ADVERTISEMENT

ಕೆಜಿಎಫ್‌ ಟಿಕೆಟ್‌ ಮುಂಗಡ ಬುಕಿಂಗ್ ಆರಂಭ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 10:47 IST
Last Updated 18 ಡಿಸೆಂಬರ್ 2018, 10:47 IST
   

ನಟ ಯಶ್ ವೃತ್ತಿ ಜೀವನದ ಅತ್ಯಂತ ಮಹತ್ವದ ಚಿತ್ರ ‘ಕೆಜಿಎಫ್‌’ ಶುಕ್ರವಾರ ದೇಶದಾದ್ಯಂತ ತೆರೆಗೆ ಬರುತ್ತಿದ್ದು, ಟಿಕೆಟ್‌ಗಳ ಮುಂಗಡ ಬುಕಿಂಗ್‌ ಆರಂಭವಾಗಿದೆ. ಟಿಕೆಟ್‌ ಬುಕಿಂಗ್‌ ಆರಂಭವಾದಷ್ಟೇ ವೇಗವಾಗಿ ಮಾರಾಟ ಕೂಡ ಆಗುತ್ತಿದೆ. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ ಅವು ‘ಹಾಟ್‌ ಕೇಕ್‌ನಂತೆ ಮಾರಾಟ ಆಗುತ್ತಿವೆ’!

ಕೆಜಿಎಫ್‌ ಚಿತ್ರ ಕನ್ನಡ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ (ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳ) ತೆರೆಗೆ ಬರುತ್ತಿದೆ. ಇಷ್ಟು ಭಾಷೆಗಳಲ್ಲಿ ಏಕಕಾಲಕ್ಕೆ ತೆರೆ ಕಾಣುತ್ತಿರುವ ಕನ್ನಡದ ಮೊದಲ ಚಿತ್ರ ಇದು.

‘ಚಿತ್ರದ ಮುಂಗಡ ಟಿಕೆಟ್ ಬುಕಿಂಗ್ ಭಾನುವಾರದಿಂದ ಆರಂಭವಾಗಿದ್ದು, ಸಿನಿಮಾ ಪ್ರೇಮಿಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎನ್ನುತ್ತಿವೆ ‘ಹೊಂಬಾಳೆ ಫಿಲಂಸ್‌’ ಮೂಲಗಳು. ಈ ಚಿತ್ರಕ್ಕೆ ಹಣ ಹೂಡಿಕೆ ಮಾಡಿರುವುದು ‘ಹೊಂಬಾಳೆ ಫಿಲಂಸ್‌’ನ ವಿಜಯ್ ಕಿರಗಂದೂರು.

ADVERTISEMENT

ಸಿನಿಮಾ ಟಿಕೆಟ್‌ಗಳ ಆನ್‌ಲೈನ್‌ ಮಾರಾಟ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿರುವ ಬುಕ್‌ಮೈಶೋ.ಕಾಂ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿ ಅನುಸಾರ, ಕೆಜಿಎಫ್‌ ಚಿತ್ರದ ಟಿಕೆಟ್‌ಗಳು ಬೆಂಗಳೂರಿನ ಕೆಲವು ಚಿತ್ರಮಂದಿರಗಳಲ್ಲಿ, ಮಲ್ಟಿಪ್ಲೆಕ್ಸ್‌ಗಳಲ್ಲಿ ಈಗಾಗಲೇ ಮಾರಾಟ ಆಗಿಬಿಟ್ಟಿವೆ. ಇನ್ನು ಕೆಲವು ಕಡೆ ಸೀಟುಗಳು ಬಹುತೇಕ ಮಾರಾಟ ಆಗಿವೆ.

‘ಅಮೆರಿಕ, ದುಬೈ ಮತ್ತು ಇಂಗ್ಲೆಂಡ್‌ಗಳಲ್ಲಿ ಕೂಡ ಚಿತ್ರ ತೆರೆಗೆ ಬರಲಿದೆ. ದೇಶದಲ್ಲಿ ಒಟ್ಟು 1,500ಕ್ಕೂ ಹೆಚ್ಚಿನ ಚಿತ್ರಪರದೆಗಳ ಮೇಲೆ ಮೂಡಿಬರಲಿದೆ. ಕರ್ನಾಟಕದಲ್ಲಿ ಬಹುಮಟ್ಟಿಗೆ ತೆರೆಗೆ ಬರುವುದು ಸಿನಿಮಾದ ಕನ್ನಡ ಆವೃತ್ತಿ ಮಾತ್ರ. ನಮ್ಮ ರಾಜ್ಯದಲ್ಲಿ ಕೆಜಿಎಫ್‌ನ ಬೇರೆ ಭಾಷೆಯ ಆವೃತ್ತಿಗಳು ತೆರೆಗೆ ಬರುವುದು ತೀರಾ ಕಡಿಮೆ ಪ್ರಮಾಣದಲ್ಲಿ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.