ADVERTISEMENT

ಯುಗಾದಿಗೆ ದರ್ಶನ್ ‘ಕುರುಕ್ಷೇತ್ರ’ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2019, 12:21 IST
Last Updated 6 ಫೆಬ್ರುವರಿ 2019, 12:21 IST
ದರ್ಶನ್‌
ದರ್ಶನ್‌   

ಚಂದನವನದ ದೊಡ್ಡ ತಾರಾಗಣ ಇರುವ ‘ಮುನಿರತ್ನ ಕುರುಕ್ಷೇತ್ರ’ ಚಿತ್ರ ಏಪ್ರಿಲ್‌ 5ರಂದು ತೆರೆಕಾಣಲು ಮುಹೂರ್ತ ನಿಗದಿಯಾಗಿದೆ. ‘ಚಾಲೆಂಜಿಂಗ್ ಸ್ಟಾರ್’ ದರ್ಶನ್‌ ದುರ್ಯೋಧನನಾಗಿ ನಟಿಸಿರುವ ಈ ಚಿತ್ರಕ್ಕೆ ಬಂಡವಾಳ ಹೂಡಿರುವುದು ಶಾಸಕ ಮುನಿರತ್ನ. ಕಳೆದ ವರ್ಷವೇ ಚಿತ್ರ ತೆರೆಕಾಣಬೇಕಿತ್ತು. ಆದರೆ, ಚಿತ್ರದ 2D ಮತ್ತು 3D ಆವೃತ್ತಿಯಲ್ಲಿ ಬಿಡುಗಡೆಯಾಗುತ್ತಿದೆ. ಹಾಗಾಗಿ, ಬಿಡುಗಡೆ ವಿಳಂಬವಾಗಿತ್ತು.

ಈಗ ಚಿತ್ರದ 2D ಆವೃತ್ತಿಗೆ ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಪ್ರಮಾಣಪತ್ರ ನೀಡಿರುವ ಸುದ್ದಿ ಹೊರಬಿದ್ದಿದೆ. ಇನ್ನೊಂದೆಡೆ 3D ಆವೃತ್ತಿ ಬಿಡುಗಡೆಯಾಗುತ್ತದೋ ಅಥವಾ ಇಲ್ಲವೋ ಎನ್ನುವ ಅನುಮಾನವೂ ದರ್ಶನ್‌ ಅಭಿಮಾನಿಗಳಲ್ಲಿ ಇತ್ತು. ಬಲ್ಲ ಮೂಲಗಳ ಪ್ರಕಾರ 3D ಆವೃತ್ತಿಯೂ ಏಕಕಾಲಕ್ಕೆ ಬಿಡುಗಡೆಯಾಗಲಿದೆ ಎಂಬ ಹೊಸ ಸುದ್ದಿ ಅಭಿಮಾನಿಗಳಲ್ಲಿ ಖುಷಿ ತಂದಿದೆ.

ಇದು ದರ್ಶನ್‌ ನಟನೆಯ 50ನೇ ಚಿತ್ರ. ಈ ಸಿನಿಮಾ3D ಆವೃತ್ತಿಗೆ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ಪ್ರಮಾಣ ಪತ್ರ ಲಭಿಸಿದ ತಕ್ಷಣವೇ ಬಿಡುಗಡೆಯ ದಿನಾಂಕವನ್ನು ನಿರ್ಮಾಪಕರು ಘೋಷಿಸುವ ಸಾಧ್ಯತೆಯಿದೆ. ಜೊತೆಗೆ, ಚಿತ್ರ ತಮಿಳು, ತೆಲುಗು, ಮಲಯಾಳ ಭಾಷೆಗೂ ಡಬ್‌ ಆಗುತ್ತಿದೆ. ಕುರುಕ್ಷೇತ್ರಕ್ಕೂ ಮೊದಲು ದರ್ಶನ್ ನಟನೆಯ ‘ಯಜಮಾನ’ ಬಿಡುಗಡೆಯಾಗುತ್ತಿದೆ.

