ADVERTISEMENT

ಚಿಮ್ಮಿ ಓಡಬಲ್ಲರೇ ಕತ್ರಿನಾ?

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2019, 13:02 IST
Last Updated 28 ಏಪ್ರಿಲ್ 2019, 13:02 IST
ಕತ್ರಿನಾ ಕೈಫ್‌
ಕತ್ರಿನಾ ಕೈಫ್‌   

ಬಾಲಿವುಡ್‌ ನಟಿ ಕತ್ರಿನಾ ಕೈಫ್‌ಳನ್ನು ಆಯ್ಕೆ ಮಾಡಿರುವ ಕುರಿತ ಚರ್ಚೆ ಇದು. ಬಳುಕುವ ಬಳ್ಳಿ ಕತ್ರಿನಾಗೂ, ಉಷಾಗೂ ಏನೇನೂ ಹೋಲಿಕೆಯಾಗುತ್ತಿಲ್ಲ ಎಂಬುದು ಚರ್ಚೆಯ ತಿರುಳು.

ಹೌದಲ್ಲ! ಕತ್ರಿನಾ ಕಡೆದಿಟ್ಟ ಶಿಲಾಬಾಲಿಕೆಯಂತೆ. ಉಷಾ? ಕಬ್ಬಿಣದಿಂದ ಎರಕ ಹೊಯ್ದಂತಹ ಮಾಂಸಖಂಡಗಳಿಂದ ಕೂಡಿದ ಸ್ಟೀಲ್‌ ಬಾಡಿಯ ಗಟ್ಟಿಗಿತ್ತಿ! ‘ಭಾರತದ ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ನ ರಾಣಿ’ ಎಂದೇ ಕರೆಸಿಕೊಂಡ ಸ್ಪ್ರಿಂಟ್‌ ತಾರೆ! ಮುಖಭಾವದಲ್ಲಾಗಲಿ, ನಗುವಿನಲ್ಲಾಗಲಿ ಗ್ಲಾಮರ್‌ನ ಗಂಧವರಿಯದ ಹಳ್ಳಿ ಹುಡುಗಿ ಉಷಾ ಅವರನ್ನು ಕತ್ರಿನಾ ಯಾವುದೇ ಕೋನದಿಂದಲೂ ಹೋಲುವುದಿಲ್ಲ. ಅಲ್ಲದೆ, ಗ್ಲಾಮರ್‌ ಇಲ್ಲದ ಚಿತ್ರವೊಂದರಲ್ಲಿ ಕತ್ರಿನಾ ಅವರನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ ಎಂಬುದು ಇಲ್ಲಿ ವ್ಯಕ್ತವಾಗುತ್ತಿರುವ ಪರ–ವಿರೋಧ ಚರ್ಚೆಗಳು.

ಹಿರಿಯ ಚಿತ್ರ ನಿರ್ದೇಶಕಿ ರೇವತಿ ಎಸ್.ವರ್ಮ ಅವರಿಗೆ ಉಷಾ ಪಾತ್ರವನ್ನು ವಿಶ್ವವಿಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಮಾಡಬೇಕು ಎಂಬ ಇರಾದೆ ಇತ್ತು. ಪಿಗ್ಗಿಗೆ ದಿನಾಂಕ ಹೊಂದಿಸಲು ಸಾಧ್ಯವಾಗದ ಕಾರಣ ಚೆಂಡು ಕತ್ರಿನಾ ಅಂಗಳಕ್ಕೆ ಬಂದಿತ್ತು. ‘ಭಾರತ್’ ಚಿತ್ರದ ಬಳಿಕ ಯಾವುದಾದರೂ ವಿಭಿನ್ನ ಕಥಾವಸ್ತುವಿನಲ್ಲಿ ನಟಿಸುವ ಆಸಕ್ತಿ ಹೊಂದಿದ್ದ ಕತ್ರಿನಾಗೆ ಪಿ.ಟಿ.ಉಷಾ ಪಾತ್ರ ಇಷ್ಟವಾಗಿದೆ.

