ADVERTISEMENT

‘ಫ್ಯಾಂಟಮ್‌’ಗೆ ನೀತು ನಾಯಕಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2020, 14:58 IST
Last Updated 31 ಜನವರಿ 2020, 14:58 IST
ಸುದೀಪ್
ಸುದೀಪ್   

ಜನವರಿ 31 ನಟ ಸುದೀಪ್‌ ಪಾಲಿಗೆ ಮರೆಯಾಗದ ದಿನ. 1996ರ ಇದೇ ದಿನದಂದು ಅವರು ‘ಬ್ರಹ್ಮ’ ಚಿತ್ರದ ಮೂಲಕ ಬಣ್ಣದಲೋಕ ಪ್ರವೇಶಿಸಿದ್ದು. ಈಗ ಅವರ ವೃತ್ತಿಬದುಕಿನ 25ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಕನ್ನಡ, ಹಿಂದಿ, ತೆಲುಗು ಮತ್ತು ತಮಿಳು ಸೇರಿದಂತೆ 67 ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.

‘ಮೈ ಆಟೋಗ್ರಾಫ್’ ಚಿತ್ರದ ಮೂಲಕ ಅವರು ನಿರ್ದೇಶನಕ್ಕೂ ಇಳಿದರು. ಅವರೊಳಗಿನ ನಿರ್ದೇಶಕನ ಪ್ರತಿಭೆಗೆ ಈ ಚಿತ್ರ ಕನ್ನಡಿ ಹಿಡಿಯಿತು. ಆ ನಂತರ ‘ಶಾಂತಿ ನಿವಾಸ’, ‘ಜಸ್ಟ್ ಮಾತ್ ಮಾತಲ್ಲಿ’, ‘ವೀರ ಮದಕರಿ’, ‘ಕೆಂಪೇಗೌಡ’ ಚಿತ್ರ ನಿರ್ದೇಶಿಸಿದ್ದು ವಿಶೇಷ. ಪ್ರಸ್ತುತ ಸ್ವಮೇಕ್‌ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುವ ತಯಾರಿಯಲ್ಲಿಯೂ ಇದ್ದಾರೆ.

ಶಿವಕಾರ್ತಿಕ್‌ ನಿರ್ದೇಶನದ ಸುದೀಪ್‌ ನಟನೆಯ ಬಹುನಿರೀಕ್ಷಿತ ‘ಕೊಟಿಗೊಬ್ಬ 3’ ಚಿತ್ರ ಶೂಟಿಂಗ್‌ ಪೂರ್ಣಗೊಂಡಿದೆ. ಕಿಚ್ಚಿನ ಡಬ್ಬಿಂಗ್‌ ಪೂರ್ಣಗೊಂಡಿದ್ದು, ಉಳಿದ ಕಲಾವಿದರ ಡಬ್ಬಿಂಗ್‌ ಶೀಘ್ರವೇ ಆರಂಭವಾಗಲಿದೆಯಂತೆ. ಏಪ್ರಿಲ್‌ಗೆ ಈ ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಡುವ ನಿರೀಕ್ಷೆಯಿದೆ. ಇದಕ್ಕೆ ಸೂರಪ್ಪಬಾಬು ಬಂಡವಾಳ ಹೂಡಿದ್ದಾರೆ.

ADVERTISEMENT

ನೀತು ಹೀರೊಯಿನ್

ಈ ಚಿತ್ರದ ಬಳಿಕ ಅನೂಪ್‌ ಭಂಡಾರಿ ನಿರ್ದೇಶನದ ‘ಫ್ಯಾಂಟಮ್‌’ ಸಿನಿಮಾದಲ್ಲಿ ಸುದೀ‍ಪ್‌ ನಟಿಸಲಿದ್ದಾರೆ. ಇದಕ್ಕೆ ಜಾಕ್‌ ಮಂಜು ಬಂಡವಾಳ ಹೂಡುತ್ತಿದ್ದಾರೆ. ಇದರಲ್ಲಿ ಇಬ್ಬರು ನಾಯಕಿಯರು ಕಿಚ್ಚನಿಗೆ ಜೋಡಿಯಾಗಲಿದ್ದಾರಂತೆ. ಅತಿಥಿ ಪಾತ್ರದಲ್ಲೂ ನಾಯಕಿಯೊಬ್ಬರು ನಟಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ತೆಲುಗಿನ ‘ಈಗ’ ಚಿತ್ರದಲ್ಲಿ ಸುದೀಪ್‌ಗೆ ಜೋಡಿಯಾಗಿದ್ದ ಸಮಂತಾ ಅಕ್ಕಿನೇನಿ ಅವರನ್ನು ಈ ಚಿತ್ರಕ್ಕೆ ಕರೆತರುವ ಪ್ರಯತ್ನ ನಡೆದಿತ್ತು. ಆದರೆ, ಇದು ಸಾಧ್ಯವಾಗಿಲ್ಲ. ಇಬ್ಬರು ನಾಯಕಿಯರ ಪೈಕಿ ಈಗಾಗಲೇ ಬೆಂಗಳೂರು ಮೂಲದ ರೂಪದರ್ಶಿ ನೀತು ಎಂಬುವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಆಕೆಯ ಫೋಟೊಶೂಟ್‌ ಕೂಡ ಮಾಡಲಾಗಿದೆಯಂತೆ. ಶೀಘ್ರವೇ, ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ನಿರ್ಧರಿಸಿದೆ. ಜೊತೆಗೆ, ಇನ್ನೊಬ್ಬ ನಾಯಕಿಯ ಹುಡುಕಾಟವೂ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.