ADVERTISEMENT

ಕುರುಕ್ಷೇತ್ರ ಚಿತ್ರದ ಶೀರ್ಷಿಕೆಯು ವಿವಾದಕ್ಕೆ ಕಾರಣವಾಗಿತ್ತು. ಕೊನೆಗೆ ‘ಮುನಿರತ್ನಕುರುಕ್ಷೇತ್ರ’ ಎಂದು ಹೆಸರಿಡಲಾಯಿತು. ನಾಗಣ್ಣ ಈ ಸಿನಿಮಾ ನಿರ್ದೇಶಿಸಿದ್ದು, ಮುನಿರತ್ನ ಕಥೆ ಬರೆದಿದ್ದಾರೆ. ಜಿ.ಕೆ. ಭಾರವಿ ಸಂಭಾಷಣೆ ಬರೆದಿದ್ದಾರೆ. ಜಯನನ್‌ ವಿನ್ಸೆಂಟ್‌ ಅವರ ಛಾಯಾಗ್ರಹಣವಿದೆ. ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ವಿ.ನಾಗೇಂದ್ರಪ್ರಸಾದ್‌ ಸಾಹಿತ್ಯ ನೀಡಿದ್ದಾರೆ. ‘ಬಾಹುಬಲಿ’ ಖ್ಯಾತಿಯ ಕಿಂಗ್‌ ಸಾಲೋಮನ್‌ ಅವರ ಸಾಹಸ ಚಿತ್ರಕ್ಕಿದೆ.

ಕರ್ಣನಾಗಿ ಅರ್ಜುನ್‌ ಸರ್ಜಾ, ಕೃಷ್ಣನಾಗಿ ರವಿಚಂದ್ರನ್‌ ನಟಿಸಿದ್ದಾರೆ. ಭಾನುಮತಿ ಪಾತ್ರದಲ್ಲಿ ಮೇಘನಾರಾಜ್, ಭೀಷ್ಮನಾಗಿ ಅಂಬರೀಷ್‌ ಮತ್ತು ಕುಂತಿ ಪಾತ್ರದಲ್ಲಿ ಭಾರತಿ ವಿಷ್ಣುವರ್ಧನ್ ನಟಿಸಿದ್ದಾರೆ.

ಉಳಿದಂತೆ ಶಶಿಕುಮಾರ್ (ಧರ್ಮರಾಯ), ಡ್ಯಾನಿಶ್ ಅಖ್ತರ್ (ಭೀಮ), ಸೋನು ಸೂದ್ (ಅರ್ಜುನ), ಯಶಸ್‍ಸೂರ್ಯ (ನಕುಲ), ಚಂದನ್ (ಸಹದೇವ), ನಿಖಿಲ್‍ ಕುಮಾರಸ್ವಾಮಿ (ಅಭಿಮನ್ಯು), ರವಿಶಂಕರ್ (ಶಕುನಿ), ಸ್ನೇಹಾ (ದ್ರೌಪದಿ), ರಾಕ್‍ಲೈನ್ ವೆಂಕಟೇಶ್ (ಶಲ್ಯ), ರಮೇಶ್‍ ಭಟ್ (ವಿದುರ), ಶ್ರೀನಿವಾಸಮೂರ್ತಿ (ದ್ರೋಣಾಚಾರ್ಯ), ಶ್ರೀನಾಥ್ (ಧೃತರಾಷ್ಟ್ರ), ರವಿಚೇತನ್ (ದುಶ್ಯಾಸನ), ಅವಿನಾಶ್ (ಗಂಗಾಧರರಾಜ), ಪವಿತ್ರಾ ಲೋಕೇಶ್ (ಸುಭದ್ರಾ) ಹಾಗೂ ನಟಿ ಹರಿಪ್ರಿಯಾ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.