ADVERTISEMENT

ಅಮಿತಾಭ್ ಜತೆಗೆ ‘ಗೂಗ್ಲಿ’ ಹುಡುಗಿ

‘ಚೆಹರಾ’ ಸಿನಿಮಾದಲ್ಲಿ ಅಮಿತಾಭ್ ಜತೆಗೆ ಕೃತಿ ನಟನೆ

ಮಂಜುಶ್ರೀ ಎಂ.ಕಡಕೋಳ
Published 14 ಮೇ 2019, 15:29 IST
Last Updated 14 ಮೇ 2019, 15:29 IST
ಚಿತ್ರ: ರಂಜು ಪಿ.
ಚಿತ್ರ: ರಂಜು ಪಿ.   

ಮುಗ್ಧ ಮುಖದ ಚೆಲುವೆ ಕೃತಿ ಕರಬಂಧ ನೆನಪಿದ್ದಾಳೆಯೇ? ‘ರಾಕಿಂಗ್ ಸ್ಟಾರ್’ಯಶ್ ಜೊತೆಗೆ ‘ಗೂಗ್ಲಿ’ಯಲ್ಲಿ ಜೋಡಿಯಾಗಿದ್ದ ಈ ಬೆಡಗಿ ಬಾಲಿವುಡ್‌ನಲ್ಲಿ ನೆಲೆಯೂರುವ ಲಕ್ಷಣ ಕಾಣುತ್ತಿದೆ. ಒಂದರ ಮೇಲೊಂದರಂತೆ ಬಾಲಿವುಡ್‌ನಲ್ಲಿ ಸಿನಿಮಾ ಮಾಡುತ್ತಿರುವ ಕೃತಿ, ‘ಚೆಹರಾ’ ಸಿನಿಮಾದಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಜತೆ ನಟಿಸುವ ಅವಕಾಶ ಪಡೆದಿದ್ದಾರೆ.

ಇತ್ತೀಚೆಗಷ್ಟೇ ರೀಬಾಕ್ ಆಯೋಜಿಸಿದ್ದ ಮಿಡ್‌ನೈಟ್ ಮ್ಯಾರಥಾನ್‌ಗೆ ಚಾಲನೆ ನೀಡಲು ಬೆಂಗಳೂರಿಗೆ ಬಂದಿದ್ದ ಕೃತಿ, ಅಮಿತಾಭ್ ಬಚ್ಚನ್ ಜೊತೆಗೆ ನಟಿಸುತ್ತಿರುವ ಬಗ್ಗೆ ಮಾಹಿತಿ ಬಹಿರಂಗಪಡಿಸಿದರು. ‘ಚೆಹರಾ ನನ್ನ ಬಹುದಿನಗಳ ಕನಸಿನ ಚಿತ್ರ. ಅಮಿತಾಭ್ ಅಂಥ ಮಹಾನ್ ನಟನ ಜೊತೆಗೆ ನಟಿಸುತ್ತಿರುವುದು ನಿಜಕ್ಕೂ ಅದೃಷ್ಟದ ಸಂಗತಿ. ನನಗಂತೂ ನಂಬಿಕೆಯೇ ಬರುತ್ತಿಲ್ಲ. ‘ಚೆಹರಾ’ದ ಅವಕಾಶದಿಂದಾಗಿ ನನ್ನ ಕಿರೀಟಕ್ಕೊಂದು ಗರಿ ಮೂಡಿದಂತಾಗಿದೆ. ಸೈಕಾಲಜಿಕಲ್ ಥ್ರಿಲ್ಲರ್ ಕಥೆ ಹೊಂದಿರುವ ಈ ಸಿನಿಮಾದ ಬಗ್ಗೆ ನನಗಂತೂ ಬಹು ನಿರೀಕ್ಷೆಯಿದೆ’ ಎಂದು ಸಂತಸ ವ್ಯಕ್ತಪಡಿಸಿದರು ಕೃತಿ.

ದಕ್ಷಿಣದಲ್ಲಿ ಅವಕಾಶಗಳು ಕಮ್ಮಿಯಾಗಿವೆಯೇ ಎಂಬ ಪ್ರಶ್ನೆಗೆ. ‘ಖಂಡಿತಾ ಇಲ್ಲ. ದಕ್ಷಿಣದಲ್ಲಿ ನನಗೆ ಈಗಲೂ ಅವಕಾಶಗಳಿವೆ. ಇತ್ತೀಚೆಗಷ್ಟೇ ತಮಿಳು ಮತ್ತು ಮಲಯಾಳಂ ದ್ವಿಭಾಷೆಯಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ ಆಯ್ಕೆಯಾಗಿದ್ದೇನೆ. ಎರಡರಲ್ಲೂ ದುಲ್ಕರ್ ಸಲ್ಮಾನ್ ಜೊತೆಗೆ ಕಾಣಿಸಿಕೊಳ್ಳುತ್ತಿದ್ದೇನೆ. ನಿಜ ಹೇಳಬೇಕೆಂದರೆ ಬಾಲಿವುಡ್‌ನಿಂದ ಮುಂಚಿನಿಂದಲೂ ಅವಕಾಶಗಳಿದ್ದವು. ಆದರೆ, ದಕ್ಷಿಣದಲ್ಲಿ ಒಪ್ಪಿಕೊಂಡ ಸಿನಿಮಾಗಳನ್ನು ಮುಗಿಸುವ ತನಕ ಅತ್ತ ಹೋಗುವಂತಿರಲಿಲ್ಲ. ಈ ಮಧ್ಯೆ ತಮಿಳು ಸಿನಿಮಾವೊಂದರ ಚಿತ್ರೀಕರಣ ನಿಂತು ಹೋಗಿತ್ತು. ಆ ಬಿಡುವಿನಲ್ಲೇ ಬಾಲಿವುಡ್ ಸಿನಿಮಾಗಳನ್ನು ಒಪ್ಪಿಕೊಂಡದ್ದು’ ಎಂದು ತಮ್ಮ ಬಾಲಿವುಡ್ ಪಯಣವನ್ನು ವಿವರಿಸಿದರು.

