
ಮಂಜುಕವಿ ನಿರ್ದೇಶನದ ‘ತಿಕ್ಲು ರಾಮ’ ಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ. ನಟ ಚೇತನ್ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.
‘ಚಿತ್ರರಂಗ ಅಭಿವೃದ್ದಿ ಹೊಂದಬೇಕಾದರೆ ಕ್ರಿಯಾಶೀಲರು ಹೆಚ್ಚಾಗಬೇಕು. ಅಂಥ ತಂಡವನ್ನು ಇಟ್ಟುಕೊಂಡು ಮಂಜುಕವಿ ಸಿನಿಮಾ ಮಾಡುತ್ತಿದ್ದಾರೆ. ಶೀರ್ಷಿಕೆ ಹಾಸ್ಯಮಯವಾಗಿದ್ದರೂ ಸಮಾಜಕ್ಕೆ ಸಂದೇಶ ನೀಡುವ, ಕೌಟುಂಬಿಕ ಹಾಗೂ ಭಾವನಾತ್ಮಕ ವಿಷಯಗಳನ್ನು ಹೊಂದಿರುವ ಚಿತ್ರವನ್ನು ಮಾಡಲು ಈ ತಂಡ ಹೊರಟಿದೆ’ ಎಂದರು ಚೇತನ್.
ಶೃತಿ.ಜಿ.ಬಿ ಮತ್ತು ಕೋಮಲ ನಟರಾಜು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ರಾಜ್‌ವೀರ್, ಸಂಗೀತ, ಮಿತ್ರ, ಭಾಗ್ಯಶ್ರೀ, ಶೃತಿ.ಬಿ, ಗೋವಿಂದೇಗೌಡ, ವಿನೋದ್ ಗೊಬ್ಬರಗಾಲ, ಸುಚೇಂದ್ರ ಪ್ರಸಾದ್ ಮುಂತಾದವರು ತಾರಾಗಣದಲ್ಲಿದ್ದಾರೆ.
‘ಚಿತ್ರದಲ್ಲಿ ಪರಿಸರ, ಸಾಮಾಜಿಕ ಕಳಕಳಿ, ಒಟ್ಟು ಕುಟುಂಬದ ಕುರಿತಾದ ಅಂಶಗಳು ಇರಲಿವೆ. ಸೈಲೆಂಟ್ ಆಗಿದ್ದರೆ ರಾಮ, ಕೊಡಲಿ ಹಿಡಿದರೆ ತಿಕ್ಲು ರಾಮ. ಹಾಗಂತ ರಕ್ತಪಾತವನ್ನು ವೈಭವಿಕರಿಸುವುದಿಲ್ಲ. ಹಾಸನ ಸುತ್ತಮುತ್ತ ಚಿತ್ರೀಕರಣ ನಡೆಸುವ ಯೋಚನೆಯಿದೆ’ ಎಂದರು ನಿರ್ದೇಶಕ.
ವಿನು ಮನಸು ಹಿನ್ನೆಲೆ ಸಂಗೀತ, ರಾಜ್ ಕಡೂರು-ನಾಗರಾಜಮೂರ್ತಿ ಛಾಯಾಚಿತ್ರಗ್ರಹಣ, ವೆಂಕಿ.ಯುಡಿವಿ ಸಂಕಲನ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.