ADVERTISEMENT

ಲವ್ ಮಾಕ್ಟೇಲ್‌: ಕೃಷ್ಣನ ತ್ರಿಪಾತ್ರ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 19:30 IST
Last Updated 23 ಜನವರಿ 2020, 19:30 IST
ಅಮೃತಾ ಅಯ್ಯಂಗಾರ್
ಅಮೃತಾ ಅಯ್ಯಂಗಾರ್   

‘ಮದರಂಗಿ’ ಚಿತ್ರದ ಖ್ಯಾತಿಯ ಕೃಷ್ಣ ಪ್ರಥಮ ಬಾರಿಗೆ ನಿರ್ದೇಶಿಸಿರುವ ಚಿತ್ರ ‘ಲವ್ ಮಾಕ್ಟೇಲ್‌’. ಸಿನಿಮಾಕ್ಕೆ ಆರ್ಥಿಕ ಇಂಧನ ಒದಗಿಸಿರುವ ಜೊತೆಗೆ ಹೀರೊ ಆಗಿಯೂ ಅವರು ನಟಿಸುತ್ತಿದ್ದಾರೆ. ಹಾಗಾಗಿ, ಅವರದು ಬೆಳ್ಳಿತೆರೆಯಲ್ಲಿ ಮೊದಲ ಬಾರಿಗೆ ತ್ರಿಬಲ್‌ ಪಾರ್ಟ್‌!

ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ನೊಗವನ್ನೂ ಅವರೇ ಹೊತ್ತಿದ್ದಾರೆ. ಬೆಂಗಳೂರು, ಮೈಸೂರು, ಕಳಸ, ಚಿಕ್ಕಮಗಳೂರು ಮತ್ತು ಉಡುಪಿಯಲ್ಲಿ ಶೂಟಿಂಗ್‌ ನಡೆಸಲಾಗಿದೆ. ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಮುಗಿದಿದ್ದು,ಜನವರಿ 31ರಂದು ತೆರೆ ಕಾಣಲಿದೆ.

‘ನವಿರು ಪ್ರೇಮದ ಕಥೆ ಇದಾಗಿದೆ. ಒಬ್ಬ ಹುಡುಗನ ಸ್ಕೂಲ್‌ ಜೀವನದಿಂದ ಹಿಡಿದು ಮದುವೆವರೆಗಿನ ಕಥೆಯನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇನೆ. ಆತನ ಬದುಕಿನಲ್ಲಿ ಪ್ರೀತಿ ಏನೆಲ್ಲಾ ತವಕ, ತಲ್ಲಣ ಸೃಷ್ಟಿಸುತ್ತದೆ ಎನ್ನುವುದೇ ಚಿತ್ರದ ಸಾರಾಂಶ. ಭಾವುಕತೆಯ ಹೂರಣವೂ ಇದೆ. ಶುದ್ಧವಾದ ಪ್ರೀತಿ ಕುರಿತು ಹೇಳಲು ಹೊರಟಿದ್ದೇನೆ’ ಎನ್ನುತ್ತಾರೆ ಕೃಷ್ಣ.‌

ADVERTISEMENT

ನಾಲ್ಕೈದು ಹಣ್ಣುಗಳನ್ನು ಮಿಶ್ರಣ ಮಾಡಿ ಮಾಡುವ ಜ್ಯೂಸ್‌ಗೆ ಮಾಕ್ಟೇಲ್‌ ಎನ್ನುತ್ತಾರೆ. ನಾಯಕನ ಬದುಕಿನಲ್ಲಿ ಮೂರು ಘಟ್ಟಗಳು ಪರದೆ ಮೇಲೆ ತೆರೆದುಕೊಳ್ಳಲಿವೆಯಂತೆ. ಪ್ರತಿಯೊಂದು ಹಂತದಲ್ಲಿ ಒಂದೊಂದು ಕಥೆ ಬಿಚ್ಚಿಕೊಳ್ಳಲಿದೆ. ಆ ಕಥೆಗೆ ತಕ್ಕಂತೆ ನಾಯಕನ ಬದುಕು ಕೂಡ ಬದಲಾಗುತ್ತಾ ಸಾಗುತ್ತದೆ.ಚಿತ್ರದಲ್ಲಿ ಭರ್ಜರಿ ಆ್ಯಕ್ಷನ್‌ ದೃಶ್ಯಗಳೂ ಇವೆಯಂತೆ.

ನಟ ಸುದೀಪ್ ಚಿತ್ರದ ‘ಲವ್‌ ಯು ಚಿನ್ನ’ ಹಾಡನ್ನು ಬಿಡುಗಡೆ ಮಾಡಿದ್ದಾರೆ. ರಾಘವೇಂದ್ರ ಕಾಮತ್‌ ಈ ಹಾಡು ರಚಿಸಿದ್ದಾರೆ. ಇದಕ್ಕೆ ಶ್ರುತಿ ಮತ್ತು ನಕುಲ್‌ ಅಭ್ಯಂಕರ್‌ ಧ್ವನಿಯಾಗಿದ್ದಾರೆ.

ಮಿಲನ ನಾಗರಾಜ್‌ ನಾಯಕಿಯಾಗಿ ನಟಿಸುವ ಜೊತೆಗೆ ಚಿತ್ರಕ್ಕೆ ಬಂಡವಾಳ ಕೂಡ ಹೂಡಿದ್ದಾರೆ. ಅಮೃತಾ ಅಯ್ಯಂಗಾರ್‌ ಮತ್ತು ರಚನಾ ಇಂದರ್‌ ಉಳಿದ ನಾಯಕಿಯರು. ಶ್ರೀ ಕ್ರೇಜಿಮೈಂಡ್ಸ್‌ ಅವರ ಛಾಯಾಗ್ರಹಣ ಮತ್ತು ಸಂಕಲನವಿದೆ. ಐದು ಹಾಡುಗಳಿಗೆ ರಘು ದೀಕ್ಷಿತ್‌ ಸಂಗೀತ ಸಂಯೋಜಿಸಿದ್ದಾರೆ. ಅಭಿಲಾಷ್‌, ಖುಷಿ ತಾರಾಗಣದಲ್ಲಿದ್ದಾರೆ. ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.