ADVERTISEMENT

‘ಲಕ್ಷ್ಮಿ ಬಾಂಬ್‌’ ಸಿನಿಮಾ: ಒಟಿಟಿಗೆ ₹ 125 ಕೋಟಿಗೆ ಮಾರಾಟ?

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 14:11 IST
Last Updated 1 ಜುಲೈ 2020, 14:11 IST
‘ಲಕ್ಷ್ಮಿ ಬಾಂಬ್‌’ ಚಿತ್ರದ ಪೋಸ್ಟರ್‌
‘ಲಕ್ಷ್ಮಿ ಬಾಂಬ್‌’ ಚಿತ್ರದ ಪೋಸ್ಟರ್‌   

ತಮಿಳಿನಲ್ಲಿ ‘ಮುನಿ’ ಚಿತ್ರದ ಮೂಲಕ ಸರಣಿ ಹಾರರ್‌ ಸಿನಿಮಾಗಳಿಗೆ ಆ್ಯಕ್ಷನ್‌ ಕಟ್‌ ಹೇಳಿದ್ದ ರಾಘವ ಲಾರೆನ್ಸ್‌, ಬಾಲಿವುಡ್‌ನಲ್ಲೂ ‘ಕಾಂಚನ’ಳ ಭಯಾನಕ ಅವತಾರ ತೋರಿಸಲು ಸಜ್ಜಾಗಿರುವುದು ಹಳೆಯ ಸುದ್ದಿ. ‘ಮುನಿ’ ಚಿತ್ರದ ಸೀಕ್ವೆಲ್‌ಗೆ ಅವರು ‘ಕಾಂಚನ’ ಎಂದು ಹೆಸರಿಟ್ಟಿದ್ದರು. ಈ ಕಾಂಚನ ಈಗ ‘ಲಕ್ಷ್ಮಿ ಬಾಂಬ್‌’ ಹೆಸರಿನ ಮೂಲಕ ಹಿಂದಿಯಲ್ಲೂ ತನ್ನ ಚಮತ್ಕಾರ ತೋರಿಸಲು ಸಿದ್ಧಳಾಗುತ್ತಿದ್ದಾಳೆ.

ಅಕ್ಷಯ್‌ ಕುಮಾರ್ ಮತ್ತು ಕಿಯಾರಾ ಅಡ್ವಾಣಿ ನಟನೆಯ ಈ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ನಡೆಯುತ್ತಿದೆ. ಲಾಕ್‌ಡೌನ್‌ ಪರಿಣಾಮ ಚಿತ್ರಮಂದಿರಗಳಿಗೆ ಈಗ ಬೀಗಮುದ್ರೆ ಬಿದ್ದಿದೆ. ಯಾವಾಗ ಕಾರ್ಯಾರಂಭ ಮಾಡುತ್ತವೆ ಎಂಬುದು ಗೊತ್ತಿಲ್ಲ. ಈ ನಡುವೆಯೇ ‘ಲಕ್ಷ್ಮಿ ಬಾಂಬ್‌’ ಚಿತ್ರವನ್ನು ಡಿಸ್ನಿ+ಹಾಟ್‌ಸ್ಟಾರ್‌ ₹ 125 ಕೋಟಿಗೆ ಖರೀದಿಸಿದೆ ಎಂಬ ಸುದ್ದಿ ಬಿಟೌನ್‌ನಿಂದ ಹೊರಬಿದ್ದಿದೆ. ಅಂದಹಾಗೆ ಒಟಿಟಿ ವೇದಿಕೆಗಳ ಇತಿಹಾಸದಲ್ಲಿಯೇ ಇಷ್ಟು ದೊಡ್ಡ ಮೊತ್ತಕ್ಕೆ ಖರೀದಿಯಾದ ಮೊದಲ ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ.

‘ಲಕ್ಷ್ಮಿ ಬಾಂಬ್‌’ ಸಿನಿಮಾವನ್ನು ದೀಪಾವಳಿಗೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಅದೇ ವೇಳೆಗೆ ಸಲ್ಮಾನ್‌ ಖಾನ್‌ ನಟನೆಯ ‘ರಾಧೇ’ ಸಿನಿಮಾವೂ ಬಿಡುಗಡೆಯಾಗಲಿದೆಯಂತೆ. ಎರಡು ಬಿಗ್‌ ಬಜೆಟ್‌ ಸಿನಿಮಾಗಳ ನಡುವೆ ಘರ್ಷಣೆ ಏರ್ಪಡಲಿದೆ. ಹಾಗಾಗಿ, ಒಟಿಟಿಯಲ್ಲಿ ‘ಲಕ್ಷ್ಮಿ ಬಾಂಬ್’ ಬಿಡುಗಡೆಗೆ ನಿರ್ಮಾಪಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ADVERTISEMENT

ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆಯಾದರೆ ₹ 300 ಕೋಟಿಗೂ ಹೆಚ್ಚು ಗಳಿಕೆ ಮಾಡಲಿದೆಯಂತೆ. ಅಕ್ಷಯ್‌ ಕುಮಾರ್‌ ಅವರ ಸಿನಿಮಾಗಳಿಗೆ ಇರುವ ಮಾರುಕಟ್ಟೆ ಮೌಲ್ಯ ಆಧರಿಸಿ ಸಿನಿ ಪಂಡಿತರು ಈ ಲೆಕ್ಕಾಚಾರ ಹಾಕಿದ್ದಾರೆ.

ಮತ್ತೊಂದು ಮೂಲದ ಪ್ರಕಾರ ಚಿತ್ರಮಂದಿರಗಳ ಪ್ರದರ್ಶನ ಆರಂಭವಾಗುವವರೆಗೂ ನಿರ್ಮಾಪಕರು ಕಾಯುವ ಸಾಧ್ಯತೆ ಇದೆ ಎಂಬ ಮಾಹಿತಿಯೂ ಇದೆ. ಸಿನಿಮಾಗಳ ಬಾಕಿ ಉಳಿದಿರುವ ಕೆಲಸವನ್ನು ಪೂರ್ಣಗೊಳಿಸಲು ಇನ್ನೂ ಸರ್ಕಾರ ಅನುಮತಿ ನೀಡಿಲ್ಲ. ಹಾಗಾಗಿ, ‘ಲಕ್ಷ್ಮಿ ಬಾಂಬ್‌’ ಸಿನಿಮಾವನ್ನು ಡಿಸ್ನಿ+ಹಾಟ್‌ಸ್ಟಾರ್‌ ಖರೀದಿಸಿದ್ದರೂ ಬಿಡುಗಡೆಗಾಗಿ ಇನ್ನೊಂದು ತಿಂಗಳು ಕಾಯಲು ನಿರ್ಮಾಪಕರು ನಿರ್ಧರಿಸಿದ್ದಾರೆ ಎಂಬ ಸುದ್ದಿ ಬಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.