ADVERTISEMENT

ನಾನು ಬಿಕಿನಿ ಧರಿಸಲ್ಲ ಎಂದ ಕೀರ್ತಿ ಸುರೇಶ್‌

ಏಜೆನ್ಸೀಸ್
Published 11 ಮೇ 2020, 7:12 IST
Last Updated 11 ಮೇ 2020, 7:12 IST
ಕೀರ್ತಿ ಸುರೇಶ್‌
ಕೀರ್ತಿ ಸುರೇಶ್‌   

ಬಾಲಿವುಡ್‌ನಲ್ಲಿ ನಟೀಮಣಿಯರು ಬಿಕಿನಿ ಧರಿಸುವುದು ಸರ್ವೇ ಸಾಮಾನ್ಯ. ಬಿಕಿನಿ ತೊಟ್ಟು ದಿನಬೆಳಗಾಗುವುದರೊಳಗೆ ಬಣ್ಣದಲೋಕದಲ್ಲಿ ಸುದ್ದಿಯಾದ ನಟಿಯರ ಸಂಖ್ಯೆಯೂ ದೊಡ್ಡದು. ನಟಿಯರು ದೇಹದ ತೂಕ ಇಳಿಸಿಕೊಳ್ಳಲು ಮುಂದಾಗಿದ್ದಾರೆ ಎಂದಾಕ್ಷಣ ಬಿಕಿನಿ ಧರಿಸಲು ಈ ಹಾದಿ ತುಳಿದಿದ್ದಾರೆಯೇ ಎಂದು ಸಿನಿಪ್ರಿಯರು ಊಹಿಸುವುದು ಸಹಜ.

ಈಗ ಕೀರ್ತಿ ಸುರೇಶ್‌ ಅವರದ್ದು ತೂಕ ಇಳಿಸಿಕೊಳ್ಳುವ ಸರದಿ. ‘ಮಹಾನಟಿ’ ಸಿನಿಮಾದಲ್ಲಿನ ಅದ್ಭುತ ನಟನೆಗಾಗಿ ರಾಷ್ಟ್ರಪ್ರಶಸ್ತಿಯು ಕೀರ್ತಿ ಅವರ ಮುಡಿಗೇರಿತ್ತು. ಎರಡು ವರ್ಷದ ಹಿಂದೆ ತೆರೆಕಂಡ ಇದು ದಕ್ಷಿಣ ಭಾರತದ ನಟಿ ಸಾವಿತ್ರಿ ಅವರ ಬಯೋಪಿಕ್. ಈ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಕೀರ್ತಿಗೆ ತೆಲುಗು, ತಮಿಳು ಮತ್ತು ಮಲಯಾಳ ಚಿತ್ರರಂಗದಲ್ಲಿ ಅವಕಾಶಗಳ ಹೆಬ್ಬಾಗಿಲು ತೆರೆಯಿತು. ರಜನಿಕಾಂತ್‌, ಮೋಹನ್‌ಲಾಲ್‌ ಅವರ ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚುವ ಅವಕಾಶವೂ ಆಕೆಗೆ ಸಿಕ್ಕಿದೆ.

ಬಿಕಿನಿ ಧರಿಸುವ ಸಲುವಾಗಿ ತೂಕ ಇಳಿಸಿಕೊಳ್ಳಲು ಹೊರಟಿದ್ದಾರೆ ಎಂಬ ಸುದ್ದಿಯ ಬಗ್ಗೆ ಆಕೆಯೇ ಇತ್ತೀಚೆಗೆ ನಡೆದ ಮಾಧ್ಯಮ ಸಂವಾದದಲ್ಲಿ ಸ್ಪಷ್ಟಪಡಿಸಿದ್ದಾರೆ. ‘ದೇಹದ ತೂಕ ಇಳಿಸಿಕೊಳ್ಳಲು ನಾನು ತೆಗೆದುಕೊಂಡಿರುವ ನಿರ್ಧಾರ ನಿನ್ನೆ ಮೊನ್ನೆಯದಲ್ಲ. ಒಂದು ವರ್ಷದ ಹಿಂದೆಯೇ ಈ ತೀರ್ಮಾನ ಕೈಗೊಂಡಿದ್ದೆ. ಹಾಗಾಗಿಯೇ, ದಿನನಿತ್ಯವೂ ದೇಹ ದಂಡಿಸುತ್ತಿದ್ದೇನೆ. ನನಗೆ ಬಿಕಿನಿ ಧರಿಸುವುದು ಆರಾಮದಾಯಕವಲ್ಲ. ಹಾಗಾಗಿಯೇ, ದೊಡ್ಡ ಚಿತ್ರದಲ್ಲಿ ನಟಿಸುವ ಅವಕಾಶವನ್ನೂ ಕೈಬಿಡಬೇಕಾಯಿತು’ ಎಂದಿದ್ದಾರೆ.

ADVERTISEMENT

ಸಿರುಥೈ ಶಿವ ನಿರ್ದೇಶಿಸುತ್ತಿರುವ ರಜನಿಕಾಂತ್‌ ನಟನೆಯ ‘ಅಣ್ಣಾತೆ’ ಚಿತ್ರದಲ್ಲಿ ‘ತಲೈವ’ನ ಪುತ್ರಿಯಾಗಿ ಕೀರ್ತಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ನಿತಿನ್‌ ನಾಯಕರಾಗಿರುವ ‘ರಂಗ್ ದೇ’ ಚಿತ್ರದಲ್ಲೂ ಅವರೇ ನಾಯಕಿ. ಮೋಹನ್‌ ಲಾಲ್‌ ನಾಯಕರಾಗಿ ಮಲಯಾಳದ ಬಿಗ್ ‌ಬಜೆಟ್‌ ಚಿತ್ರ ‘ಅರಬಿ ಕಡಲಿಂಟೆ ಸಿಂಹಮ್‌’ ಸಿನಿಮಾದಲ್ಲೂ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.