ADVERTISEMENT

ಸಂದರ್ಶನ: ‘ಕೋಣ’ ಕೋಮಲ್‌ ಕೈಯಲ್ಲಿ ಭಿನ್ನ ಪಾತ್ರಗಳು..

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2025, 0:21 IST
Last Updated 31 ಅಕ್ಟೋಬರ್ 2025, 0:21 IST
<div class="paragraphs"><p>ಕೋಮಲ್‌&nbsp;</p></div>

ಕೋಮಲ್‌ 

   

ಕುಪ್ಪಂಡಾಸ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ‘ಬಿಗ್‌ಬಾಸ್‌’ ಖ್ಯಾತಿಯ ತನಿಶಾ ಕುಪ್ಪಂಡ, ಕಾರ್ತಿಕ್ ಕಿರಣ್ ಸಂಕಪಾಲ್, ರವಿಕಿರಣ್ ಎನ್. ಈ ಸಿನಿಮಾ ನಿರ್ಮಾಣ ಮಾಡಿರುವ ‘ಕೋಣ’ ಸಿನಿಮಾ ಇಂದು (ಅ.31) ತೆರೆಕಂಡಿದೆ. ನಿರ್ಮಾಣದ ಜೊತೆಗೆ ‘ಲಕ್ಷ್ಮಿ’ ಎಂಬ ಪಾತ್ರದಲ್ಲಿ ತನಿಶಾ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಪಯಣದ ಎರಡನೇ ಇನಿಂಗ್ಸ್‌ ಆರಂಭಿಸಿರುವ ಕೋಮಲ್‌ ‘ನಾರಾಯಣ’ನಾಗಿ ಇಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಅನುಭವ ಹಾಗೂ ಮುಂದಿನ ಸಿನಿಮಾಗಳ ಕುರಿತು ಕೋಮಲ್‌ ಮಾತಿಗಿಳಿದಾಗ...  

‘ಜಗ್ಗೇಶ್‌ ನಟಿಸಿದ್ದ ‘8ಎಂಎಂ’ ಸಿನಿಮಾ ಮಾಡಿದ್ದ ಹರಿಕೃಷ್ಣ ಅವರೇ ‘ಕೋಣ’ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಇದು ರಿಮೇಕ್‌ ಅಲ್ಲ. ಕೋಣ ಬಲಿ ಕೊಡುವ ವಿಷಯಕ್ಕೆ ಸಂಬಂಧಿಸಿದ ಸಿನಿಮಾ ಇದಾಗಿದೆ. ಕೋಣ ಬಲಿ ಕೊಟ್ಟರೆ ಒಳ್ಳೆಯದಾಗುತ್ತದೆ ಎಂದು ನಂಬಿರುವ ಊರಿಗೆ ನಾಯಕ ಪ್ರವೇಶಿಸಿದಾಗ ಏನೇನಾಗುತ್ತದೆ ಎನ್ನುವುದೇ ಕಥಾಹಂದರ. ನಾನು ಈ ಚಿತ್ರದಲ್ಲಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ. ಅಘೋರಿಯಾಗಿಯೂ ನಟಿಸಿದ್ದೇನೆ. ‘ನಾರಾಯಣ’ ಎನ್ನುವ ನನ್ನ ಮೂಲ ಪಾತ್ರಕ್ಕೂ ಇದಕ್ಕೂ ಸಂಬಂಧವಿದೆ. ಫ್ಯಾಂಟಸಿ ಹಾರರ್‌ ಜಾನರ್‌ನಲ್ಲಿ ಈ ಸಿನಿಮಾವಿದ್ದು ಹಳ್ಳಿ ಬ್ಯಾಕ್‌ಡ್ರಾಪ್‌ನಲ್ಲಿ ನಡೆಯುತ್ತದೆ. ಹಾಸ್ಯದ ಜೊತೆಗೆ ಮೂಢನಂಬಿಕೆ, ಭಾವನಾತ್ಮಕ ವಿಷಯಗಳೂ ಸಿನಿಮಾದಲ್ಲಿದೆ. ಚಿತ್ರದಲ್ಲಿ ಮೂಢನಂಬಿಕೆ ಇದೆ ಅಥವಾ ಇಲ್ಲ ಎಂದು ನಾವು ಹೇಳುತ್ತಿಲ್ಲ. ಸಿನಿಮಾದಲ್ಲಿ ‘ಕೋಣ’ವೇ ಮುಖ್ಯ ಪಾತ್ರಧಾರಿಯಾಗಿರುವುದರಿಂದ ಈ ಶೀರ್ಷಿಕೆಯೇ ಸೂಕ್ತವೆನಿಸಿತು’ ಎಂದರು ಕೋಮಲ್‌. 

