ಬೆಂಗಳೂರು: ನಟ ಸುದೀಪ್ ನಟನೆಯ 47ನೇ ಸಿನಿಮಾ ‘ಮಾರ್ಕ್’ ಡಿಸೆಂಬರ್ 25ಕ್ಕೆ ತೆರೆಕಾಣಲಿದೆ. ಸುದೀಪ್ ಜನ್ಮದಿನದ ಹೊಸ್ತಿಲಲ್ಲಿ(ಸೆ.1) ಚಿತ್ರದ ಫಸ್ಟ್‌ಲುಕ್ ಟೀಸರ್ ಹಾಗೂ ಶೀರ್ಷಿಕೆಯನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಚಿತ್ರದಲ್ಲಿ ಅಜಯ್ ಮಾರ್ಕಂಡೆ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಸುದೀಪ್. ‘ಮ್ಯಾಕ್ಸ್’ ಚಿತ್ರದ ನಿರ್ದೇಶಕ ವಿಜಯ್ ಕಾರ್ತಿಕೇಯ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಸಿನಿಮಾವನ್ನು ‘ಸತ್ಯಜ್ಯೋತಿ ಫಿಲ್ಮ್ಸ್’ ನಿರ್ಮಾಣ ಮಾಡುತ್ತಿದೆ.
ಸಿನಿಮಾದ ಬಗ್ಗೆ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದ ಸುದೀಪ್, ‘ಚಿತ್ರದ ಶೇಕಡ 60ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಹಗಲಿರುಳು ಈ ತಂಡ ಕೆಲಸ ಮಾಡುತ್ತಿದೆ. ಅಕ್ಟೋಬರ್ ಅಂತ್ಯಕ್ಕೆ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಪೂರ್ಣಗೊಳ್ಳಲಿದೆ. ಡಿಸೆಂಬರ್‌ನಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಜುಲೈ 5ರಂದೇ ನಾನು ಬಿಡುಗಡೆಯನ್ನು ಘೋಷಣೆ ಮಾಡಿದ್ದೆ. ಇದು ‘ಮ್ಯಾಕ್ಸ್–2’ ಅಲ್ಲ. ಸಿನಿಮ್ಯಾಟಿಕ್ ಯೂನಿವರ್ಸ್ ಇರಬಹುದು. ಒಂದು ಪಾತ್ರದ ಮೇಲೆ ಉತ್ಸಾಹ ಬಂದಾಗಲಷ್ಟೇ ಈ ರೀತಿ ಪ್ರಯೋಗ ಮಾಡಲು ಸಾಧ್ಯ. ‘ಮ್ಯಾಕ್ಸ್’ನ ನಿರ್ದೇಶಕರು, ತಾಂತ್ರಿಕ ತಂಡವೇ ಕೆಲಸ ಮಾಡುತ್ತಿರುವ ಕಾರಣ ಅದೇ ಮಾದರಿಯಲ್ಲಿ ಸಿನಿಮಾವಿರಬಹುದು. ಈ ಪಾತ್ರದಲ್ಲಿ ವಿಭಿನ್ನತೆ ಇದ್ದು, ಅನಿಮಲ್ ಇನ್‌ಸ್ಟಿನ್ಕ್ಟ್ ಇದೆ. ನನ್ನ ಮೊದಲಿನ ಕೇಶವಿನ್ಯಾಸದಲ್ಲಿ ಗ್ಲ್ಯಾಮರಸ್ ಆಗಿ ಕಾಣಿಸುತ್ತಿದ್ದೆ, ಹೀಗಾಗಿ ಈ ಬದಲಾವಣೆ’ ಎಂದರು.
‘ವರ್ಷದಲ್ಲಿ ಒಂದು ಸಿನಿಮಾ ಇರಲೇಬೇಕು. ವೇಗವಾಗಿ ಈ ಸಿನಿಮಾವನ್ನು ಪೂರ್ಣಗೊಳಿಸಬಹುದು ಎನ್ನುವ ಕಾರಣಕ್ಕೇ ಚಿತ್ರೀಕರಣ ಹಗಲಿರುಳು ನಡೆಯುತ್ತಿದೆ. ಇಷ್ಟು ವೇಗವಾಗಿ ಸಿನಿಮಾ ಮಾಡಿದರೆ ಕನಿಷ್ಠ ₹5–6 ಕೋಟಿಯನ್ನು ಉಳಿಸಬಹುದು. ಬಹಳ ಅದ್ಭುತವಾಗಿ ಯೋಜನೆ ಹಾಕಿಕೊಂಡು ಈ ಸಿನಿಮಾದ ತಾಂತ್ರಿಕ ತಂಡ ಕೆಲಸ ಮಾಡಿದೆ’ ಎಂದು ಸುದೀಪ್ ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ಪರ್ಧೆ–ಸವಾಲು ಅಲ್ಲ
