ADVERTISEMENT

ಕೆಜಿಎಫ್‌ 2 ಚಿತ್ರೀಕರಣಕ್ಕೆ ತಡೆ: ಸೆ.5ಕ್ಕೆ ವಿಚಾರಣೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2019, 12:15 IST
Last Updated 31 ಆಗಸ್ಟ್ 2019, 12:15 IST
   

ಕೆಜಿಎಫ್‌: ಪರಿಸರ ಹಾನಿ ಆರೋಪದ ಮೇರೆಗೆ ‘ಕೆ.ಜಿ.ಎಫ್. ಚಾಪ್ಟರ್‌–2’ ಸಿನಿಮಾ ಚಿತ್ರೀಕರಣಕ್ಕೆ ನೀಡಿರುವ ತಡೆಯಾಜ್ಞೆಯ ವಿಚಾರಣೆಯನ್ನು ಜೆಎಂಎಫ್‌ಸಿ ನ್ಯಾಯಾಧೀಶ ಕಿರಣ್‌ ಅವರುಸೆಪ್ಟೆಂಬರ್‌ 5ಕ್ಕೆ ಮುಂದೂಡಿದರು.

ಚಿತ್ರ ತಂಡದ ವಕೀಲ ಎಚ್‌.ಶಾಂತಿಭೂಷಣ್‌ ಅವರು ಶನಿವಾರ ವಾದ ಮಂಡಿಸಿ, ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುವ ಅಧಿಕಾರ ಸಿವಿಲ್‌ ನ್ಯಾಯಾಲಯಕ್ಕೆ ಇಲ್ಲ. ಈ ಪ್ರಕರಣ ಸಾರ್ವಜನಿಕ ಹಿತಾಸಕ್ತಿಗೆ ಒಳಪಡುವುದರಿಂದ ಬೇರೆ ವೇದಿಕೆಯಲ್ಲಿ ವಿಚಾರಣೆ ನಡೆಸಬೇಕಾಗಿತ್ತು. ಚಿತ್ರೀಕರಣ ನಡೆಸುತ್ತಿರುವ ಜಾಗ ಭಾರತ್‌ ಗೋಲ್ಡ್‌ ಮೈನ್ಸ್‌ ಲಿಮಿಟೆಡ್‌ಗೆ(ಬಿಜಿಎಂಎಲ್‌) ಸೇರಿದ್ದು. ಬಿಜಿಎಂಎಲ್‌ನ ಮುಖ್ಯ ಭದ್ರತಾ ಅಧಿಕಾರಿ ಚಿತ್ರೀಕರಣ ನಡೆಸಲು ಹೊಂಬಾಳೆ ಫಿಲ್ಮ್‌ ತಂಡಕ್ಕೆ ಅನುಮತಿ ನೀಡಿದ್ದಾರೆ. ಕಂಪನಿ ಆಸ್ತಿ ನಷ್ಟವಾದರೆ, ಅದನ್ನು ಭರಿಸಲು ನಿರ್ಮಾಣ ತಂಡ ಸಿದ್ಧವಿದೆ. ಅದಕ್ಕಾಗಿ ₹ 5 ಲಕ್ಷ ಠೇವಣಿ ಇಟ್ಟಿದೆ ಎಂದರು.

ನಿರ್ಜನ ಪ್ರದೇಶದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಅಲೋವೆರ ಪೊದೆ ಅಲ್ಲಲ್ಲಿ ಇದೆ. ಅದು ಮರ ಅಲ್ಲ. ಯಾವುದೇ ಮರವನ್ನು ಚಿತ್ರತಂಡ ಕಡಿದಿಲ್ಲ. ಜಾಗಕ್ಕೆ ದಿನದ ಬಾಡಿಗೆ ಆಧಾರದಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ. ಅರ್ಜಿದಾರರು ನ್ಯಾಯಾಲಯವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ಚಿತ್ರೀಕರಣದ ವೇಳೆ ಕಾನೂನು ಉಲ್ಲಂಘನೆಯಾಗಿಲ್ಲ. ಎಲ್ಲ ಅನುಮತಿಗಳನ್ನು ಪಡೆಯಲಾಗಿದೆ. ಪೊಲೀಸ್ ಇಲಾಖೆಗೆ ₹ 1,20,500 ಪಾವತಿಸಲಾಗಿದೆ. ಅರ್ಜಿದಾರರು ಹಣ ಕೀಳುವುದಕ್ಕಾಗಿ ಈ ರೀತಿಯ ತಂತ್ರ ನಡೆಸಿದ್ದಾರೆ ಎಂದು ದೂರಿದರು.

ನಿಷೇಧಿತ ಪ್ರದೇಶದಲ್ಲಿ ಚಿತ್ರೀಕರಣ ನಡೆಸಿಲ್ಲ. ಚಿತ್ರ ನಿರ್ಮಾಣದ ವೇಳೆ ನಿತ್ಯ 1000ಕ್ಕೂ ಹೆಚ್ಚು ಜನರಿಗೆ ಕೆಲಸ ಸಿಕ್ಕಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಅರ್ಜಿದಾರರು ರಾಜಕೀಯ ಪಕ್ಷಕ್ಕೆ ಸೇರಿದವರಾಗಿದ್ದಾರೆ. ಅವರು ಸಮಾಜದ ಉದ್ಧಾರ ಮಾಡಲಿ. ಸಾವಿರಾರು ಜನರ ಅನ್ನ ಕಸಿಯದಿರಲಿ. ಸೈನೈಡ್‌ ಗುಡ್ಡದ ಒಂದು ಟನ್‌ ಮಣ್ಣಿನಲ್ಲಿ 10 ಗ್ರಾಂ ಚಿನ್ನ ಸಿಗುತ್ತದೆ ಎಂದು ಅರ್ಜಿದಾರರು ತಿಳಿಸಿದ್ದಾರೆ. ಅಲ್ಲಿರುವ ಯಾವುದೇ ವಸ್ತುವನ್ನು ಚಿತ್ರತಂಡ ಮುಟ್ಟುವುದಿಲ್ಲ ಎಂದು ಶಾಂತಿಭೂಷಣ್‌ ತಿಳಿಸಿದರು.

ಚಿತ್ರೀಕರಣದ ಕುರಿತು ಕಾನೂನು ಸೇವಾ ಸಮಿತಿಗೂ ದೂರು ಬಂದಿದೆ. ಸೈನೈಡ್ ಗುಡ್ಡದ ಮೇಲೆ ಅಲೋವೆರ ಜತೆಗೆ ಹೊಂಗೆ ಗಿಡಗಳು ಸಹ ಇವೆ ಎಂಬ ಮಾಹಿತಿ ದೂರಿನಲ್ಲಿದೆ ಎಂದು ನ್ಯಾಯಾಧೀಶ ಕಿರಣ್‌ ಹೇಳಿದರು.

ಅರ್ಜಿದಾರ ಶ್ರೀನಿವಾಸ್‌ ಪರವಾಗಿ ವಕೀಲ ಜಗನ್ನಾಥ್‌ ಅವರು ವಾದ ಮಂಡಿಸಲು ಸಿದ್ಧರಾಗಿದ್ದರು. ಆಗ ವಿಚಾರಣೆಯನ್ನು ಮಂದೂಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.