ADVERTISEMENT

‘ಆಶ್ರಮ್‌’ ವೆಬ್‌ಸರಣಿ ವಿರುದ್ಧ ಪ್ರಕಾಶ್ ಝಾ ಹಾಗೂ ಬಾಬ್ಬಿ ಡಿಯೋಲ್‌ಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2020, 6:49 IST
Last Updated 15 ಡಿಸೆಂಬರ್ 2020, 6:49 IST
ಆಶ್ರಮ್ ವೆಬ್‌ಸರಣಿಯ ಪೋಸ್ಟರ್‌
ಆಶ್ರಮ್ ವೆಬ್‌ಸರಣಿಯ ಪೋಸ್ಟರ್‌   

ಇತ್ತೀಚೆಗೆ ಬಿಡುಗಡೆಯಾದ ಆಶ್ರಮ್ ವೆಬ್‌ಸರಣಿಯಲ್ಲಿ ಹಿಂದೂ ಸಂತರನ್ನು ವಿವಾದಾತ್ಮಕವಾಗಿ ಚಿತ್ರೀಕರಿಸಿದ್ದಾರೆ ಎಂಬ ಕಾರಣಕ್ಕೆ ನಿರ್ದೇಶಕ ಪ್ರಕಾಶ್ ಝಾ ಹಾಗೂ ನಟ ಬಾಬ್ಬಿ ಡಿಯೋಲ್‌ ಅವರಿಗೆ ಜೋಧ್‌ಪುರ ನ್ಯಾಯಾಲಯ ನೋಟಿಸ್ ನೀಡಿದೆ. ಆಶ್ರಮ್ ಚಾಪ್ಟರ್‌ 2: ದಿ ಡಾರ್ಕ್ ಸೈಡ್ ವೆಬ್ ಸರಣಿಯು ನವೆಂಬರ್‌ 11 ರಂದು ಬಿಡುಗಡೆಯಾಗಿತ್ತು.

ಎಮ್‌ಎಕ್ಸ್ ಪ್ಲೇಯರ್‌ನಲ್ಲಿ ಪ್ರಸಾರವಾದ ಈ ವೆಬ್‌ಸರಣಿಯಲ್ಲಿ ರಾಜಸ್ಥಾನದ ಜೋಧ್‌ಪುರ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಶಿಕ್ಷೆಗೆ ಗುರಿಯಾದ ಹಾಗೂ ಜೈಲು ಶಿಕ್ಷೆ ಅನುಭವಿಸುತ್ತಿರುವ ಕೆಲವು ಸ್ವಯಂ ಘೋಷಿತ ದೇವಮಾನವರ ಕಥೆಗೆ ಹೋಲುವಂತೆ ಚಿತ್ರೀಕರಿಸಲಾಗಿತ್ತು. ಬಾಬ್ಬಿ ಡಿಯೋಲ್‌ ಈ ಸರಣಿಯಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಜೋಧ್‌ಪುರ ನ್ಯಾಯಾಲಯದ ಸೆಷನ್‌ ನ್ಯಾಯಧೀಶ ರವೀಂದ್ರ ಜೋಷಿ ಈ ಇಬ್ಬರಿಗೆ ಜನವರಿ 11ಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಸ್ಥಳೀಯ ನಿವಾಸಿ ಖುಷಿ ಖಂಡೇಲ್ವಾಲ್ ಎನ್ನುವವರು ಈ ವೆಬ್‌ಸರಣಿಯ ವಿರುದ್ಧ ಅರ್ಜಿ ಸಲ್ಲಿಸಿದ್ದರು.

ADVERTISEMENT

‘ವೆಬ್‌ಸರಣಿಯಲ್ಲಿ ಹಿಂದೂ ಸಂತರನ್ನು ಅವಮಾನಿಸಲಾಗಿದೆ. ಇದು ಸಂತರನ್ನು ಗೌರವಿಸುವ ಹಾಗೂ ಪೂಜಿಸುವ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಬರುವಂತೆ ಮಾಡಿದೆ’ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಹಿಂದೆ ಖಂಡೇಲ್ವಾಲ್ ಈ ವಿಷಯಕ್ಕೆ ಸಂಬಂಧಿಸಿ ಪೊಲೀಸರಿಗೆ ದೂರು ನೀಡಿದ್ದರು ಹಾಗೂ ಈ ಇಬ್ಬರ ವಿರುದ್ಧ ಎಫ್‌ಐಆರ್ ನೋಂದಾಯಿಸುವಂತೆ ಕೇಳಿಕೊಂಡಿದ್ದರು. ಆದರೆ ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದ್ದರು ಆ ಕಾರಣಕ್ಕೆ ನೇರವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಈ ವಿಷಯಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವು ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.