ADVERTISEMENT

ವಂಚನೆ ಪ್ರಕರಣ: ಬಾಲಿವುಡ್ ನಟಿ ಸನ್ನಿ ಲಿಯೋನ್ ಬಂಧನಕ್ಕೆ ಕೇರಳ ಹೈಕೋರ್ಟ್ ತಡೆ

ಪಿಟಿಐ
Published 10 ಫೆಬ್ರುವರಿ 2021, 11:00 IST
Last Updated 10 ಫೆಬ್ರುವರಿ 2021, 11:00 IST
ನಟಿ ಸನ್ನಿ ಲಿಯೋನ್
ನಟಿ ಸನ್ನಿ ಲಿಯೋನ್   

ಕೊಚ್ಚಿ: ಹಣಕಾಸು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಮತ್ತು ಇತರ ಇಬ್ಬರನ್ನು ಬಂಧಿಸದಂತೆ ಕೇರಳ ಹೈಕೋರ್ಟ್ ಬುಧವಾರ ತಡೆನೀಡಿದೆ.

ಸುಮಾರು ₹ 29 ಲಕ್ಷ ಹಣವನ್ನು ಸ್ವೀಕರಿಸಿಯೂ 2019ರಲ್ಲಿ ಕೊಚ್ಚಿಯಲ್ಲಿ ನಡೆದ ಪ್ರೇಮಿಗಳ ದಿನದ ಸಮಾರಂಭದಲ್ಲಿ ಪಾಲ್ಗೊಳ್ಳಲು ನಟಿ ವಿಫಲರಾಗಿದ್ದಾರೆ ಎಂದು ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯೊಂದು ದೂರು ನೀಡಿತ್ತು.

ಸನ್ನಿ ಲಿಯೋನ್ ಅಲಿಯಾಸ್ ಕರೆನ್ಜ್ ಕೌರ್ ವೊಹ್ರಾ, ಸನ್ನಿ ಲಿಯೋನ್ ಅವರ ಪತಿ ಡೇನಿಯಲ್ ವೆಬರ್ ಮತ್ತು ಇನ್ನೊಬ್ಬ ವ್ಯಕ್ತಿಯಿಂದ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್ ಮೆನನ್ ಅವರು ಮಧ್ಯಂತರ ಆದೇಶ ಹೊರಡಿಸಿದ್ದಾರೆ.

ADVERTISEMENT

ಸಿಆರ್‌ಪಿಸಿ 41 (ಎ) (ಪೊಲೀಸರ ಮುಂದೆ ಹಾಜರಾಗಲು ಸೂಚನೆ) ಪ್ರಕಾರ ಅರ್ಜಿದಾರರಿಗೆ ನೋಟಿಸ್ ನೀಡುವವರೆಗೂ ಅವರನ್ನು ಬಂಧಿಸದಂತೆ ನ್ಯಾಯಾಲಯ ಅಪರಾಧ ದಳಕ್ಕೆ ನಿರ್ದೇಶನ ನೀಡಿದೆ.

ಸನ್ನಿ ಲಿಯೋನ್ ಅವರ ವಿರುದ್ಧ ದೂರು ದಾಖಲಿಸಿದ್ದ ಶಿಯಾಜ್‌ಗೆ ನ್ಯಾಯಾಲಯ ನೋಟಿಸ್ ನೀಡಿದೆ. ದೂರಿನ ಸಂಬಂಧ ಫೆಬ್ರವರಿ 03 ರಂದು ತಿರುವನಂತಪುರಂನಲ್ಲಿ ಕೊಚ್ಚಿ ಅಪರಾಧ ವಿಭಾಗದ ಅಧಿಕಾರಿಗಳು ಸನ್ನಿಲಿಯೋನ್ ಅವರನ್ನು ವಿಚಾರಣೆ ನಡೆಸಿದ್ದರು. ಲಿಯೋನ್ ವಿರುದ್ಧ ಐಪಿಸಿಯ 406 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ) ಮತ್ತು 420 (ಮೋಸ) ಸೇರಿದಂತೆ ಐಪಿಸಿಯ ವಿವಿಧ ವಿಭಾಗಗಳ ಅಡಿಯಲ್ಲಿ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ತಾವು ಆಯೋಜಿಸಿದ್ದ ಸಮಾರಂಭಕ್ಕೆ ಮಾಜಿ ಬಿಗ್ ಬಾಸ್ ಸ್ಪರ್ಧಿ ಸನ್ನಿ ಲಿಯೋನ್ ಹಾಜರಾಗಲಿಲ್ಲ ಎಂದು ಸಂಘಟಕರು ಸಮರ್ಥಿಸಿಕೊಂಡಿದ್ದರೆ, ಲಿಯೋನ್ ತಾನು ಎರಡು ಬಾರಿ ಬಂದಿದ್ದೇನೆ. ಆದರೆ ಕಾರ್ಯಕ್ರಮವೇ ನಡೆದಿಲ್ಲ ಎಂದು ಹೇಳಿದ್ದಾರೆ.

ಸಮಾರಂಭವನ್ನು ಹಲವಾರು ಬಾರಿ ಮುಂದೂಡುವಂತಾದರೂ, ಅಂತಿಮವಾಗಿ ಕೊಚ್ಚಿ ಬಳಿಯ ಅಂಗಮಲ್ಲಿಯ ಆಡ್ಲಕ್ಸ್ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಸಂಘಟಕರು ಹಲವಾರು ಬಾರಿ ಕಾರ್ಯಕ್ರಮವನ್ನು ಮರು ನಿಗದಿಪಡಿಸಿದ್ದಾರೆ ಮತ್ತು ಅದು ನನ್ನಿಂದ ಉಂಟಾದ ಅನಾನುಕೂಲತೆಯಿಂದಾಗಿ ಅಲ್ಲ ಎಂದು ಸನ್ನಿಲಿಯೋನ್ ತಿಳಿಸಿರುವುದಾಗಿ ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.