾಣುತ್ತಿವೆ.
ಸೂತ್ರಧಾರಿ
ಗಾಯಕ ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವ ಮೊದಲ ಚಿತ್ರ ‘ಸೂತ್ರಧಾರಿ’. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಕಿರಣ್ ಕುಮಾರ್ ನಿರ್ದೇಶಿಸಿದ್ದಾರೆ. ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ನವರಸನ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.
‘40 ಜನರಿಗೆ ಈ ಸಿನಿಮಾ ತೋರಿಸಿ ಅವರ ಅಭಿಪ್ರಾಯಗಳನ್ನು ಪಡೆದುಕೊಂಡು ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಂಡು ಅಂತಿಮ ಸಿನಿಮಾ ಪ್ರತಿ ಸಿದ್ಧಪಡಿಸಲಾಗಿದೆ’ ಎಂದಿದ್ದಾರೆ ನವರಸನ್.
ನಾಯಕಿಯಾಗಿ ಅಪೂರ್ವ ನಟಿಸಿದ್ದಾರೆ. ಸಂಜಯ್ ಗೌಡ, ‘ನಟನ’ ಪ್ರಶಾಂತ್, ಲೋಹಿತ್, ರಮೇಶ್ ಮಾಸ್ಟರ್, ಗಣೇಶ್ ನಾರಾಯಣ್ ತಾರಾಬಳಗದಲ್ಲಿದ್ದಾರೆ.
‘ನಾನು ಅಂಡರ್‌ಕವರ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದೇನೆ. ಚಿತ್ರದ ಆರಂಭದಲ್ಲಿ ಈತ ಓರ್ವ ಸೋಮಾರಿ ಪೊಲೀಸ್ ಅಧಿಕಾರಿ. ಪ್ರಕರಣಗಳ ತನಿಖೆಗೆ ಬೇಕಾದ ಬುದ್ಧಿವಂತಿಕೆ ಇದ್ದರೂ ಬಳಸದೇ ಇರುವ ಯುವ ಅಧಿಕಾರಿ. ಹೀಗಿರುವಾಗ ಕಾರಣವಿಲ್ಲದೇ ಸರಣಿ ಆತ್ಮಹತ್ಯೆಗಳು ನಡೆಯುತ್ತವೆ. ಇವುಗಳು ಆತ್ಮಹತ್ಯೆಯಲ್ಲ ಕೊಲೆ ಎಂದು ಪತ್ತೆ ಹಚ್ಚುವ ಈತ ಇವುಗಳ ತನಿಖೆ ಆರಂಭಿಸುತ್ತಾನೆ. ಈ ಸಂದರ್ಭದಲ್ಲಿ ಎದುರಾಗುವ ಕಷ್ಟಗಳು, ಗೊಂದಲವೇ ಚಿತ್ರದ ಕಥೆ’ ಎಂದು ಚಂದನ್ ಶೆಟ್ಟಿ ಹೇಳಿದ್ದಾರೆ.
ಚಂದನ್ ಶೆಟ್ಟಿಯೇ ಸಂಗೀತ ನೀಡಿದ್ದಾರೆ. ಪಿ.ಕೆ.ಹೆಚ್ ದಾಸ್ ಛಾಯಾಚಿತ್ರಗ್ರಹಣ, ಸತೀಶ್ ಚಂದ್ರ ಸಂಕಲನ ಚಿತ್ರಕ್ಕಿದೆ.
ದಸ್ಕತ್
ತುಳುವಿನಲ್ಲಿ ಬಿಡುಗಡೆಗೊಂಡು ಪ್ರಶಂಸೆ ಗಳಿಸಿದ್ದ ಚಿತ್ರವಿದು. ಚಿತ್ರೋತ್ಸವಗಳಲ್ಲಿ ಪ್ರಶಸ್ತಿಯನ್ನೂ ಪಡೆದ ಚಿತ್ರ ಕನ್ನಡದಲ್ಲಿ ಡಬ್ ಆಗಿ ತೆರೆ ಕಾಣುತ್ತಿದೆ. ಅನೀಶ್ ಪೂಜಾರಿ ವೇಣೂರು ನಿರ್ದೇಶನವಿದೆ.