ADVERTISEMENT

ಮಹಿಳಾ ಪ್ರಧಾನ ಸಿನಿಮಾಗಳನ್ನು ಮಾಡಲು ಇಷ್ಟ ಎನ್ನುವ ಅವರು, ‘ಏಕ್ ಹಸೀನಾ ಥಿ’ ಸಿನಿಮಾದಲ್ಲಿ ಊರ್ಮಿಳಾ ಮಾತೋಂಡ್ಕರ್ ಮಾಡಿದ್ದ ಪಾತ್ರ ಕನಸಿನ ಪಾತ್ರ ಎಂದರು.‘ರಾಜ್ ರೀಬೂಟ್’ ಸಿನಿಮಾದ ಮೂಲಕ ಬಾಲಿವುಡ್ ಪ್ರವೇಶಿಸಿದ ಕೃತಿ, ಇದುವರೆಗೆ ಆರು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಒಂದೂವರೆ ತಿಂಗಳ ಅಂತರದಲ್ಲಿ ‘ಪಾಗಲ್ ಪಂಥಿ’ ಮತ್ತು ‘ಹೌಸ್‌ಫುಲ್–4’ ಸಿನಿಮಾಗಳು ಬಿಡುಗಡೆಯಾಗುತ್ತಿರುವುದು ಕೃತಿಗೆ ಸಂತಸ ತಂದಿದೆಯಂತೆ. ಇಷ್ಟಾದರೂ ಕನ್ನಡವೇ ನನ್ನ ಮೊದಲ ಪ್ರೀತಿ. ಅದನ್ನು ಮರೆಯುವುದುಂಟೆ ಎಂದು ಕಣ್ಣುಮಿಟುಕಿಸುತ್ತಾರೆ ಕೃತಿ.

ಕೃತಿ ಫಿಟ್‌ನೆಸ್ ಗುಟ್ಟು

ರೂಪದರ್ಶಿ ಮತ್ತು ನಟಿಯಾಗಿದ್ದ ಆರಂಭದ ದಿನಗಳಲ್ಲಿ ಕೃತಿ ಅಷ್ಟಾಗಿ ಫಿಟ್‌ನೆಸ್‌ಗೆ ಗಮನ ಕೊಡುತ್ತಿರಲಿಲ್ಲವಂತೆ. ಇತ್ತೀಚೆಗೆ ಫಿಟ್‌ನೆಸ್ ಮೋಹಿಯಾಗಿರುವ ಅವರು, ವಾರದ ಐದು ದಿನಗಳಲ್ಲಿ ತಪ್ಪದೇ ವರ್ಕೌಟ್ ಮಾಡುತ್ತಾರೆ. ನಿತ್ಯವೂ ಒಂದೇ ರೀತಿಯ ವ್ಯಾಯಾಮಕ್ಕಿಂತ ಬೇರೆ ಬೇರೆ ರೀತಿಯ ವರ್ಕೌಟ್ ಮಾಡುವುದು ಅವರಿಗಿಷ್ಟ. ಬೇಸರವಾದಾಗ ವರ್ಕೌಟ್‌ನಿಂದ ಬ್ರೇಕ್ ನೀಡುತ್ತಾರೆ.

ಫಿಟ್‌ನೆಸ್ ಬ್ರ್ಯಾಂಡ್‌ ಉತ್ಪನ್ನಗಳ ಬಗ್ಗೆ ಕಾಳಜಿ ವಹಿಸುವ ಕೃತಿ ಜನಪ್ರಿಯ ಬ್ರ್ಯಾಂಡ್‌ಗಳ ಜತೆ ಗುರುತಿಸಿಕೊಳ್ಳಲು ಬಯಸುತ್ತಾರೆ. ವ್ಯಾಯಾಮ ಮಾಡುವವರು ತಮ್ಮ ಪಾದಗಳಿಗೆ ಹಿತಕರವಾದ ಶೂಗಳನ್ನು ಆರಿಸಿಕೊಳ್ಳಬೇಕು ಅನ್ನುವ ಸಲಹೆ ಅವರದ್ದು. ದೇಹ ಫಿಟ್ ಅಂಡ್ ಫೈನ್ ಆಗಿರಬೇಕೆಂದು ಆಹಾರದಲ್ಲಿ ಎಲ್ಲವನ್ನೂ ತ್ಯಜಿಸಿ ಡಯೆಟ್ ಮಾಡುವುದು ಅವರಿಗಿಷ್ಟವಿಲ್ಲ. ದೇಹಕ್ಕೆ ಅಗತ್ಯವಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಆಹಾರ ಸೇವಿಸುವ ಕ್ರಮ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.