ADVERTISEMENT

ಕರಣ್‌ ಜೋಹರ್‌ ‘ಅತ್ಯಂತ ಜನಪ್ರಿಯ ಚಿತ್ರ ನಿರ್ಮಾತೃ’

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 19:30 IST
Last Updated 1 ಜುಲೈ 2019, 19:30 IST
ಕರಣ್‌ ಜೋಹರ್‌
ಕರಣ್‌ ಜೋಹರ್‌   

ಕರಣ್‌ ಜೋಹರ್‌ ಬಾಲಿವುಡ್‌ನ ಅತ್ಯಂತ ಜನಪ್ರಿಯ ಚಿತ್ರ ನಿರ್ಮಾತೃ. ಇತ್ತೀಚೆಗೆ ನಡೆಸಿದ ಜನಪ್ರಿಯತೆಯ ಸಮೀಕ್ಷೆಯೊಂದರಲ್ಲಿ ಕರಣ್‌ ಅತ್ಯಂತ ಹೆಚ್ಚು ಅಂಕಗಳೊಂದಿಗೆ ಅಗ್ರ ಸ್ಥಾನ ಅಲಂಕರಿಸಿದ್ದಾರೆ. ಕಳೆದ ಆರು ತಿಂಗಳಿಂದ ಇಲ್ಲಿಯತನಕದ ಅವಧಿಯಲ್ಲಿ ಹಲವಾರು ಸಿನಿ/ಮನರಂಜನಾ ಕ್ಷೇತ್ರದ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಅವರು ಅತ್ಯಂತ ಸಕ್ರಿಯರಾಗಿದ್ದಾರೆ. ಸದಾ ಸುದ್ದಿಯಲ್ಲೂ ಇದ್ದಾರೆ. ಇಂಥ ಅಂಶಗಳನ್ನು ಸಮೀಕ್ಷೆ ಪರಿಗಣಿಸಿದ್ದರಿಂದ ಅವರಿಗೆ ಅಗ್ರ ಸ್ಥಾನ ಲಭಿಸಿದೆ.

ತಮಿಳಿನ ಖ್ಯಾತ ನಿರ್ದೇಶಕ ಮತ್ತು ಇತ್ತೀಚಿನ ‘ರೊಬೊ 2.0’ ಸಿನಿಮಾದ ನಿರ್ದೇಶಕ ಶಂಕರ್‌ ಎರಡನೇ ಸ್ಥಾನದಲ್ಲಿದ್ದಾರೆ. ಪರ್ಹಾನ್‌ ಅಖ್ತರ್‌ ಮತ್ತು ರೋಹಿತ್‌ ಶೆಟ್ಟಿ ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ. ಅನುರಾಗ್‌ ಕಶ್ಯಪ್‌ ಮಾತ್ರ ಐದನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

‘ಸಿಂಬಾ’, ‘ಕೇಸರಿ’, ‘ಕಳಂಕ್‌’ ಮತ್ತು ‘ಸ್ಟೂಡೆಂಟ್‌ ಆಫ್‌ ದಿ ಇಯರ್‌–2’ ಚಿತ್ರಗಳ ಮೂಲಕ ಕರಣ್‌ ಜೋಹರ್‌ತುಂಬ ಸುದ್ದಿಯಲ್ಲಿದ್ದರು. ಜೊತೆಗೆ ‘ಕಾಫೀ ವಿತ್‌ ಕರಣ್‌ ಸೀಜನ್‌–6’ ಟೆಲಿ ಶೋ ಮೂಲಕವೂ ಅವರು ಸದಾ ಚರ್ಚೆಯಲ್ಲಿದ್ದವರು.