ADVERTISEMENT

ರೇವತಿ ಮತ್ತು ಕತ್ರಿನಾ ಈಗಾಗಲೇ ಹಲವು ಸುತ್ತಿನ ಮಾತುಕತೆಗಳನ್ನು ಮುಗಿಸಿದ್ದಾರೆ. ಚಿಗರೆಯಂತೆ ವೇಗವಾಗಿ ಓಡುವ ಉಷಾ ತಮ್ಮದೇ ಶೈಲಿಯನ್ನು ರೂಢಿಸಿಕೊಂಡವರು. ಓಡುವಾಗ ಅವರ ಮಂಡಿಯಿಂದ ಪಾದದವರೆಗೂ 90 ಡಿಗ್ರಿ ನೇರವಾಗಿರುವುದು ವಿಶೇಷ. ಇಡೀ ಕಾಲು ಇಂಗ್ಲಿಷ್‌ನ ಎಲ್‌ ಅಕ್ಷರ ಬರೆದಂತೆ ಕಾಣಿಸುತ್ತದೆ. ಬೆನ್ನು, ಕತ್ತು ನೇರವಾಗಿರುತ್ತದೆ. ದೇಹ ಬಿರುಸಾಗಿ ನರಗಳು ಎದ್ದುನಿಲ್ಲುತ್ತವೆ. ಒಟ್ಟಿನಲ್ಲಿ ಉಷಾ ಅವರಂತೆ ಹೆಜ್ಜೆ ಹೆಜ್ಜೆಗೂ ಚಿಮ್ಮುತ್ತಾ ಓಡುವ ಶೈಲಿಯನ್ನು ಅರಗಿಸಿಕೊಳ್ಳಬೇಕಾದರೆ ಕತ್ರಿನಾಗೆ ಎಷ್ಟು ಕಾಲಾವಕಾಶ ಬೇಕಾದೀತೋ ಎಂದು ನೆಟಿಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಈ ಎಲ್ಲಾ ಅಂಶಗಳನ್ನು ರೇವತಿ ಅವರೊಂದಿಗೆ ಕತ್ರಿನಾ ಚರ್ಚಿಸಿದ್ದಾರೆ. ಉಷಾ ಅವರಿಂದಲೇ ಕತ್ರಿನಾಗೆ ತರಬೇತಿ ಕೊಡಿಸುವ ಆಲೋಚನೆಯೂ ಅವರಲ್ಲಿದೆ.

ಆನಂದ್‌ ಎಲ್‌. ರಾಯ್ ಅವರ ‘ಜೀರೊ’ದಲ್ಲಿನ ನಟನೆಯಿಂದ ತನ್ನ ತಾರಾಮೌಲ್ಯವನ್ನು ಹತ್ತು ಪಟ್ಟು ಹೆಚ್ಚಿಸಿಕೊಂಡ ಕತ್ರಿನಾ, ಚಿತ್ರಕತೆ ಮತ್ತು ಪಾತ್ರದ ಆಯ್ಕೆ ಬಗ್ಗೆ ಯಾವತ್ತೂ ಬಹಳ ಚೂಸಿ.

ಗ್ಲಾಮರ್‌ ಇರಲಿ, ಇಲ್ಲದಿರಲಿ ತಾವು ಮಾಡುವ ಪಾತ್ರ ತಮ್ಮ ಸಿನಿಪಯಣದಲ್ಲಿ ಹೆಗ್ಗುರುತಾಗಿ ನಿಲ್ಲುವಂತಿರಬೇಕು ಎಂದು ಕತ್ರಿನಾ ಆಸೆಪಡುತ್ತಾರಂತೆ. ಪಿ.ಟಿ. ಉಷಾ ಪಾತ್ರ ಅಂತಹ ದೊಡ್ಡ ಸವಾಲನ್ನು ಕತ್ರಿನಾ ಮುಂದೆ ಇಟ್ಟಿರುವುದಂತೂ ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.