ADVERTISEMENT

ಕಾಮಿಡಿ ಕಮಾಲ್‌ಗೆ ಮರಳಿದ ಕೋಮಲ್‌

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2020, 7:29 IST
Last Updated 17 ಆಗಸ್ಟ್ 2020, 7:29 IST
ಟಿ.ಆರ್‌. ಚಂದ್ರಶೇಖರ್ ಮತ್ತು ಕೋಮಲ್‌
ಟಿ.ಆರ್‌. ಚಂದ್ರಶೇಖರ್ ಮತ್ತು ಕೋಮಲ್‌   

‘ಕೆಂಪೇಗೌಡ 2’ ಸಿನಿಮಾ ನಂತರ ನಟ ಕೋಮಲ್‌ ಕುಮಾರ್ ಯಾಕೊ ಚಿತ್ರರಂಗದಿಂದ ಸ್ವಲ್ಪ ಬಿಡುವು ಪಡೆದಂತಿದ್ದರು. ಈಗ ಮತ್ತೆ ಭರ್ಜರಿ ಮರುಪ್ರವೇಶ ಮಾಡಲು ಸಜ್ಜಾಗಿದ್ದಾರೆ. ‘ಚಮಕ್’‌, ‘ಅಯೋಗ್ಯ’, ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ದಂತಹ ಯಶಸ್ವಿ ಚಿತ್ರಗಳನ್ನು ನೀಡಿರುವ ಕ್ರಿಸ್ಟಲ್‌ ಪಾರ್ಕ್‌ ಬ್ಯಾನರ್‌ನಡಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ಕೋಮಲ್‌ ಕುಮಾರ್‌ ನಟಿಸಲಿದ್ದಾರೆ.

ತಮಗೆ ಐಡೆಂಟಿಟಿ ಮತ್ತು ಜನಪ್ರಿಯತೆ ತಂದುಕೊಟ್ಟಿದ್ದ ಕಾಮಿಡಿ ಜಾನರ್‌ ಕಳಚಿಕೊಂಡು, ಆ್ಯಕ್ಷನ್‌ ಮತ್ತು ಥ್ರಿಲ್ಲರ್‌ ಜಾನರ್‌ ಕಡೆ ಮುಖ ಮಾಡಿದ್ದ ಕೋಮಲ್‌ ಕುಮಾರ್‌ ಈ ಹೊಸ ಚಿತ್ರದ ಮೂಲಕ, ತಮ್ಮ ಮೂಲ ಜಾನರ್‌ಗೆ ಮರಳುತ್ತಿದ್ದಾರೆ. ಈ ಹೊಸ ಚಿತ್ರಕ್ಕೆ ಇನ್ನು ಶೀರ್ಷಿಕೆ ಅಂತಿಮವಾಗಿಲ್ಲ. ಪಕ್ಕಾ ಹಾಸ್ಯಮಯ ಚಿತ್ರ ಇದಾಗಿದ್ದು, ಸಂಭಾಷಣೆಕಾರಕೆ.ಎಲ್‌. ರಾಜ್‌ ಶೇಖರ್‌ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆಯೂ ಇವರದೇ.

ಕ್ರಿಸ್ಟಲ್‌ ಪಾರ್ಕ್‌ ಬ್ಯಾನರ್‌ನಡಿ ಟಿ.ಆರ್‌. ಚಂದ್ರಶೇಖರ್‌ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ‘ಇದೊಂದು ಪಕ್ಕಾ ಹಾಸ್ಯಮಯ ಚಿತ್ರ. ಕೋಮಲ್‌ ಪ್ರೇಕ್ಷಕರಿಗೆ ಹಾಸ್ಯದ ಕಚಗುಳಿ ನೀಡಲಿದ್ದಾರೆ. ಇದು ನಮ್ಮ ಬ್ಯಾನರ್‌ನ 8ನೇ ಚಿತ್ರ. ಮುಂದಿನ ತಿಂಗಳಿನಿಂದ ಚಿತ್ರೀಕರಣ ಶುರು ಮಾಡುವ ಯೋಜನೆಯಲ್ಲಿದ್ದೇವೆ. ಗೌರಿ–ಗಣೇಶ ಹಬ್ಬದ ವೇಳೆಗೆ ಚಿತ್ರದ ಶೀರ್ಷಿಕೆ ಪ್ರಕಟಿಸಲಾಗುವುದು. ಕೋಮಲ್‌ಗೆ ಜತೆಯಾಗಲಿರುವ ನಾಯಕಿ ಮತ್ತು ಉಳಿದ ಕಲಾವಿದರ ಹೆಸರನ್ನು ಮುಂದಿನ ದಿನಗಳಲ್ಲಿ ರಿವೀಲ್‌ ಮಾಡಲಿದ್ದೇವೆ’ ಎನ್ನುತ್ತಾರೆ ನಿರ್ಮಾಪಕ ಚಂದ್ರಶೇಖರ್‌.