ADVERTISEMENT

ಸ್ಕೋರ್‌ ಟ್ರೆಂಡ್ಸ್‌ ಇಂಡಿಯಾ ನಡೆಸಿದ ಈ ಅಭಿಯಾನದಲ್ಲಿ ವಿವಿಧ ಚಿತ್ರ ನಿರ್ಮಾತೃಗಳು ಗಳಿಸಿದ ಅಂಕಗಳ ಪಟ್ಟಿ, ಅವರು ಹೊಂದಿರುವ ಜನಪ್ರಿಯತೆಯ ಕತೆ ಹೇಳುತ್ತಿವೆ. ವೈರಲ್ ನ್ಯೂಸ್, ಮುದ್ರಣ ಮಾಧ್ಯಮ, ಡಿಜಿಟಲ್‌, ಸಾಮಾಜಿಕ ಜಾಲತಾಣ, ವೆಬ್‌ ಸೈಟ್‌ಗಳು ಇತ್ಯಾದಿ ಎಲ್ಲಾ ಬಗೆಯ ಜನಪ್ರಿಯತೆ ಶ್ರೇಣಿಯಲ್ಲಿ ಕರಣ್‌ ನೂರು ಅಂಕಗಳೊಂದಿಗೆ ಅಗ್ರ ಸ್ಥಾನ ಗಳಿಸಿದ್ದಾರೆ. ದಕ್ಷಿಣ ಭಾರತದ ಜನಪ್ರಿಯ ನಿರ್ದೇಶಕ ಶಂಕರ್‌ 89.15 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದ್ದಾರೆ.

‘ಗಲ್ಲಿ ಬಾಯ್‌’ ಸಿನಿಮಾ, ‘ಮೇಡ್‌ ಇನ್‌ ಹೆವನ್‌’ ವೆಬ್‌ ಸರಣಿ ಮತ್ತು ರೂಪದರ್ಶಿ ಶಿಬಾನಿ ದಾಂಡೇಕರ್‌ ಜೊತೆಗಿನ ಡೇಟಿಂಗ್‌ ವಿಷಯಗಳಿಗೆ ಸಂಬಂಧಿಸಿದಂತೆ ತುಂಬ ಚರ್ಚೆಯಲ್ಲಿರುವ ನಿರ್ದೇಶಕ ಫರ್ಹಾನ್‌ ಅಖ್ತರ್‌ ಮೂರನೇ ಸ್ಥಾನದಲ್ಲಿದ್ದಾರೆ. ಸಿನಿಮಾ ನಿರ್ದೇಶನ ಮತ್ತು ಟೆಲಿವಿಷನ್‌ ಶೋ ನಡೆಸಿಕೊಡುವ ವಿಷಯಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸುದ್ದಿಯಲ್ಲಿರುವ ರೋಹಿತ್‌ ಶೆಟ್ಟಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ‘ಸಿಂಬಾ’ ಮತ್ತು ಟೆಲಿ ರಿಯಾಲಿಟಿ ಶೋ ’ಖತರೋಂಕೆ ಖಿಲಾಡಿ’ ಮೂಲಕ ರೋಹಿತ್‌ ಶೆಟ್ಟಿ ಜನಪ್ರಿಯ ಚಿತ್ರ ನಿರ್ಮಾತೃ.

ನೆಟ್‌ಫ್ಲಿಕ್ಸ್‌ನಲ್ಲಿ ಅತ್ಯಂತ ಜನಪ್ರಿಯ ವೆಬ್‌ ಶ್ರೇಣಿ ‘ಸೈಕ್ರೆಡ್‌ ಗೇಮ್ಸ್‌’ ನಿರ್ಮಾಣ ಮತ್ತು ನಿರ್ದೇಶನ ಮಾಡಿದ ಅನುರಾಗ್‌ ಕಶ್ಯಪ್‌, ಇದೀಗ ಅದರ ಎರಡನೇ ಭಾಗಕ್ಕೆ ಕೈಹಾಕಿದ ಬಗ್ಗೆ ಸುದ್ದಿಯಲ್ಲಿದ್ದಾರೆ. ಇದು ಮಾಧ್ಯಮದಲ್ಲಿ ತುಂಬ ಚರ್ಚೆಗೊಳಪಟ್ಟಿದೆ. ಇವರು ಹೃತಿಕ್‌ ರೋಶನ್‌ ಅಭಿನಯದ ‘ಸೂಪರ್‌ 30’ ಸಿನಿಮಾದಿಂದಲೂ ತುಂಬ ಸುದ್ದಿಯಲ್ಲಿದ್ದಾರೆ. ಈ ಸಿನಿಮಾಗೆ ಸಂಬಂಧಿಸಿದಂತೆ ಎದ್ದಿರುವ ಕೆಲವು ವಿವಾದಗಳ ಹಿನ್ನೆಲೆಯಲ್ಲಿ ಮತ್ತು ಅದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅವರು ಪ್ರತಿಕ್ರಿಯಿಸುವ ರೀತಿಯಿಂದಾಗಿಯೂ ಬಹು ಚರ್ಚೆಯಲ್ಲಿದ್ದಾರೆ. ಈ ಎಲ್ಲಾ ಅಂಶಗಳ ನೆಲೆಯಲ್ಲಿ ಕಶ್ಯಪ್‌ ಐದನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.

