ADVERTISEMENT

ಪಾಪ, ಪುಣ್ಯದ ಖನನ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 19:30 IST
Last Updated 4 ಏಪ್ರಿಲ್ 2019, 19:30 IST
ರಾಧಾ
ರಾಧಾ   

‘ಖನನ’ ಸಂಸ್ಕೃತ ಮೂಲದ ಪದ. ಹೂತಾಕು, ಮುಚ್ಚಾಕು ಎನ್ನುವುದು ಇದರರ್ಥ. ಈ ಹೆಸರು ಇಟ್ಟುಕೊಂಡೇ ಸಸ್ಪೆನ್ಸ್‌, ಥ್ರಿಲ್ಲರ್‌ ಕಥೆ ಹೊಸೆದಿದ್ದಾರೆ ನಿರ್ದೇಶಕ ರಾಧಾ.‌

ನಾವು ಮಾಡುವ ಪ್ರತಿಯೊಂದು ಪಾಪವು ಶಾಪವಾಗಿ ಹಿಂಬಾಲಿಸುತ್ತದೆ. ಪಾಪ ಮಾಡುತ್ತಿರುವಾಗ ಹಾಯಾಗಿ, ಸುಖವಾಗಿ ಇರುತ್ತದೆ. ಆದರೆ, ‍ಪ್ರತಿಫಲ ಮಾತ್ರ ಘೋರ ಎನ್ನುವುದು ‘ಖನನ’ ಚಿತ್ರದ ಹೂರಣ. ಮೂರು ಭಾಷೆಯಲ್ಲಿ ಇದು ನಿರ್ಮಾಣವಾಗಿದೆ. ತಮಿಳಿನಲ್ಲಿ ಇದಕ್ಕೆ ‘ದಗನಂ’ ಎಂದು ಹೆಸರಿಟ್ಟರೆ, ತೆಲುಗಿನಲ್ಲಿ ‘ಖನನಂ’ ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ತಮಿಳುನಾಡಿನ ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಪ್ರಮಾಣಪತ್ರ ನೀಡಲು ಒಂಬತ್ತು ತಿಂಗಳು ಸತಾಯಿಸಿತಂತೆ. ಈ ಪ್ರಸವ ವೇದನೆ ಮುಗಿಸಿಕೊಂಡು ಚಿತ್ರತಂಡ ಬಂದಿತ್ತು. ಚಿತ್ರದ ಮೇಕಿಂಗ್‌ ವಿಡಿಯೊ ತೋರಿಸಿದ ಬಳಿಕ ಸುದ್ದಿಗೋಷ್ಠಿಗೆ ಕುಳಿತುಕೊಂಡಿತು.

ನಿರ್ದೇಶಕ ರಾಧಾಗೆ ಇದು ಮೊದಲ ಚಿತ್ರ. ಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನು ಅವರೇ ಹೊತ್ತಿದ್ದಾರೆ. ‘ಇದು ಹೊಸಬರ ತಂಡ. ಹಾಗೆಂದು ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿಲ್ಲ. ಸಂದರ್ಭಕ್ಕೆ ತಕ್ಕಂತೆ ಹಾಡುಗಳಿವೆ’ ಎಂದು ವಿವರಿಸಿದರು.

ADVERTISEMENT

ಚಿತ್ರದಲ್ಲಿ ನಾಯಿಯೊಂದು ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದೆಯಂತೆ. ಅದು ಕೆಲವೇ ದಿನಗಳ ಹಿಂದೆ ವಿಧಿವಶವಾಯಿತು ಎಂದರು ನಿರ್ದೇಶಕರು.

ನಿರ್ಮಾಪಕ ಶ್ರೀನಿವಾಸರಾವ್‌ ಬಿ. ಅವರು ತಮ್ಮ ಪುತ್ರ ಆರ್ಯವರ್ಧನ್‌ಗಾಗಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ‘ಮಗ ತನ್ನ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಿದ್ದಾನೆ. ಶೀಘ್ರವೇ, ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆಸಲಾಗಿದೆ’ ಎಂದರು.

ಲಂಡನ್‌ನಲ್ಲಿ ಸಾಫ್ಟ್‌ವೇರ್‌ ಉದ್ಯೋಗಿಯಾಗಿದ್ದ ಆರ್ಯವರ್ಧನ್ ಈ ಚಿತ್ರದ ಮೂಲಕ ಬೆಳ್ಳಿತೆರೆ ಪ್ರವೇಶಿಸುತ್ತಿದ್ದಾರೆ. ಕಥೆ ಕೇಳಿದಾಗ ಮೊದಲಿಗೆ ಅವರಿಗೂ ಅರ್ಥವಾಗಲಿಲ್ಲವಂತೆ. ಅಂದಹಾಗೆ ಎನ್‌.ಎಸ್‌. ರಾವ್‌ ಅವರು ಆರ್ಯವರ್ಧನ್‌ಗೆ ತಾತ ಆಗಬೇಕಂತೆ.

ಚಿತ್ರದಲ್ಲಿ ಅವರದು ಹೆಸರಾಂತ ಆರ್ಕಿಟೆಕ್ಟ್ ಪಾತ್ರ. ಸಂದರ್ಭಕ್ಕೆ ತಕ್ಕಂತೆ ಅವರ ರೂಪರೇಷೆಗಳು ಬದಲಾಗುತ್ತವೆಯಂತೆ. ‘ಶಾಲಾ– ಕಾಲೇಜು ದಿನಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅಭಿನಯಿಸಿದ್ದೆ. ಸಿನಿಮಾ ನಟನೆ ನನಗೆ ಹೊಸದು. ನಿರ್ದೇಶಕರು ಪಾತ್ರಕ್ಕೆ ತಕ್ಕಂತೆ ನನ್ನಿಂದ ನಟನೆ ಮಾಡಿಸಿದ್ದಾರೆ’ ಎಂದರು.

ಕರಿಷ್ಮಾ ಬರುಹ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ. ರಮೇಶ್‌ ತಿರುಪತಿ ಅವರ ಛಾಯಾಗ್ರಹಣವಿದೆ. ಕುನ್ನಿ ಗುಡಿ‍ಪಾಟಿ ಸಂಗೀತ ಸಂಯೋಜಿಸಿದ್ದಾರೆ. ಯುವಕಿಶೋರ್, ಅವಿನಾಶ್‌, ಓಂ‍ಪ್ರಕಾಶ್‌ ರಾವ್, ಬ್ಯಾಂಕ್‌ ಜನಾರ್ದನ್, ಬೇಬಿ ಐಶ್ವರ್ಯ, ವಿನಯಾ ಪ್ರಸಾದ್‌, ಹೊನ್ನವಳ್ಳಿ ಕೃಷ್ಣ, ಕೆಂಪೇಗೌಡ, ಮಹೇಶ್‌, ಮೋಹನ್ ಜುನೇಜಾ ತಾರಾಗಣದಲ್ಲಿದ್ದಾರೆ. ಇದೇ ವೇಳೆ ಚಿತ್ರದ ಟ್ರೇಲರ್‌, ಆಡಿಯೊವನ್ನು ಬಿಡುಗಡೆಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.