‘ದಸ್ಕತ್ ಎಂದರೆ ಸಹಿ ಮಾಡುವುದು ಎಂಬ ಅರ್ಥ. ಒಂದು ಹಳ್ಳಿಯಲ್ಲಿ ಜನ ಸಹಿಗಾಗಿ ಎಷ್ಟು ಕಷ್ಟಪಡುತ್ತಾರೆ, ಒಂದು ಸಹಿಯಿಂದ ಏನೆಲ್ಲ ಅವಾಂತರ ಸೃಷ್ಟಿಯಾಗುತ್ತದೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ಶ್ರೀಮಂತರು, ಬಡವರು ಹಾಗೂ ಅಧಿಕಾರಿಗಳ ನಡುವಿನ ತಳಮಳದ ಜೊತೆಗೆ ಬದುಕು ಹೇಗೆಲ್ಲ ಸಾಗುತ್ತದೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಮಾಡಿದ್ದೇವೆ. ಕರಾವಳಿ ಭಾಗದ ಸುತ್ತ ಚಿತ್ರೀಕರಿಸಿರುವ ನಮ್ಮ ಈ ಚಿತ್ರ ತುಳುವಿನಲ್ಲಿ ಬಿಡುಗಡೆಗೊಂಡು 70 ದಿನ ಪೂರೈಸಿತ್ತು’ ಎಂದಿದ್ದಾರೆ ನಿರ್ದೇಶಕರು.
ದೀಕ್ಷಿತ್ ಚಿತ್ರದ ನಾಯಕ. ಮೋಹನ್ ಶೇಣಿ, ಭವ್ಯ ಪೂಜಾರಿ, ಹಾಸ್ಯ ನಟ ದೀಪಕ್ ರೈ ಪಾಣಾಜೆ ಮುಂತಾದವರು ತಾರಾಗಣದಲ್ಲಿದ್ದಾರೆ. ಸೆವೆಂಟಿ ಸೆವೆನ್ ಸ್ಟುಡಿಯೋಸ್ ಅಡಿ ರಾಘವೇಂದ್ರ ಕುಡ್ವ ನಿರ್ಮಾಣ ಮಾಡಿದ್ದು, ಸಂತೋಷ್ ಆಚಾರ್ಯ ಗುಂಪಲಾಜೆ ಛಾಯಾಚಿತ್ರಗ್ರಹಣ ಹಾಗೂ ಗಣೇಶ್ ನೀರ್ಚಾಲ್ ಸಂಕಲನವಿದೆ.
ವಿಕ್ಕಿ
ಮಧ್ಯಮ ವರ್ಗದ ಯುವಕನ ಕನಸುಗಳ ಕುರಿತಾದ ಕಥೆಯನ್ನು ಹೊಂದಿರುವ ಚಿತ್ರವಿದು. ದೀಪಕ್ ಎಸ್ ಅವಂದಕರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಕೇಸರಿ ನಂದನ ಸಿನಿಕ್ರಿಯೇಷನ್ಸ್ ಲಾಂಛನದಲ್ಲಿ ನವನೀತ್ ಲಕ್ಷ್ಮಿ, ಕೆ.ಆರ್. ಸುರೇಶ್ ಬಂಡವಾಳ ಹೂಡಿದ್ದಾರೆ.
‘ವಿಕ್ಕಿ ಕಾಮಿಡಿ ಜಾನರ್ ಚಿತ್ರ. ಮಿಡಲ್ ಕ್ಲಾಸ್ ಹುಡುಗನೊಬ್ಬ ದೊಡ್ಡ ಕನಸು ಕಂಡು, ಅದನ್ನು ನನಸು ಮಾಡಿಕೊಳ್ಳಲು ಹೋದಾಗ ಏನೆಲ್ಲ ಆಗಬಹುದು ಎಂಬುದನ್ನು ಹಾಸ್ಯಮಯವಾಗಿ ಹೇಳುವ ಪ್ರಯತ್ನ ಮಾಡಿದ್ದೇವೆ. ಬೆಂಗಳೂರು, ಚಿಕ್ಕಮಗಳೂರು ಸುತ್ತಮುತ್ತ ಚಿತ್ರವನ್ನು ಚಿತ್ರೀಕರಿಸಿದ್ದೇವೆ’ ಎನ್ನುತ್ತಾರೆ ನಿರ್ದೇಶಕರು.
ಭರತ್ ತಾಳಿಕೋಟೆ ನಾಯಕ. ವಿಂಧ್ಯಾ ಹೆಗಡೆ, ವರುಣ್ ದೇವಯ್ಯ ಮೊದಲಾದವರು ಚಿತ್ರದಲ್ಲಿದ್ದಾರೆ. ಆರವ ರಿಶಿಕ್ ಸಂಗೀತ ಚಿತ್ರಕ್ಕಿದೆ.
ಚಂದನ್, ಸಂಜನಾ ಆನಂದ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.