ಬೆಂಗಳೂರು: ಚಲನಚಿತ್ರ ನಿರ್ದೇಶಕಿ, ನಿರ್ಮಾಪಕಿ ಕವಿತಾ ಲಂಕೇಶ್ ಅಧ್ಯಕ್ಷತೆಯಲ್ಲಿ ಲೈಂಗಿಕ ದೌರ್ಜನ್ಯ ತಡೆ ಸಮಿತಿ (ಪಾಶ್) ರಚಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು (ಕೆಎಫ್‌ಸಿಸಿ), ಮಂಡಳಿಯ ಚುನಾವಣೆಯ ಕಾರಣವನ್ನು ನೀಡಿ ಸಮಿತಿ ರಚನೆಯನ್ನು ತಡೆ ಹಿಡಿದಿದೆ.
ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಅಧ್ಯಯನಕ್ಕೆ ಕೇರಳ ಸರ್ಕಾರ ನೇಮಿಸಿದ್ದ ನ್ಯಾಯಮೂರ್ತಿ ಕೆ. ಹೇಮಾ ಸಮಿತಿಯ ವರದಿ ಬಹಿರಂಗಗೊಂಡ ಬೆನ್ನಲ್ಲೇ, ಕನ್ನಡ ಚಿತ್ರರಂಗದಲ್ಲೂ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಬೇಕು ಎನ್ನುವ ಕೂಗು ಕೇಳಿಬಂದಿತ್ತು. ಮೂರು ತಿಂಗಳ ಹಿಂದೆ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಆ್ಯಂಡ್ ಇಕ್ವಾಲಿಟಿ (ಫೈರ್) ಸದಸ್ಯರು ಮುಖ್ಯಮಂತ್ರಿಯನ್ನು ಭೇಟಿಯಾಗಿ ಈ ಬಗ್ಗೆ ಮನವಿಯನ್ನೂ ನೀಡಿದ್ದರು.
ಕನ್ನಡ ಚಿತ್ರರಂಗದ ಮಹಿಳಾ ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರ ರಕ್ಷಣೆಗಾಗಿ ಕೆಎಫ್‌ಸಿಸಿಯು ಸಾಧ್ಯವಾದಷ್ಟು ಬೇಗ ಪಾಶ್ ಸಮಿತಿ ರಚಿಸಬೇಕೆಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಕಳೆದ ಸೆ.16ರಂದು ಸೂಚಿಸಿದ್ದರು. ಆಗ ಸಮಿತಿ ರಚನೆಗೆ ಕೆಎಫ್‌ಸಿಸಿ ಕಾಲಾವಧಿ ಕೇಳಿತ್ತು. ಎರಡು ತಿಂಗಳು ಕಳೆದರೂ ಸಮಿತಿ ರಚಿಸದೇ ಇರುವ ಕುರಿತು ನಾಗಲಕ್ಷ್ಮಿ ಚೌಧರಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಕವಿತಾ ಲಂಕೇಶ್ ಅಧ್ಯಕ್ಷತೆಯಲ್ಲಿ 11 ಸದಸ್ಯರನ್ನೊಳಗೊಂಡ ಸಮಿತಿ ರಚಿಸುವ ನಿರ್ಧಾರವನ್ನು ಕೆಎಫ್‌ಸಿಸಿ ಅಧ್ಯಕ್ಷ ಎನ್.ಎಂ.ಸುರೇಶ್ ಮಾಡಿದ್ದರು.
ಆಯಾ ಅವಧಿಯ ಚುನಾಯಿತ ಕೆಎಫ್‌ಸಿಸಿ ಅಧ್ಯಕ್ಷ, ನಟಿ ಪ್ರಮೀಳಾ ಜೋಷಾಯ್, ಮಹಿಳಾ ಹಕ್ಕು ಹೋರಾಟಗಾರ್ತಿ ವಿಮಲಾ ಕೆ.ಎಸ್., ವಕೀಲರಾದ ರಾಜಲಕ್ಷ್ಮೀ ಅಂಕಲಗಿ, ಟ್ರಾನ್ಸ್‌ಜೆಂಡರ್ ಆ್ಯಕ್ಟಿವಿಸ್ಟ್ ಮಲ್ಲು ಕುಂದಾರ್, ನಟಿ ಶ್ರುತಿ ಹರಿಹರನ್, ನಿರ್ಮಾಪಕ ಎನ್.ಎಂ.ಸುರೇಶ್, ಪತ್ರಕರ್ತ ಮುರುಳೀಧರ್ ಖಜಾನೆ, ಸ್ತ್ರೀವಾದಿ ಮತ್ತು ರಂಗಕರ್ಮಿ ಶಶಿಕಾಂತ್ ಯೆದನಹಳ್ಳಿ, ನಿರ್ಮಾಪಕ ಸಾ.ರಾ.ಗೋವಿಂದು ಸಮಿತಿ ಸದಸ್ಯರು ಎಂದು ನಿರ್ಧರಿಸಲಾಗಿತ್ತು. ಈ ನಿರ್ಧಾರವನ್ನು ಇದೀಗ ಕೆಎಫ್‌ಸಿಸಿ ತಡೆಹಿಡಿದಿದೆ.
