ADVERTISEMENT

ಕಣ್ಣಪ್ಪನಿಗೆ ಜೊತೆಯಾದ ಶಿವರಾಜ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 0:30 IST
Last Updated 5 ಜೂನ್ 2025, 0:30 IST
ಚಿತ್ರತಂಡದೊಂದಿಗೆ ಶಿವರಾಜ್‌ಕುಮಾರ್‌ 
ಚಿತ್ರತಂಡದೊಂದಿಗೆ ಶಿವರಾಜ್‌ಕುಮಾರ್‌    

ನಟ ಮೋಹನ್‌ ಬಾಬು ನಿರ್ಮಾಣದ, ಮುಖೇಶ್‌ ಕುಮಾರ್‌ ಸಿಂಗ್‌ ನಿರ್ದೇಶನದ ಪ್ಯಾನ್‌ ಇಂಡಿಯಾ ಸಿನಿಮಾ ‘ಕಣ್ಣಪ್ಪ’ ಜೂನ್‌ 27ರಂದು ಬಿಡುಗಡೆಯಾಗಲಿದೆ. 

ಚಿತ್ರದ ಟೀಸರ್‌ ಪ್ರದರ್ಶನ ಹಾಗೂ ಹಾಡೊಂದರ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆಯಿತು. ನಟ ಶಿವರಾಜ್‌ಕುಮಾರ್‌ ಹಾಗೂ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಮುಖ್ಯಅತಿಥಿಗಳಾಗಿ ಭಾಗವಹಿಸಿದ್ದರು. ಮೋಹನ್‌ ಬಾಬು ಅವರ ಪುತ್ರ ವಿಷ್ಣು ಮಂಚು ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಬಾಲಿವುಡ್ ನಟ ಅಕ್ಷಯ್ ಕುಮಾರ್ ಶಿವನ ಪಾತ್ರದಲ್ಲಿ ಹಾಗೂ ಕಾಜಲ್ ಅಗರವಾಲ್ ಪಾರ್ವತಿಯಾಗಿ ಕಾಣಿಸಿಕೊಂಡಿದ್ದಾರೆ. ಪ್ರಭಾಸ್, ಮೋಹನ್‌ಲಾಲ್‌ ಚಿತ್ರದ ತಾರಾಬಳಗದಲ್ಲಿದ್ದಾರೆ.

‘ನಾನು ಈ ‘ಕಣ್ಣಪ್ಪ’ ಚಿತ್ರದಲ್ಲಿ ನಟಿಸಬೇಕಾಗಿತ್ತು. ಹಲವು ಚಿತ್ರಗಳ ಚಿತ್ರೀಕರಣ ಒಪ್ಪಿಕೊಂಡಿದ್ದರಿಂದ ನಟಿಸಲು ಆಗಲಿಲ್ಲ. ಮುಂದೊಂದು ದಿನ ವಿಷ್ಣು ಮಂಚು ಅವರ ಜೊತೆ ನಟಿಸುತ್ತೇನೆ. ನಟ ಮೋಹನ್‍ ಬಾಬು ನಮ್ಮ ಕುಟುಂಬದ ಸದಸ್ಯರು ಇದ್ದಹಾಗೆ. ಅವರು ಕರೆದರೆ ಪ್ರೀತಿಯಿಂದ ನಟಿಸಿ ಬರುತ್ತೇನೆ’ ಎಂದರು ಶಿವರಾಜ್‌ಕುಮಾರ್‌. 

ADVERTISEMENT

‘ಕನ್ನಡದಲ್ಲಿ ನಟಿಸಬೇಕು ಎನ್ನುವ ಆಸೆ ಬಹುದಿನದಿಂದ ಇದೆ. ಅಂಬರೀಶ್‌ ಮುಂದೆಯೂ ಇದನ್ನೇ ಹೇಳಿದ್ದೆ. ಶಿವಣ್ಣನ ಜೊತೆ ಚಿತ್ರವೊಂದರಲ್ಲಿ ನಟಿಸಬೇಕು. ನ್ಯೂಜಿಲ್ಯಾಂಡ್‌ನ ಕಾಡೊಂದರಲ್ಲಿ ಬೃಹತ್ ಸೆಟ್ ಹಾಕಿ ಈ ಚಿತ್ರದ ಚಿತ್ರೀಕರಣ ಮಾಡಿದ್ದೇವೆ. ‘ಬೇಡರ ಕಣ್ಣಪ್ಪ’ ವರನಟ ಡಾ.ರಾಜ್‌ಕುಮಾರ್ ಅವರು ಮಾಡಿದ್ದ ಚಿತ್ರ. ಆ ನಂತರ ಶಿವರಾಜ್‌ಕುಮಾರ್ ಅವರೂ ಕಣ್ಣಪ್ಪ ಚಿತ್ರದಲ್ಲಿ ನಟಿಸಿದ್ದರು. ಈಗ ನಾವು ‘ಕಣ್ಣಪ್ಪ’ ಚಿತ್ರವನ್ನು ಜನರ ಮುಂದೆ ತರುತ್ತಿದ್ದೇವೆ. ರಾಜ್ಯದಲ್ಲಿ ‘ಕಣ್ಣಪ್ಪ’ ಚಿತ್ರವನ್ನು ರಾಕ್‌ಲೈನ್ ವೆಂಕಟೇಶ್ ವಿತರಣೆ ಮಾಡುತ್ತಿದ್ದಾರೆ’ ಎಂದರು ಮೋಹನ್‌ ಬಾಬು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.