ADVERTISEMENT

ಈ ವಾರ ಐದು ಸಿನಿಮಾಗಳು ತೆರೆಗೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 1:28 IST
Last Updated 11 ಜುಲೈ 2025, 1:28 IST
<div class="paragraphs"><p>ದೂರ ತೀರ ಯಾನ</p></div>

ದೂರ ತೀರ ಯಾನ

   

ದೂರ ತೀರ ಯಾನ: ನಿರ್ದೇಶಕ ಮಂಸೋರೆ ಅವರ ಸಿನಿಮಾವಿದು. ಡಿ.ಕ್ರಿಯೇಷನ್ಸ್‌ನ ದೇವರಾಜ್‌ ಆರ್‌. ನಿರ್ಮಾಣ ಮಾಡಿರುವ ಈ ಸಿನಿಮಾ ಟ್ರಾವೆಲಿಂಗ್‌ ಸ್ಟೋರಿ ಹೊಂದಿದೆ. ಬೆಂಗಳೂರಿನಿಂದ ಗೋವಾಕ್ಕೆ ಹೊರಟ ನಾಯಕ–ನಾಯಕಿ ತಮ್ಮ ಪ್ರೀತಿಯನ್ನು ಕಂಡುಕೊಳ್ಳುವ ಕಥೆ ಇದಾಗಿದೆ. ಇದೊಂದು ಮ್ಯೂಸಿಕಲ್‌ ಜರ್ನಿ ಸಿನಿಮಾವಾಗಿದ್ದು ಚಿತ್ರದಲ್ಲಿ ವಿಜಯ್ ಕೃಷ್ಣ ನಾಯಕರಾಗಿ ಹಾಗೂ ಪ್ರಿಯಾಂಕ ಕುಮಾರ್ ನಾಯಕಿಯಾಗಿ ನಟಿಸಿದ್ದಾರೆ. ಬಕೇಶ್ ಹಾಗೂ ಕಾರ್ತಿಕ್ ಸಂಗೀತ ಸಂಯೋಜನೆ, ಶೇಖರ್‌ಚಂದ್ರ ಛಾಯಾಚಿತ್ರಗ್ರಹಣ, ನಾಗೇಂದ್ರ ಕೆ. ಉಜ್ಜನಿ ಸಂಕಲನ, ಚೇತನ ತೀರ್ಥಹಳ್ಳಿ ಸಂಭಾಷಣೆ ಚಿತ್ರಕ್ಕಿದೆ.

ಕಾಟನ್‌ಪೇಟೆ ಗೇಟ್‌: ಆರ್‌.ಎಸ್. ಪ್ರೊಡಕ್ಷನ್ಸ್ ಮೂಲಕ ಕನ್ನಡ ಚಿತ್ರರಂಗಕ್ಕೆ ‘ಯುವರಾಜ’, ‘ಕಂಠಿ’, ‘ಭರ್ಜರಿ’, ‘ಬಹದ್ದೂರ್’ ಸೇರಿದಂತೆ ಹಲವು ಸಿನಿಮಾಗಳನ್ನು ನೀಡಿರುವ ಆರ್. ಶ್ರೀನಿವಾಸ್ ಅವರು ನಿರ್ಮಿಸಿರುವ ಚಿತ್ರವಿದು. ಆ್ಯಕ್ಷನ್, ಹಾಸ್ಯ, ಭಾವನೆಗಳ ಸಮ್ಮಿಶ್ರಣವಾದ ಈ ಸಿನಿಮಾವನ್ನು ವೈ. ರಾಜಕುಮಾರ್ ನಿರ್ದೇಶಿಸಿದ್ದಾರೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ವೇಣುಗೋಪಾಲ್, ಯಶ್ವನ್‌, ಸುರಭಿ ತಿವಾರಿ, ಅನುಷಾ ಜೈನ್‌, ಸುಧೀಕ್ಷಾ, ಕಿಸ್ಲೆ ಚೌಧರಿ, ಪಾರ್ಥು ಮುಂತಾದವರು ತಾರಾಬಳಗದಲ್ಲಿದ್ದಾರೆ. 

ADVERTISEMENT

ಫಸ್ಟ್‌ ಡೇ ಫಸ್ಟ್‌ ಶೋ: ‘ಒಂದ್‌ ಕಥೆ ಹೇಳ್ಲಾ’ ಸಿನಿಮಾ ಮೂಲಕ ನಿರ್ದೇಶಕರಾಗಿ ಹೆಜ್ಜೆ ಇಟ್ಟ ಗಿರೀಶ್ ನಿರ್ದೇಶನದ ಚಿತ್ರವಿದು. ‘ನನ್ನ ಹಿಂದಿನ ನಾಲ್ಕು ಸಿನಿಮಾಗಳು ಬೇರೆ ರೀತಿ ಅಭಿರುಚಿಯ ಚಿತ್ರಗಳು. ‘ಫಸ್ಟ್ ಡೇ ಫಸ್ಟ್ ಶೋ’ ಕಥೆ ಅನ್ನುವುದಕ್ಕಿಂತ ಇಡೀ ಚಿತ್ರರಂಗವನ್ನು ಪ್ರತಿನಿಧಿಸುವ ಸಂಭ್ರಮ ಎನ್ನಬಹುದು’ ಎಂದಿದ್ದಾರೆ ಗಿರೀಶ್‌. ಚಿತ್ರದಲ್ಲಿ ಗಿರೀಶ್ ಜಿ., ಜೀವಿತಾ ವಸಿಷ್ಠ, ರೋಹಿತ್ ಶ್ರೀನಾಥ್, ಅನಿರುದ್ಧ ಶಾಸ್ತ್ರಿ, ಬಿ.ಎಂ.ವೆಂಕಟೇಶ್, ರೇಷ್ಮಾ ಲಿಂಗರಾಜಪ್ಪ, ಗಿಲ್ಲಿ ನಟ, ದಶಾವರ ಚಂದ್ರು, ಹರೀಶ್ ಅರಸು ಮುಂತಾದವರಿದ್ದಾರೆ. ಈ ಚಿತ್ರಕ್ಕೆ ಊರ್ಮಿಳಾ ಕಿರಣ್ ಬಂಡವಾಳ ಹೂಡಿದ್ದಾರೆ. ಉಜ್ವಲ್ ಚಂದ್ರ ಸಂಕಲನ, ರಾಕೇಶ್ ಸಿ. ತಿಲಕ್ ಹಾಗೂ ಅರುಣ್ ಕುಮಾರ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ. 

