ADVERTISEMENT

ಕ್ರಿಕೆಟಿಗ ಕಪಿಲ್‌ದೇವ್‌ ಆಧಾರಿತ ಸಿನಿಮಾದಲ್ಲಿ ಕಾರ್ತಿ, ರಕುಲ್‌ ರೊಮ್ಯಾನ್ಸ್‌

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2019, 13:58 IST
Last Updated 4 ಫೆಬ್ರುವರಿ 2019, 13:58 IST
‘ದೇವ್‌’ನ ಸನ್ನಿವೇಶವೊಂದರಲ್ಲಿ ಕಾರ್ತಿ– ರಕುಲ್ ಪ್ರೀತ್‌ ಸಿಂಘ್‌
‘ದೇವ್‌’ನ ಸನ್ನಿವೇಶವೊಂದರಲ್ಲಿ ಕಾರ್ತಿ– ರಕುಲ್ ಪ್ರೀತ್‌ ಸಿಂಘ್‌   

ಬರೋಬ್ಬರಿ ಎಂಟು ವರ್ಷಗಳ ಬಳಿಕ ಆ್ಯಕ್ಷನ್– ಕಟ್ ಹೇಳಿಸಿಕೊಂಡಿದ್ದಾರೆ ತೆಲುಗಿನ ನಟ ಕಾರ್ತಿ. ಕ್ರಿಕೆಟಿಗ ಕಪಿಲ್‌ದೇವ್‌ ಜೀವನಕತೆಯನ್ನು ಆಧರಿಸಿದ ಚಿತ್ರ ‘ದೇವ್‌’ನಲ್ಲಿ ಕಾರ್ತಿ ನಾಯಕನಟರಾಗಿ ಮರು ಎಂಟ್ರಿ ಕೊಡುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಟ್ರೇಲರ್‌ಗೂ ಉತ್ತಮ ಸ್ಪಂದನ ದೊರೆತಿರುವುದು, ತಮ್ಮ ಸಿನಿಯಾನದ ಎರಡನೇ ಇನಿಂಗ್ಸ್‌ ಬಗ್ಗೆ ಕಾರ್ತಿಗೆ ಭರವಸೆ ಮೂಡಿಸಿದೆ.

ಬಾಳಿನ ಮಹತ್ವಾಕಾಂಕ್ಷೆ, ಸಾಹಸ ಮನೋಭಾವದ ಫೋಟೊಗ್ರಾಫರ್‌, ರಸ್ತೆಯಲ್ಲೇ ದೂರದೂರ ಪ್ರಯಾಣ ಮಾಡಬಯಸುವ ಪ್ರವಾಸಪ್ರಿಯ, ಗಿಟಾರ್‌ ಮೋಹಿ... ಹೀಗೆ ಹೇಳಿಕೊಳ್ಳುವ ನಾಯಕನ ಧ್ವನಿಯೊಂದಿಗೆ ಕಾರ್ತಿ ಟ್ರೇಲರ್‌ ಶುರುವಾಗುತ್ತದೆ. ಎತ್ತರದಿಂದ ನೀರಿಗೆ ಜಿಗಿಯುವುದು, ಮಸಲ್‌ ಬೈಕ್‌ನಲ್ಲಿ ಗುಡ್ಡಗಾಡುಗಳಲ್ಲಿ ಸವಾರಿ ಮಾಡುವುದು, ಸ್ಪೋರ್ಟ್‌ ಕಾರಿನಲ್ಲಿ ಸಾಹಸ ಮಾಡುವುದು... ಕಾರ್ತಿಯ ಮನೋಭಾವಕ್ಕೂ ದೇವ್‌ ಪಾತ್ರಕ್ಕೂ ಸಾಕಷ್ಟು ತಾಳೆ ಇದೆ.