‘ಕರಣ್‌ ಜೋಹರ್‌ ಸ್ವತಃ ಒಂದು ಬ್ರ್ಯಾಂಡ್‌. ಅವರು ಕೇವಲ ಸಿನಿಮಾಗಳಿಗೆ ಸಂಬಂಧಿಸಿ ಮಾತ್ರವಲ್ಲ, ಜೀವನಶೈಲಿಗೆ ಸಂಬಂಧಿಸಿದಂತೆ ಟ್ರೆಂಡ್‌, ತುಂಬ ಬೋಲ್ಡ್‌ ಆದ ಸೋಷಿಯಲ್‌ ಲೈಫ್‌ನಲ್ಲಿ ಒಳಗೊಳ್ಳುವಿಕೆಯಂಥ ಚಟುವಟಿಕೆಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ಬಾಲಿವುಡ್‌ ನಟರ ಹಾಗೆ ಅವರಿಗೊಂದು ಫ್ಯಾನ್‌ ಫಾಲೋವಿಂಗ್‌ ಇದೆ. ಬಹುಶಃ ಬಾಲಿವುಡ್‌ನಲ್ಲಿ ಇವರೊಬ್ಬರೇ ಅಂಥ ಗ್ಲ್ಯಾಮರ್‌ ಬದುಕನ್ನು ಹೊಂದಿದ ಜನಪ್ರಿಯ ಸಿನಿಮಾ ನಿರ್ಮಾತೃ. ಮಾಸ್‌ ಮತ್ತು ಕ್ಲಾಸ್‌ ಎರಡರಲ್ಲೂ ಅವರಿಗೆ ಜನಪ್ರಿಯತೆ ಇದೆ’ ಎನ್ನುತ್ತಾರೆ ಸ್ಕೋರ್‌ ಟ್ರೆಂಡ್ಸ್‌ನ ಸಹ ಸಂಸ್ಥಾಪಕ ಅಶ್ವನಿ ಕೌಲ್‌.

‘ಒಟ್ಟು ಹದಿನಾಲ್ಕು ಭಾರತೀಯ ಭಾಷೆಗಳಲ್ಲಿ ಲಭ್ಯ 600ಕ್ಕೂ ಹೆಚ್ಚು ಸುದ್ದಿಸಂಸ್ಥೆ ಮೂಲಗಳು, ಫೇಸ್‌ಬುಕ್‌, ಟ್ವಿಟರ್‌, ಮುದ್ರಣ ಪ್ರಕಾಶನಗಳು, ರೇಡಿಯೊ, ಡಿಜಿಟಲ್‌ ವೇದಿಕೆಗಳು ಮತ್ತು ಇತರ ಸುದ್ದಿ ಮೂಲಗಳಿಂದ ಈ ಅಂಕಿ ಅಂಶಗಳನ್ನು ಕ್ರೋಢೀಕರಿಸಲಾಗಿದೆ. ಈ ಎಲ್ಲ ಅಂಕಿ ಅಂಶಗಳ ಪರಿಶೀಲನೆ ಮತ್ತು ಪರಿಷ್ಕರಣೆ ನಡೆಸಿ ಫಲಿತಾಂಶವನ್ನು ನೀಡಲಾಗುತ್ತದೆ. ಇದರಿಂದ ಬಾಲಿವುಡ್‌ ತಾರೆಯರ ಸ್ಕೋರ್‌ ಮತ್ತು ರ್‍ಯಾಂಕಿಂಗ್‌ ನಿರ್ಧರಿಸುವುದು ಸುಲಭವಾಗುತ್ತದೆ’ ಎಂದೂ ಕೌಲ್‌ ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.