ADVERTISEMENT

ಬರಲಿದೆ ಕರಣ್ ‘ಪ್ರೇಮಕತೆ’

ಕರಣ್ ಜೋಹರ್ ಹೊಸ ಷೋ

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 19:30 IST
Last Updated 3 ಜೂನ್ 2019, 19:30 IST
ಕರಣ್ ಜೋಹರ್
ಕರಣ್ ಜೋಹರ್   

‘ಕಾಫಿ ವಿತ್ ಕರಣ್’ ಚಾಟ್ ಷೋ ಮೂಲಕ ಜನಪ್ರಿಯರಾಗಿದ್ದ ಬಾಲಿವುಡ್‌ನ ಖ್ಯಾತ ನಿರ್ದೇಶಕ ಕರಣ್ ಜೋಹರ್ ಈಗ ಮತ್ತೊಂದು ಹೊಸ ಚಾಟ್ ಷೋ ಆರಂಭಿಸಲಿದ್ದಾರೆ. ‘ವಾಟ್ ದಿ ಲವ್?’ (ಪ್ರೀತಿ ಎಂದರೇನು?) ಶೀರ್ಷಿಕೆಯಡಿ ಮೂಡಿಬರಲಿರುವ ಈ ಹೊಸ ಷೋನಲ್ಲಿ ಬಾಲಿವುಡ್ ನಟರ ಪತ್ನಿಯರು ತಮ್ಮ ಅಂತರಂಗವನ್ನು ಬಿಚ್ಚಿಡಲಿದ್ದಾರೆ.

ಸ್ಟಾರ್ ವರ್ಲ್ಡ್‌ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಕಾಫಿ ವಿತ್ ಕರಣ್’ ಷೋ ಕರಣ್‌ಗೆ ಸಾಕಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ‘ವಾಟ್ ದಿ ಲವ್’ ಷೋ ಅನ್ನು ಕರಣ್ ಯಾವುದೇ ವಾಹಿನಿಗಾಗಿ ಮಾಡುತ್ತಿಲ್ಲ. ನೆಟ್‌ಫ್ಲಿಕ್ಸ್‌ಗಾಗಿ ಈ ಷೋ ಅನ್ನು ಕರಣ್ ನಡೆಸಿಕೊಡುತ್ತಿರುವುದು ವಿಶೇಷ.‘ವಾಟ್‌ ದಿ ಲವ್’ ಷೋಗಾಗಿ ವಿಶೇಷ ಸೆಟ್ ಸಿದ್ಧಪಡಿಸಲಾಗುತ್ತಿದೆ.

‘ವಾಟ್ ದಿ ಲವ್’ ಆತ್ಮೀಯ ಮಾತುಕತೆಯ ಷೋ. ಅದರಲ್ಲಿ ನಟರ ಪತ್ನಿಯರು ತಮ್ಮ ಪತಿ ಕುರಿತಾಗಿ ಇರುವ ಭಾವನೆಗಳನ್ನು ಹಂಚಿಕೊಳ್ಳಲಿದ್ದಾರೆ. ಜನಪ್ರಿಯ ನಟನ ಪತ್ನಿಯಾಗಿ ಅವರು ಎದುರಿಸಿದ ಸಮಸ್ಯೆಗಳು, ದಾಂಪತ್ಯದ ಬಿರುಕುಗಳು, ಕೌಟುಂಬಿಕ ಪ್ರೀತಿಯ ಜತೆಗೆ ಜೀವನದಲ್ಲಿ ಅವರು ಎದುರಿಸಿದ ಸವಾಲುಗಳ ಕುರಿತಾಗಿ ಮಾತುಕತೆ ನಡೆಯಲಿದೆ.