‘ಮೂರು ಸಿನಿಮಾಗಳು ಡಿಸೆಂಬರ್‌ನಲ್ಲಿ ಬರುತ್ತಿವೆ. ಇದನ್ನು ಸ್ಪರ್ಧೆ–ಸವಾಲು ಎಂದುಕೊಳ್ಳುವುದು ಅವರವರ ದೃಷ್ಟಿಕೋನಕ್ಕೆ ಬಿಟ್ಟಿದ್ದು. ಸ್ಪರ್ಧೆ ಮಾಡುವ ವ್ಯಕ್ತಿತ್ವ ನನ್ನದಲ್ಲ. ಅನವಶ್ಯಕವಾಗಿ ನಾನು ಸವಾಲು ಹಾಕುವುದಿಲ್ಲ. ನಾವು ಯೋಜನೆ ಹಾಕಿಕೊಂಡೇ ಹೆಜ್ಜೆ ಇಡುತ್ತಿದ್ದೇವೆ. ನಾನು ಯಾವ ಸಿನಿಮಾಗೂ ಹೆದರಲ್ಲ, ಅವರೂ ನಮ್ಮ ಸಿನಿಮಾಗೆ ಹೆದರಬೇಕಿಲ್ಲ. ‘ಡೆವಿಲ್’ಗೆ ಒಳ್ಳೆಯದಾಗಲಿ. ಯಾವುದೇ ಸಿನಿಮಾ ಆಗಿರಲಿ ಅದು ಯಶಸ್ಸು ಕಾಣಬೇಕು. ಜನರು ಯಾವತ್ತೂ ಗೊಂದಲಕ್ಕೀಡಾಗುವುದಿಲ್ಲ. ದಿನಕ್ಕೆ ನಾಲ್ಕೈದು ಶೋಗಳು ಇರುತ್ತವೆ. ನೂರಾರು ಚಿತ್ರಮಂದಿರ ಗಳಿವೆ. ಡಿಸೆಂಬರ್‌ನಲ್ಲಿ 25 ಬಿಟ್ಟರೆ ಬೇರೆ ದಿನಗಳು ಇಲ್ಲ. ಸಂಕ್ರಾಂತಿಗೆ ಒಂದೇ ದಿನ ರಜೆ. ಇದನ್ನು ಬಿಟ್ಟರೆ ಮುಂದಿನ ವರ್ಷದ ಜೂನ್–ಜುಲೈಗೆ ಬರಬೇಕು’ ಎನ್ನುತ್ತಾರೆ ಸುದೀಪ್.
‘ಅಮ್ಮನ ಹೆಸರಿನಲ್ಲಿ ಒಂದು ಪಾರ್ಕ್ ದತ್ತು ಪಡೆದಿದ್ದೇನೆ. ಅಮ್ಮನ ಜೊತೆ ನಿರಂತರ ಸಂಪರ್ಕದಲ್ಲಿ ಇರುವಂತೆ ಗಿಡ ನೆಡುವ ಕೆಲಸ ಮಾಡುತ್ತಿದ್ದೇನೆ. ಅಮ್ಮನ ಹೆಸರಿನಲ್ಲಿ ಇಂತಹ ಸಾಮಾಜಿಕ ಕಾರ್ಯ ಮುಂದುವರಿಸಲಿದ್ದೇನೆ’ ಎಂದರು.
ಪೌರಾಣಿಕ ಪಾತ್ರಕ್ಕೆ ‘ಕುದುರೆ’ ಅಡ್ಡಿ!
‘ನನಗೆ ಕುದುರೆ ಓಡಿಸುವುದು ಎಂದರೆ ಆಗಲ್ಲ. ಹಿಂದೊಮ್ಮೆ ಇದೇ ರೀತಿ ಕುದುರೆ ಸವಾರಿ ಕಲಿಯುತ್ತಿದ್ದಾಗ ಸುಮಾರು 20 ಮೀಟರ್ ದೂರಕ್ಕೆ ನನ್ನನ್ನು ಕುದುರೆ ಎಳೆದೊಯ್ದಿತ್ತು. ಆವಾಗ ಆಗಿರುವ ಭಯ ಇನ್ನೂ ಹೋಗಿಲ್ಲ. ದರ್ಶನ್ ತೋಟಕ್ಕೆ ಹೋಗಿದ್ದಾಗ ಕುದುರೆ ಹತ್ತಲು ಒತ್ತಾಯ ಮಾಡಿದ್ದ. ಆ ಸಂದರ್ಭದಲ್ಲಿ ನೀನೂ ಬೇಡ ನಿನ್ನ ಕುದುರೆ ಸಹವಾಸನೂ ಬೇಡ ಎಂದಿದ್ದೆ. ಆದರೂ ಕುದುರೆ ಹತ್ತಿಸಿದರು. ಆವತ್ತು ಕುದುರೆ ಇಳಿದವನು ಇಲ್ಲಿಯವರೆಗೆ ಹತ್ತಿಲ್ಲ. ಈ ಪೌರಾಣಿಕ ಪಾತ್ರ ಮಾಡಿದರೆ ಮೊದಲು ಯುದ್ಧಕ್ಕೆ ಕುದುರೆ ಹತ್ತಿಸುತ್ತಾರೆ. ಹೀಗಾಗಿ ಬೈಕ್ ಮೇಲೆ ಕುಳಿತುಕೊಳ್ಳುತ್ತೇನೆ, ಬೇಗ ಹೋಗಿ ಬೇಗ ಸಿನಿಮಾ ಮುಗಿಸುತ್ತೇನೆ’ ಎನ್ನುತ್ತಾರೆ ಸುದೀಪ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.