ಮಾಹಿರ್ ಮೊಹಿಯುದ್ದೀನ್
ಲಿಖಿತ್ ಕುಮಾರ್ ನಿರ್ದೇಶನದ ‘ವೃತ್ತ’ ಸಿನಿಮಾ ಆ.1ರಂದು ತೆರೆಕಾಣುತ್ತಿದೆ. ಮಿಸ್ಟ್ರಿ ಥ್ರಿಲ್ಲರ್ ಜಾನರ್‌ನಲ್ಲಿರುವ ಈ ಸಿನಿಮಾ ಒಂದು ರಾತ್ರಿಯಲ್ಲಿ ನಡೆಯುವ ಘಟನಾವಳಿಗಳನ್ನು ಒಳಗೊಂಡಿದೆ.
ಈ ಚಿತ್ರದ ಮೂಲಕ ನಿರ್ದೇಶಕ ಲಿಖಿತ್ ಕುಮಾರ್ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ‘ಸಿದ್ಧಾರ್ಥ್’ ಎಂಬ ಪಾತ್ರದ ಸುತ್ತ ನಡೆಯುವ ಕಥೆ ಇದರಲ್ಲಿದ್ದು, ಸಿದ್ಧಾರ್ಥ್‌ಗೆ ಆತನ ಮನಃಸ್ಥಿತಿಯೇ ಶತ್ರು. ಒಂದು ರಾತ್ರಿ, ಒಂದು ಕರೆ ಹಾಗೂ ನಾಯಕ ದಾರಿಯಲ್ಲಿ ತೆಗೆದುಕೊಳ್ಳಬಹುದಾದ ರಾಂಗ್ ಟರ್ನ್‌ನಿಂದ ಏನೆಲ್ಲಾ ಸಂಭವಿಸಲಿದೆ ಎಂಬುವುದು ಚಿತ್ರದ ತಿರುಳು ಎಂದಿದೆ ಚಿತ್ರತಂಡ. ಮಾಹಿರ್ ಮೊಹಿಯುದ್ದೀನ್ ‘ಸಿದ್ಧಾರ್ಥ್’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಯಣ್ಣ ಫಿಲ್ಮ್ಸ್ ಚಿತ್ರದ ವಿತರಣೆ ಮಾಡುತ್ತಿದೆ.
‘ಸಂಕಲನಕಾರನಾಗಿ ಚಿತ್ರರಂಗಕ್ಕೆ ಅಡಿಯಿಟ್ಟ ನಾನು ನಂತರ ಒಂದೆರಡು ಕಿರುಚಿತ್ರಗಳನ್ನೂ ನಿರ್ದೇಶಿಸಿದೆ. ಈಗಾಗಲೇ ಚಿತ್ರದ ಮೋಷನ್ ಪೋಸ್ಟರ್ ಹಾಗೂ ‘ಅದು ಯಾವ ಮಾಯೆಯೋ..’ ಎಂಬ ಹಾಡಿನ ಲಿರಿಕಲ್ ವೀಡಿಯೊ ಬಿಡುಗಡೆಯಾಗಿದೆ. ಚಿತ್ರವನ್ನು ವೀಕ್ಷಿಸಿದ ನಟ ನೀನಾಸಂ ಸತೀಶ್ ಅವರು ಚಿತ್ರದ ಕಾಂಟೆಂಟ್ ಮೆಚ್ಚಿ ತಮ್ಮ ಬ್ಯಾನರ್ ಮೂಲಕ ಪ್ರಸ್ತುತಪಡಿಸುತ್ತಿದ್ದಾರೆ’ ಎಂದು ಲಿಖಿತ್ ಕುಮಾರ್ ಹೇಳಿದರು.
‘ಸಾಕಷ್ಟು ನಿಗೂಢತೆಯನ್ನು ಹೊಂದಿರುವ ಮಿಸ್ಟ್ರಿ ಥ್ರಿಲ್ಲರ್ ಜಾನರ್‌ನ ಚಿತ್ರ ಇದಾಗಿದ್ದರೂ, ಅದರ ನಿರೂಪಣಾ ಶೈಲಿ ವಿಶಿಷ್ಟವಾಗಿದೆ’ ಎನ್ನುತ್ತಾರೆ ಲಿಖಿತ್.
ಲಕ್ಷಯ್ ಆರ್ಟ್ಸ್ ಬ್ಯಾನರ್‌ನಡಿ ಟಿ. ಶಿವಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಯೋಗೇಶ್‌ಗೌಡ ಕಥೆ, ಶಂಕರ ರಾಮನ್ ಸಂಭಾಷಣೆ ಚಿತ್ರಕ್ಕಿದೆ. ಲಿಖಿತ್ ಕುಮಾರ್ ಅವರೇ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮಾಹಿರ್ ಜೊತೆ ಹರಿಣಿ ಸುಂದರರಾಜನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸದ್ಯದಲ್ಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದ್ದು, ಗೌತಮ್ ಕೃಷ್ಣ ಛಾಯಾಚಿತ್ರಗ್ರಹಣ, ಸುರೇಶ್ ಆರ್ಮುಗಂ ಸಂಕಲನ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.