ADVERTISEMENT

ಕಾಂತಾರ ಚಿತ್ರದಲ್ಲಿ ವರಾಹ ರೂಪಂ ಹಾಡು ಬಳಸದಂತೆ ತಡೆಯಾಜ್ಞೆ: ತೈಕುಡಂ ಬ್ರಿಡ್ಜ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಅಕ್ಟೋಬರ್ 2022, 10:02 IST
Last Updated 29 ಅಕ್ಟೋಬರ್ 2022, 10:02 IST
   

ಬೆಂಗಳೂರು: ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕನ್ನಡದ ‘ಕಾಂತಾರ’ ಚಿತ್ರದ ಪ್ರಸಿದ್ಧ ‘ವರಾಹ ರೂಪಂ’ ಹಾಡನ್ನು ತಮ್ಮ ಅನುಮತಿ ಇಲ್ಲದೆ ಚಿತ್ರಮಂದಿರಗಳು ಮತ್ತು ಇತರ ಸ್ಟ್ರೀಮಿಂಗ್ ವೇದಿಕೆಗಳಲ್ಲಿ ಪ್ರಸಾರ ಮಾಡದಂತೆ ಕೋಯಿಕ್ಕೋಡ್‌ನ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದಾಗಿಕೇರಳದ ಪ್ರಸಿದ್ಧ ಮ್ಯೂಸಿಕ್ ಬ್ಯಾಂಡ್ ತೈಕುಡಂ ಬ್ರಿಡ್ಜ್ ಇನ್‌ಸ್ಟಾಗ್ರಾಂ ಖಾತೆಯಲ್ಲಿಹೇಳಿಕೊಂಡಿದೆ.

ಈ ಹಾಡನ್ನು ತಮ್ಮ ನವರಸಂ ಆಲ್ಬಂನಿಂದ ಕಾಪಿ ಮಾಡಲಾಗಿದೆ ಎಂದು ಅದು ಈ ಹಿಂದೆಆರೋಪಿಸಿತ್ತು.

ತೈಕುಡಂ ಬ್ರಿಡ್ಜ್ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಏನಿದೆ?

ADVERTISEMENT

‘ತೈಕುಡಂ ಬ್ರಿಡ್ಜ್ ಅನುಮತಿ ಇಲ್ಲದೆ ಕಾಂತಾರ ಚಿತ್ರದಲ್ಲಿ ವರಾಹ ರೂಪಂ ಹಾಡನ್ನು ಬಳಸದಂತೆ ತಡೆಯಾಜ್ಞೆ ನೀಡಿ, ಚಿತ್ರದ ನಿರ್ಮಾಪಕ, ನಿರ್ದೇಶಕ, ಸಂಗೀತ ಸಂಯೋಜಕ, ಅಮೆಜಾನ್, ಯೂಟ್ಯೂಬ್, ಸ್ಪಾಟಿಫೈ, ವಿಂಕ್ ಮ್ಯೂಸಿಕ್, ಜಿಯೋಸಾವನ್ ಮತ್ತು ಇತರರಿಗೆ ಕೋಯಿಕ್ಕೋಡ್‌ನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಆದೇಶಿಸಿದ್ದಾರೆ. ತೈಕುಡಂ ಬ್ರಿಡ್ಜ್ ಪರವಾಗಿ ಸುಪ್ರೀಂ ಕೋರ್ಟ್ ವಕೀಲರಾದ ಸತೀಶ್ ಮೂರ್ತಿ ದಾವೆ ಹೂಡಿದ್ದರು’ಎಂದು ತೈಕುಡಂ ಬ್ರಿಡ್ಜ್ ಹಾಕಿರುವ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ತಿಳಿಸಲಾಗಿದೆ.

ಅಕ್ಟೋಬರ್ 24 ರಂದು, ಕಾಂತಾರ ಚಿತ್ರ ತಯಾರಕರ ವಿರುದ್ಧ ತೈಕುಡಂ ಬ್ರಿಡ್ಜ್ ಇನ್‌ಸ್ಟಾಗ್ರಾಂನಲ್ಲಿ ಕೃತಿಚೌರ್ಯದ ಗಂಭೀರ ಆರೋಪಗಳನ್ನು ಮಾಡಿತ್ತು. ವರಾಹ ರೂಪಂ ಹಾಡನ್ನು ತಮ್ಮ ನವರಸಂ ಆಲ್ಬಂನಿಂದ ನಕಲು ಮಾಡುವ ಮೂಲಕ ಹಕ್ಕುಸ್ವಾಮ್ಯ ಕಾನೂನುಗಳ ಸ್ಪಷ್ಟ ಉಲ್ಲಂಘನೆ ಮಾಡಿದೆ ಎಂದು ಆರೋಪಿಸಿತ್ತು.

ಅವರ ಆರೋಪದಲ್ಲೇನಿತ್ತು..?

‘ತೈಕುಡಂ ಬ್ರಿಡ್ಜ್ ಕಾಂತಾರ ಚಿತ್ರತಂಡದ ಜೊತೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಹೇಳಲು ಬಯಸುತ್ತೇವೆ. ನವರಸಂ ಮತ್ತು ವರಾಹ ರೂಪಂ ನಡುವೆ ಕಂಡುಬಂದಿರುವ ಹೋಲಿಕೆಗಳು ಆಡಿಯೊ ವಿಷಯದಲ್ಲಿ ಒಂದು ಸ್ಪಷ್ಟವಾದ ಹಕ್ಕುಸ್ವಾಮ್ಯ ಕಾನೂನುಗಳ ಉಲ್ಲಂಘನೆಯಾಗಿದೆ. ಹಾಡಿನಿಂದ ಪ್ರೇರಣೆ ಪಡೆಯುವುದು ಬೇರೆ, ಕೃತಿಚೌರ್ಯವೇ ಬೇರೆ. ಆದ್ದರಿಂದ, ಇದಕ್ಕೆ ಕಾರಣವಾದ ತಂಡದ ವಿರುದ್ಧ ನಾವು ಕಾನೂನು ಕ್ರಮವನ್ನು ಬಯಸುತ್ತೇವೆ’ಎಂದು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.