ಜಾವಾ ಕಾಫಿ: ಸಾನ್ವಿಕ ನಿರ್ಮಾಣ ಮಾಡಿ ನಿರ್ದೇಶನ ಮಾಡಿರುವ ಚಿತ್ರವಿದು. ಅವರೇ ನಾಯಕಿಯಾಗಿ ನಟಿಸಿದ್ದಾರೆ. ಕೇರಳದ ಸಾನ್ವಿಕ ನಿರ್ದೇಶನದ ಚೊಚ್ಚಲ ಸಿನಿಮಾವಿದು. ಅವರೇ ಕಥೆ ಚಿತ್ರಕಥೆಯನ್ನೂ ಬರೆದು ಸಾಹಸ ನಿರ್ದೇಶನ ಮಾಡಿದ್ದಾರೆ.  ಅಜಯ್ ವರ್ಧನ್ ಈ ಚಿತ್ರದ ನಾಯಕರಾಗಿ ನಟಿಸಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವು ಬೆಂಗಳೂರು, ಮಂಗಳೂರು,‌ ಕೇರಳ ಮುಂತಾದೆಡೆ ಚಿತ್ರೀಕರಣಗೊಂಡಿದೆ. 

ಮಕ್ಕಳ ಚಿತ್ರ ‘ಲಕ್ಷ್ಯ’  ಬಹುತೇಕ ಉತ್ತರ ಕರ್ನಾಟಕದವರೇ ಸೇರಿ ನಿರ್ಮಿಸಿರುವ ಮಕ್ಕಳ ಚಿತ್ರವಿದು. 1990ರ ದಶಕದಲ್ಲಿ ಉತ್ತರ ಕರ್ನಾಟಕದಲ್ಲಿ ನಡೆದ ನೈಜ ಘಟನೆಯನ್ನು ಸ್ಫೂರ್ತಿಯಾಗಿಟ್ಟುಕೊಂಡು ತಯಾರಾದ ಈ ಚಿತ್ರಕ್ಕೆ ಅರ್ಜುನ ಪಿ.ಡೋಣೂರ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಇದು ಮಕ್ಕಳ ‘ಲಕ್ಷ್ಯ’ದ ಕುರಿತಾದ ಚಿತ್ರ. ಮಕ್ಕಳು ಯಾವ ವಿಷಯಕ್ಕೆ ‘ಲಕ್ಷ್ಯ’ ಕೊಡುತ್ತಾರೆ ಅದರಿಂದ ಏನಾಗುತ್ತದೆ ಎಂಬುದೇ ಈ ಚಿತ್ರದ ಕಥಾಹಂದರ ಎಂದಿದೆ ಚಿತ್ರತಂಡ. ಸಂಪೂರ್ಣ ಉತ್ತರ ಕರ್ನಾಟಕದ ಭಾಷೆ ಅಲ್ಲಿನ ಕಲಾವಿದರೇ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಾಮ್ರಾಟ ಪ್ರೊಡಕ್ಷನ್ಸ್ ಬ್ಯಾನರಿನಲ್ಲಿ ನಿರ್ಮಾಣವಾಗಿರುವ ಈ ಚಿತ್ರದ ಹಾಡುಗಳಿಗೆ ದೊಡ್ಡರಂಗೇಗೌಡ ಶಂಕರ ಪಾಗೋಜಿ ಶಿವಾನಂದ ಭೂಶಿ ಸಾಹಿತ್ಯ ಬರೆದಿದ್ದಾರೆ. ಎಂ.ಬಿ.ಅಳ್ಳಿಕಟ್ಟಿ ಛಾಯಾಚಿತ್ರಗ್ರಹಣ ಆರ್. ಮಹಾಂತೇಶ್ ಸಂಕಲನ ಚಿತ್ರಕ್ಕಿದೆ. ಸಂಗಮೇಶ ಉಪಾಸೆ ಸಂಗಮೇಶ್ ಮೊದಲಾದ ಕಲಾವಿದರು ತಾರಾಬಳಗದಲ್ಲಿದ್ದಾರೆ.  ಉತ್ತರ ಕರ್ನಾಟಕ ಸೊಗಡಿನ ಮಕ್ಕಳ ಚಿತ್ರವಾದರೂ ಇದರಲ್ಲಿ ಗಂಭೀರ ಸಾಮಾಜಿಕ ವಿಷಯಗಳಿವೆ. ಮನರಂಜನೆಯ ಜೊತೆಗೇ ಸಾಮಾಜಿಕವಾಗಿ ಚರ್ಚಿಸುವ ವಿಷಯಗಳಿವೆ.   ⁃ಅರ್ಜುನ ಪಿ. ಡೋಣೂರ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.