ನಾಯಕನಟಿ ರಕುಲ್‌ ಪ್ರೀತ್‌ ಸಿಂಗ್‌ ಅವರ ಪ್ರವೇಶದ ಸನ್ನಿವೇಶ ಸಾವಿರ ದೀಪಗಳು ಬೆಳಗಿದಷ್ಟು ಪ್ರಭಾವಶಾಲಿಯಾಗಿದೆ. ಪುರುಷನ ಬೆಂಬಲವಿಲ್ಲದೆ ಸ್ವತಂತ್ರವಾಗಿ ಬಾಳಬಲ್ಲೆ ಎಂಬ ಸ್ವಾಭಿಮಾನಿ ಹೆಣ್ಣು ಮಗಳಾಗಿ ರಕುಲ್‌ ಚೆನ್ನಾಗಿ ನಟಿಸಿದ್ದಾರೆ.

ADVERTISEMENT

ಟ್ರೇಲರ್‌ನ ಸನ್ನಿವೇಶಗಳಲ್ಲಿ ಮನಸ್ಸಿನಲ್ಲಿ ನಿಲ್ಲುವುದು ಕಾರ್ತಿ ಮತ್ತು ರಕುಲ್‌ ಅವರ ಒಡನಾಟ, ಪ್ರಣಯದಾಟ. ಗುಡ್ಡಗಾಡು ಪ್ರದೇಶಗಳಲ್ಲಿ, ಪ್ರಕೃತಿಯ ರಮ್ಯ ತಾಣಗಳಲ್ಲಿ ಇಬ್ಬರೂ ಮಾಡುವ ರೊಮ್ಯಾನ್ಸ್‌ ಸುಂದರವಾಗಿ ಮೂಡಿಬಂದಿದೆ.

ರಕುಲ್‌ ಜೊತೆಗೆ ಕಾರ್ತಿ ಅವರ ಎರಡನೇ ಸಿನಿಮಾವಿದು. ‘ದೇವ್‌’ನಲ್ಲಿ ರಕುಲ್‌ ಅವರದು ಉದ್ಯಮಿಯ ಪಾತ್ರ. ಬಾಹ್ಯ ಜಗತ್ತಿಗೆ ರಫ್ ಆ್ಯಂಡ್‌ ಟಫ್‌ ಆಗಿ ಕಾಣಿಸಿಕೊಳ್ಳುವ ನಾಯಕ ದೇವ್, ಹೆಣ್ಣು ಮಕ್ಕಳೊಂದಿಗಿನ ಸಂಬಂಧದ ವಿಚಾರ ಬಂದಾಗ ಮಂಜಿನಂತೆ ಕರಗುತ್ತಾನೆ!

ಸಿನೆಮಾಟೊಗ್ರಫಿಯ ಕಸಬುದಾರಿಕೆ ಇಡೀ ಟ್ರೇಲರ್‌ನಲ್ಲಿ ಗಮನ ಸೆಳೆಯುತ್ತದೆ. ಎಚ್‌.ಜಯರಾಜ್‌ ಹಿನ್ನೆಲೆ ಸಂಗೀತವೂ ಸಿನಿಮಾ ವೀಕ್ಷಣೆಯತ್ತ ನೋಡುಗರನ್ನು ಉತ್ತೇಜಿಸುವಂತಿದೆ.ರಜತ್‌ ರವಿಶಂಕರ್‌ ಇದೇ ಮೊದಲ ಬಾರಿಗೆ ನಿರ್ದೇಶಕರ ಟೋಪಿ ಧರಿಸಿದ್ದಾರೆ. ಹಿರಿಯ ನಟ ಪ್ರಕಾಶ್‌ರಾಜ್‌, ನಾಯಕ ದೇವ್‌ನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಮ್ಯಾ ಕೃಷ್ಣನ್‌, ಅಮೃತಾ, ಆರ್‌ಜೆ ವಿಘ್ನೇಶ್‌, ಹಾಸ್ಯ ನಟ ಕಾರ್ತಿಕ್‌ ಕೂಡಾ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.