ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ’ ಚಿತ್ರದ ಯಶಸ್ಸಿನಲ್ಲಿ ‘ವರಾಹರೂಪಂ’ ಹಾಡಿನ ಪಾಲು ದೊಡ್ಡದಿತ್ತು. ಹೀಗಾಗಿ ‘ಕಾಂತಾರ ಅಧ್ಯಾಯ–1’ರ ಹಾಡುಗಳ ಮೇಲೆ ನಿರೀಕ್ಷೆ ಹೆಚ್ಚಿತ್ತು. ಟ್ರೇಲರ್ ಬಳಿಕ ಇದೀಗ ಚಿತ್ರತಂಡ ಚಿತ್ರದ ‘ಬ್ರಹ್ಮಕಲಶ’ ಹಾಡು ಬಿಡುಗಡೆಗೊಳಿಸಿದೆ.
ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದ ಈ ಹಾಡಿಗೆ ಅಬ್ಬಿ ವಿ. ಧ್ವನಿಯಾಗಿದ್ದಾರೆ. ಶಶಿರಾಜ್ ಕಾವೂರು ಸಾಹಿತ್ಯದ ಈ ಹಾಡು ಮತ್ತೊಂದು ‘ವರಾಹರೂಪಂ’ ಕೇಳಿದ ಅನುಭವ ನೀಡುತ್ತಿದೆ. ಸಾಹಿತ್ಯದಲ್ಲಿ ಕನ್ನಡ ಮತ್ತು ತುಳು ಪದಗಳನ್ನು ಬಳಸಲಾಗಿದೆ. ಶಿವನನ್ನು ಭಜಿಸುವ ಹಾಡಿನಲ್ಲಿ ನನಪದ ವಾದ್ಯ ಪರಿಕರಗಳನ್ನೂ ಬಳಸಿಕೊಂಡಿದ್ದು, ಹಾಡಿಗೆ ದೈವಿಕ ಸ್ಪರ್ಶ ಸಿಕ್ಕಿದೆ. ಕನ್ನಡದ ಜತೆಗೆ ಹಿಂದಿ, ಮಲಯಾಳ, ತೆಲುಗು ಮತ್ತು ತಮಿಳಿನಲ್ಲೂ ಈ ಹಾಡು ಬಿಡುಗಡೆಗೊಂಡಿದೆ.
‘ಕಾಂತಾರ’ ಚಿತ್ರದ ಪೂರ್ವದ ಕಥೆ ಹೇಳುವ ರಿಷಬ್ ನಿರ್ದೇಶನದ ‘ಕಾಂತಾರ ಅಧ್ಯಾಯ–1’ ಅ.2ರಂದು ತೆರೆಗೆ ಬರಲಿದೆ. ಚಿತ್ರದ ಮುಂಡಗ ಬುಕ್ಕಿಂಗ್ ಈಗಾಗಲೇ ಪ್ರಾರಂಭಗೊಂಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸುಮಾರು 30 ದೇಶಗಳಲ್ಲಿ 7 ಸಾವಿರಕ್ಕಿಂತ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ.
ತುಳುನಾಡಿಗೆ ದೈವಗಳು ಹೇಗೆ ಬಂದವು ಎಂಬ ಕಥೆ ಹೇಳುವ ಚಿತ್ರದಲ್ಲಿ ರುಕ್ಮಿಣಿ ವಸಂತ್ ಕನಕವತಿಯಾಗಿ ಕಾಣಿಸಿಕೊಂಡಿದ್ದಾರೆ. ಗುಲ್ಶನ್ ದೇವಯ್ಯ, ಪ್ರಮೋದ್ ಶೆಟ್ಟಿ ಮುಂತಾದವರು ಪ್ರಮುಖ ಪಾತ್ರದಲ್ಲಿರುವ ಚಿತ್ರಕ್ಕೆ ಅರವಿಂದ್ ಕಶ್ಯಪ್ ಛಾಯಾಚಿತ್ರಗ್ರಹಣವಿದೆ. ಹೊಂಬಾಳೆ ಫಿಲ್ಮ್ಸ್ ಚಿತ್ರವನ್ನು ನಿರ್ಮಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.