ಡಿ.14ಕ್ಕೆ ಚುನಾವಣೆ: ‘ಮಂಡಳಿಯ ಚುನಾವಣೆ ಘೋಷಣೆಯಾಗಿದೆ. ನೀತಿ ಸಂಹಿತೆ ಜಾರಿಯಲ್ಲಿದೆ. ಡಿ.14ಕ್ಕೆ ಚುನಾವಣೆ ನಡೆಯಲಿದ್ದು ಅಲ್ಲಿಯವರೆಗೆ ಪಾಶ್ ಸಮಿತಿ ರಚನೆಯನ್ನು ತಡೆ ಹಿಡಿದಿದ್ದೇವೆ. ನಾವು ಸಮಿತಿ ರಚಿಸಿದ್ದೆವು. ನಾನು ಅಧ್ಯಕ್ಷನಾಗಿ ಸಹಿ ಮಾಡಿದರೆ ಅದು ಊರ್ಜಿತವಾಗುವುದಿಲ್ಲ. ನನಗೆ ಕಾನೂನು ಪ್ರಕಾರ ಸದ್ಯ ಯಾವ ಅಧಿಕಾರವೂ ಇಲ್ಲ. ಡಿ.14ರ ಚುನಾವಣೆ ಬಳಿಕ ಸಮಿತಿ ರಚನೆಯಾಗಲಿದೆ. ಈ ವಿಷಯವನ್ನು ಮಹಿಳಾ ಆಯೋಗಕ್ಕೂ ತಿಳಿಸಿದ್ದೇವೆ’ ಎಂದರು ಎನ್.ಎಂ.ಸುರೇಶ್.
‘ಸಮಿತಿ ರಚನೆಯನ್ನು ತಡೆಹಿಡಿದಿರುವುದಕ್ಕೆ ಚುನಾವಣೆಯ ಕಾರಣವನ್ನು ಕೆಎಫ್‌ಸಿಸಿ ನೀಡಿದೆ. ನನಗಿರುವ ಮಾಹಿತಿಯಂತೆ ಕೆಲವರು ಸಮಿತಿ ಹಾಗೂ ಅದರಲ್ಲಿರುವ ಸದಸ್ಯರ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಂದು ಸಭೆಯಲ್ಲಿ ಪಾಶ್ ಸಮಿತಿ ರಚನೆಗೆ ವಿರೋಧ ವ್ಯಕ್ತಪಡಿಸಿದವರೇ ಇಂದು ಸಮಿತಿ ಸದಸ್ಯರಾಗಬೇಕು ಎಂದು ಆಗ್ರಹಿಸಿದ್ದಾರೆ. ಹೀಗಾದರೆ ಮುಂದೆ ಏನಾಗಬಹುದು ಎಂದು ಯೋಚಿಸಿ’ ಎಂದು ಕವಿತಾ ಲಂಕೇಶ್ ಪ್ರಶ್ನಿಸಿದರು. ‘ಸೆಪ್ಟೆಂಬರ್‌ನಲ್ಲಿ ನಾಗಲಕ್ಷ್ಮಿ ಚೌಧರಿ ಅವರು ಬಂದ ಬಳಿಕ ಸಮಿತಿ ರಚನೆ ಬಗ್ಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದೆವು. ನ್ಯಾಯಾಲಯದ ಮೆಟ್ಟಿಲೇರಿದರೆ ಈ ಪಾಶ್ ಸಮಿತಿ ರಚನೆಗೆ ಕೆಎಫ್‌ಸಿಸಿ ಕಾರ್ಯಕಾರಿ ಸಮಿತಿ ಒಪ್ಪಿಗೆ ಬೇಕಾಗಿಯೇ ಇಲ್ಲ. ಪಾಶ್ ಸಮಿತಿಗೆ ಬೇರೆ ಬೇರೆ ಕ್ಷೇತ್ರದ ಸದಸ್ಯರು ಇರಬೇಕು. ಮಹಿಳೆಯೇ ಅಧ್ಯಕ್ಷೆಯಾಗಿರಬೇಕು. ಹೀಗಾಗಿಯೇ ಮಾತುಕತೆ ನಡೆಸಿಯೇ ಈ ಸಮಿತಿ ರಚಿಸಿದ್ದೆವು. ನನಗೆ ಆ ಸಮಿತಿಯ ಅಧ್ಯಕ್ಷಳಾಗಬೇಕು ಎನ್ನುವ ಯಾವ ಆಸೆಯೂ ಇರಲಿಲ್ಲ. ‘ನೀವು ಕೆಎಫ್‌ಸಿಸಿ ಸದಸ್ಯೆಯಾಗಿದ್ದು ಫೈರ್ ಸಂಸ್ಥೆಯ ಅಧ್ಯಕ್ಷರಾಗಿದ್ದೀರಿ. ಹೀಗಾಗಿ ನೀವೇ ಅಧ್ಯಕ್ಷರಾಗಿ’ ಎಂದು ಎನ್.ಎಂ.ಸುರೇಶ್ ಹೇಳಿದರು. ಎಲ್ಲರ ಒಪ್ಪಿಗೆ ಪಡೆದೇ ಸದಸ್ಯರನ್ನು ಆಯ್ಕೆ ಮಾಡಿದ್ದೆವು’ ಎಂದು ಕವಿತಾ ಲಂಕೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.