ADVERTISEMENT

ಈ ಷೋನಲ್ಲಿ ಕರಣ್‌ಗೆ ಶಾರುಕ್ ಖಾನ್ ಪತ್ನಿ ಗೌರಿ ಖಾನ್ ಮತ್ತು ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಅವರನ್ನು ಮಾತನಾಡಿಸುವ ಆಸೆಯಿದೆಯಂತೆ. ಈ ಷೋನಲ್ಲಿ ಬರೀ ಪತ್ನಿಯರು ಕಂಡಂತೆ ಗಂಡಂದಿರ ಬಗ್ಗೆಯಷ್ಟೇ ಅಲ್ಲ, ಜನಪ್ರಿಯ ನಟಿಯರು ಮದುವೆಯಾದ ಮೇಲೆ ಮಕ್ಕಳಿಗಾಗಿ ಬದಲಾದ ಪರಿ ಹಾಗೂ ಪುನಃ ಬೆಳ್ಳಿತೆರೆ ಪದಾರ್ಪಣೆ ಮಾಡಿದ ರೀತಿಯ ಕುರಿತೂ ಆಪ್ತ ಮಾತುಕತೆ ಇರುತ್ತದೆ. ಈ ಮಾತುಕತೆಗಳು ವಿಭಿನ್ನ ಒಟಿಟಿ ಫ್ಲಾಟ್‌ ಫಾರಂಗಳಲ್ಲಿ (ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಇತ್ಯಾದಿ) ಪ್ರಸಾರವಾಗಲಿವೆ.

ಕರಣ್ ಜೋಹರ್ ಕೈಯಲ್ಲಿ ಸದ್ಯಕ್ಕೆ ‘ತಕ್ತ್’ನಂಥ ಬಹು ತಾರಾಗಣದ ದೊಡ್ಡ ಬಜೆಟ್‌ನ ಸಿನಿಮಾವಿದೆ. ರಣವೀರ್ ಸಿಂಗ್, ವಿಕ್ಕಿ ಕೌಶಲ್, ಕರೀನಾ ಕಪೂರ್, ಅಲಿಯಾ ಭಟ್, ಭೂಮಿ ಪೆಡ್ನೇಕರ್, ಜಾನ್ವಿ ಕಪೂರ್ ಮತ್ತು ಅನಿಲ್ ಕಪೂರ್ ಅಭಿನಯದ ಈ ಚಿತ್ರದ ಶೂಟಿಂಗ್ ಮುಕ್ತಾಯವಾಗುವ ತನಕ ಕರಣ್ ಯಾವುದೇ ಟಾಕ್ ಷೋನಲ್ಲಿ ಕಾಣಿಸಿಕೊಳ್ಳುವುದಿಲ್ಲ. 2020ರ ವೇಳೆಗೆ ಕರಣ್ ಬಿಡುವಾಗುವ ನಿರೀಕ್ಷೆ ಇದ್ದು, ಆ ಸಮಯದಲ್ಲಿ ‘ವಾಟ್ ದಿ ಲವ್?’ ಟಾಕ್ ಷೋ ಆರಂಭವಾಗುವ ನಿರೀಕ್ಷೆ ಇದೆ. ಈಚೆಗಷ್ಟೇ ನಡೆದ ಕರಣ್ ಜೋಹರ್ ಹುಟ್ಟುಹಬ್ಬಾಚರಣೆ ಸಂದರ್ಭದಲ್ಲಿ ನೆಟ್‌ಫ್ಲಿಕ್ಸ್ ‘ವಾಟ್ ದಿ ಲವ್’ ಷೋ ಕುರಿತು ಅಧಿಕೃತವಾಗಿ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿತ್ತು.

ಈ ಟ್ವೀಟ್ ಅನ್ನು ಹಂಚಿಕೊಂಡಿದ್ದ ಕರಣ್, ‘ಎಲ್ಲಿ ಕೆಮಿಸ್ಟ್ರಿ ಇರುತ್ತದೋ ಅಲ್ಲಿ ಖಂಡಿತಾ ದಾರಿಯಿದ್ದೇ ಇರುತ್ತದೆ. ನೆಟ್‌ಫ್ಲಿಕ್ಸ್‌ ಇಂಡಿಯಾದ ಕುಟುಂಬಕ್ಕೆ ನಾನು ನಾನು ಸೇರ್ಪಡೆಯಾಗುತ್ತಿದ್ದೇನೆ. ಬನ್ನಿ ಎಲ್ಲೆಡೆ ಪ್ರೀತಿ ಹಂಚೋಣ ‘ವಾಟ್ ದಿ ಲವ್?’ ಮೂಲಕ’ ಎಂದು ಕರಣ್ ಬರೆದುಕೊಂಡಿದ್ದರು.

ಬಿಬಿಸಿ ಸ್ಟುಡಿಯೊ ಇಂಡಿಯಾ ‘ವಾಟ್ ದಿ ಲವ್’ ಷೋನ ನಿರ್ಮಾಣದ ಹೊಣೆ ಹೊತ್ತುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.