ADVERTISEMENT

ದೆವ್ವಗಳ ‘ಕುಟೀರ’ಕ್ಕೆ ಕೋಮಲ್‌

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2024, 22:14 IST
Last Updated 22 ಫೆಬ್ರುವರಿ 2024, 22:14 IST
ಪ್ರಿಯಾಂಕ ತಿಮ್ಮೇಶ್, ಕೋಮಲ್‌ 
ಪ್ರಿಯಾಂಕ ತಿಮ್ಮೇಶ್, ಕೋಮಲ್‌    

ಚಂದನವನದಿಂದ ಕೆಲ ವರ್ಷ ದೂರ ಉಳಿದಿದ್ದ ಸೆನ್ಸೇಷನಲ್‌ ಸ್ಟಾರ್‌ ಕೋಮಲ್‌ಕುಮಾರ್‌ ಇದೀಗ ಸಾಲು ಸಾಲು ಸಿನಿಮಾಗಳಿಗೆ ಹಸಿರು ನಿಶಾನೆ ನೀಡುತ್ತಿದ್ದಾರೆ. ‘ಕಾಲಾಯ ನಮಃ’, ‘ಯಲಾಕುನ್ನಿ’ ಬಳಿಕ ಇದೀಗ ಕೋಮಲ್‌ ನಟನೆಯ ‘ಕುಟೀರ’ ಎನ್ನುವ ಹೊಸ ಪ್ರಾಜೆಕ್ಟ್‌ ಸೆಟ್ಟೇರಿದೆ. 

ಇದು ಕೋಮಲ್ ನಾಯಕರಾಗಿ ನಟಿಸುತ್ತಿರುವ 25ನೇ ಚಿತ್ರವಾಗಿದ್ದು, ಅನೂಪ್‌ ಆಂಟೊನಿ ಈ ಸಿನಿಮಾಗೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಕಂಸಾಳೆ ಫಿಲಂಸ್ ಲಾಂಛನದಲ್ಲಿ ಮಧು ಮರಿಸ್ವಾಮಿ ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಇತ್ತೀಚಿಗೆ ಚಿತ್ರದ ಮುಹೂರ್ತ ನಡೆದಿದೆ. 

‘ನಾನು ಈವರೆಗೂ ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೆ ನಾಯಕನಾಗಿ ನಟಿಸುತ್ತಿರುವ 25ನೇ ಚಿತ್ರವಿದು’ ಎಂದು ಮಾತು ಆರಂಭಿಸಿದ ಕೋಮಲ್‌, ‘ಈ ಚಿತ್ರ ಹಾರಾರ್ ಕಾಮಿಡಿ ಫ್ಯಾಂಟಸಿ ಜಾನರ್‌ನಲ್ಲಿದೆ. ಚಿತ್ರದ ಶೀರ್ಷಿಕೆಯೇ ಹೇಳುವಂತೆ, ‘ಕುಟೀರ’ ಎಂದರೆ ಮನೆ. ಈ ಚಿತ್ರದಲ್ಲೂ ಒಂದು ದೊಡ್ಡ ಮನೆ ಇರುತ್ತದೆ. ಅಲ್ಲಿಗೆ ಬಂದು ಸಿಕ್ಕಿ ಹಾಕಿಕೊಳ್ಳುವ ನನಗೆ ದೆವ್ವಗಳು ಏನು ಮಾಡುತ್ತವೆ ಎಂಬುವುದನ್ನು ನಿರ್ದೇಶಕರು ಹಾಸ್ಯದ ಮುಖಾಂತರ ತೋರಿಸಲಿದ್ದಾರೆ’ ಎಂದರು. 

ADVERTISEMENT

‘ಮಾರ್ಚ್ ಎರಡನೇ ವಾರದಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಹೆಚ್ಚಿನ ಭಾಗ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯಲಿದೆ. ‘ಗಣಪ’ ಚಿತ್ರದ ಖ್ಯಾತಿಯ ಪ್ರಿಯಾಂಕ ತಿಮ್ಮೇಶ್ ಈ ಚಿತ್ರದ ನಾಯಕಿ. ಆಂಗ್ಲೊ ಇಂಡಿಯನ್‌ ಹುಡುಗಿಯಾಗಿ ಅವರಿಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯಶ್ ಶೆಟ್ಟಿ, ಕಾಕ್ರೋಚ್‌ ಸುಧಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಬಿ.ಜಿ.ಭರತ್ ಸಂಗೀತ ನಿರ್ದೇಶನ, ಅರುಣ್ ಸುರೇಶ್ ಛಾಯಾಚಿತ್ರಗ್ರಹಣ ಹಾಗೂ ಎನ್. ಎಂ. ವಿಶ್ವ ಅವರ ಸಂಕಲನ ಚಿತ್ರಕ್ಕಿದೆ’ ಎಂದು ಅನೂಪ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.