ADVERTISEMENT

‘ಕಾಂಟೆಂಟ್‌ ಆಧಾರಿತ ಹಲವು ಸಿನಿಮಾಗಳನ್ನು ನಾನು ಮಾಡುತ್ತಿದ್ದೇನೆ. ‘ಯಲಾಕುನ್ನಿ’ಯಲ್ಲಿ ‘ವಜ್ರಮುನಿ’ಯಾಗಿದ್ದೆ. ‘ಕೋಣ’ದಲ್ಲೂ ಭಿನ್ನ ಪಾತ್ರವಿದೆ. ‘ಸಂಗೀತಾ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌’ನಲ್ಲಿ ಕರಾವಳಿಯ ಭಾಗದ ಸ್ಲ್ಯಾಂಗ್‌ ಇದೆ. ‘ರೋಲೆಕ್ಸ್‌’ನಲ್ಲಿ ಒಂದು ಕಟ್ಟಡದಲ್ಲಿ ಒಬ್ಬನೇ ಇರುವ ಪಾತ್ರ ನನ್ನದು. ಹೇಗೆ ಎರಡು ಗಂಟೆ ಅವಧಿಗೆ ಪ್ರೇಕ್ಷಕರನ್ನು ಒಬ್ಬನೇ ಹಿಡಿದಿಟ್ಟುಕೊಳ್ಳಬಹುದು ಎನ್ನುವ ಸವಾಲು ಇದರಲ್ಲಿದೆ. ವಿಚ್ಛೇದನ ಕೊಡಿಸುವ ಲಾಯರ್‌ ಜೀವನದಲ್ಲೇ ವಿಚ್ಛೇದನದ ಸ್ಥಿತಿ ಬಂದಾಗ ಏನಾಗುತ್ತದೆ ಎನ್ನುವ ಕಥೆಯಿರುವ ಮತ್ತೊಂದು ಸಿನಿಮಾ ಮಾಡುತ್ತಿದ್ದೇನೆ. ‘ವಾರೆವ್ಹಾ-2’ ಸಿನಿಮಾದ ಯೋಚನೆಯಿದೆ. ಪ್ರಾಣಿಗಳು ಮಾತನಾಡುವುದು ಕೇಳಿಸಿದರೆ ಹೇಗಿರುತ್ತದೆ ಎನ್ನುವ ಕಥೆ ಇದು. ಹಾಲಿವುಡ್‌ನ ‘ಡಾ.ಡೂಲಿಟಲ್‌’ ಮಾದರಿಯಲ್ಲಿ ಈ ಸಿನಿಮಾವಿರಲಿದೆ. ಕೈಯಲ್ಲಿ ಏಳೆಂಟು ಸಿನಿಮಾಗಳಿವೆ. ಭಿನ್ನ ಭಿನ್ನ ಪಾತ್ರಗಳನ್ನು ಮಾಡಿಸುವ ಧೈರ್ಯವನ್ನು ನಿರ್ದೇಶಕರು ಇನ್ನೂ ಮಾಡುತ್ತಿದ್ದಾರೆ ಎನ್ನುವುದೇ ಖುಷಿ’ ಎನ್ನುತ್ತಾರೆ ಕೋಮಲ್‌. 