ADVERTISEMENT

‘ಈವರೆಗೆ ನಾಲ್ಕೈದು ಕಾಮಿಡಿ ಚಿತ್ರಗಳನ್ನು ಕೈಬಿಟ್ಟಿದ್ದೆ. ಈ ಚಿತ್ರದ ಕಥೆ ತುಂಬಾ ಚೆನ್ನಾಗಿದ್ದು, ಒಪ್ಪಿಕೊಳ್ಳದೆ ಇರಲು ಮನಸಾಗಲಿಲ್ಲ. ಬಹುತೇಕರು ಕೋಮಲ್‌ ಹಾಸ್ಯ ಚಿತ್ರಗಳಲ್ಲಿ ನಟಿಸುವುದೇ ಇಲ್ಲವೆಂದು ಭಾವಿಸಿದ್ದರು. ಇತ್ತೀಚೆಗೆ ಬಂದ ಸ್ಕ್ರಿಪ್ಟ್ ಗಳಲ್ಲಿ ನನಗೆ ಒಂದೂ ಇಷ್ಟವಾಗಿರಲಿಲ್ಲ. ಸ್ಕ್ರಿಪ್ಟ್ ಓದಿದಾಗ ನನ್ನಲ್ಲಿ ನಗು ಮೂಡದಿದ್ದ ಮೇಲೆ, ಆ ಚಿತ್ರಗಳನ್ನು ಒಪ್ಪಿಕೊಂಡು ಪ್ರೇಕ್ಷಕನನ್ನು ಹೇಗೆ ನಗಿಸುವುದು? ಎನ್ನುವ ಪ್ರಶ್ನೆ ಕಾಡುತ್ತಿತ್ತು. ಹಾಗಾಗಿ ಹಾಸ್ಯ ಚಿತ್ರಗಳಿಂದ ದೂರವಿದ್ದೆ. ಈಗ ಒಪ್ಪಿಕೊಂಡಿರುವ ಚಿತ್ರ ಸಂಪೂರ್ಣ ಹಾಸ್ಯಮಯ ಚಿತ್ರ’ ಎನ್ನುತ್ತಾರೆ ನಾಯಕ ನಟ ಕೋಮಲ್‌ ಕುಮಾರ್‌.

ತಮ್ಮ ಇನ್ನೊಂದು ಬಹುನಿರೀಕ್ಷೆಯ ‘ಕೊಂಕಾ ಪಾಸ್‌’ ಚಿತ್ರದ ಬಗ್ಗೆ ಮಾತು ಹೊರಳಿಸಿದ ಕೋಮಲ್‌ ಕುಮಾರ್‌, ‘ಕ್ರಿಸ್ಟಲ್‌ ಪಾರ್ಕ್‌ ಬ್ಯಾನರ್‌ನ ಚಿತ್ರ ಪೂರ್ಣಗೊಳಿಸಿ‘ಕೊಂಕಾ ಪಾಸ್‌’ಗೆ ಮರುಚಾಲನೆ ನೀಡಲಿದ್ದೇವೆ.ಹಿಮ ಸುರಿಯುವ ಕಾಲವನ್ನು ಕಾಯುತ್ತಿದ್ದೇವೆ.ಈಗ ಮಳೆಗಾಲ ಇರುವುದರಿಂದ ಆ ಚಿತ್ರದ ಚಿತ್ರೀಕರಣ ಸಾಧ್ಯವಾಗದು. ಅಲ್ಲದೇ ಆ ಚಿತ್ರವನ್ನು ಪೋಲಂಡ್‌ನಲ್ಲಿ ಚಿತ್ರೀಕರಿಸಬೇಕಾಗಿದೆ’ ಎಂದರು.

ಕೊಂಕಾ ಪಾಸ್ ಸ್ಥಳ ಭಾರತ ಮತ್ತು ಚೀನಾ ಗಡಿ ಭಾಗದಲ್ಲಿದ್ದು, ಯೋಧನ ಕಥೆ ಆಧರಿಸಿದ ಚಿತ್ರವಿದಾಗಿದೆ. ಕೋಮಲ್‌ ಯೋಧನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಶೇ 20 ಭಾಗದಷ್ಟು ಚಿತ್ರೀಕರಣವಾಗಿದೆಯಂತೆ. ಈ ಚಿತ್ರಕ್ಕೆ ರಾಷ್‌ ಎನ್ನುವವರು ಆ್ಯಕ್ಷನ್ ಕಟ್‌ ಹೇಳುತ್ತಿದ್ದಾರೆ. ಕೋಮಲ್‌ ಕುಮಾರ್‌ ಮತ್ತು ಅವರ ಎನ್‌ಆರ್‌ಐ ಸ್ನೇಹಿತ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.