‘ನಾನು ಇಲ್ಲಿಯವರೆಗೂ ಪ್ರಯತ್ನಿಸದೇ ಇರುವ ಮುದ್ರೆಗಳು, ಮಂತ್ರಪಠಣ ಮುಂತಾದುವುಗಳನ್ನು ‘ಕೋಣ’ದಲ್ಲಿ ಮಾಡಿದ್ದೇನೆ. ಸಿನಿಮಾದಲ್ಲಿ ಹಾಸ್ಯ ಹಾಗೂ ಇತರೆ ವಿಷಯಗಳು ಸಮಾನವಾಗಿ ಹಂಚಿಕೆಯಾಗಿವೆ. ಗ್ರಾಫಿಕ್ಸ್‌ ಕೂಡಾ ಇದೆ. ಕಥೆಗೆ ಬೇಕಾದಷ್ಟು ಹಾಸ್ಯ ಸಿನಿಮಾದಲ್ಲಿದೆ’ ಎಂದರು. 

‘ಕನ್ನಡದಲ್ಲಿ ನನಗೆ ಖಳನಾಯಕನ ಪಾತ್ರ ದೊರಕಿರಲಿಲ್ಲ. ಹಾಗಾಗಿ ತಮಿಳಿನಲ್ಲಿ ಪ್ರಯತ್ನಿಸಿದೆ. ಇದರಿಂದ ಇನ್ನೊಂದು ತಮಿಳು ಸಿನಿಮಾದ ಅವಕಾಶ ಬಂದಿದೆ. ನಿರ್ದೇಶಕ ವೆಟ್ರಿಮಾರನ್‌ ಅವರೊಂದಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದವರೊಬ್ಬರು ಕಥೆ ಹೇಳಲು ಬರುತ್ತಿದ್ದಾರೆ’ ಎಂದರು ಕೋಮಲ್‌.   

ಎಲ್ಲಾ ಚಿತ್ರಮಂದಿರಗಳನ್ನು ಕೊಟ್ಟುಬಿಟ್ಟೆ

‘ಕೋವಿಡ್‌ಗೂ ಮೊದಲು 21 ಚಿತ್ರಮಂದಿರಗಳನ್ನು ನಡೆಸುತ್ತಿದ್ದೆ. ಆಗ ಒಳ್ಳೆಯ ವರಮಾನವೂ ಇತ್ತು. ಕೋವಿಡ್‌ ಬಳಿಕ ಸ್ಥಿತಿ ಬದಲಾಗಿದೆ. ಇದೀಗ ಒಂದೂ ಇಲ್ಲ. ಇವುಗಳಲ್ಲಿ 15–16 ಚಿತ್ರಮಂದಿರಗಳನ್ನು ಒಡೆದು ಹಾಕಿದ್ದಾರೆ. ನೂರು ಸೀಟ್‌ಗಳ ಬಲೂನ್‌ ಥಿಯೇಟರ್‌ ಪರಿಕಲ್ಪನೆ ಈಗ ಬರುತ್ತಿದೆ. ಈ ಮೂಲಕ ತಾಲ್ಲೂಕು ಕೇಂದ್ರಗಳಲ್ಲಿ ಗುಣಮಟ್ಟದ ಸಿನಿಮಾವನ್ನು ತೋರಿಸಲು ಸಾಧ್ಯವಿದೆ’ ಎನ್ನುತ್ತಾ ಮಾತಿಗೆ ವಿರಾಮವಿತ್ತರು. 

ತನಿಶಾ 

‘ಕೋಣ’ ಸಿನಿಮಾದ ಆಡಿಯೊ ಹಕ್ಕುಗಳನ್ನು ನಾನೇ ಖರೀದಿಸಿದ್ದೇನೆ. ಹಿಂದಿ ಡಬ್ಬಿಂಗ್‌ ರೈಟ್ಸ್‌ ಮಾತುಕತೆ ನಡೆಯುತ್ತಿದೆ.

–ಕೋಮಲ್‌ ನಟ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.