ADVERTISEMENT

ತಂದೆ–ಮಗಳ ಪಯಣದ ‘ಲವ್‌ ಮಾಕ್ಟೇಲ್‌ 3’

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 20:07 IST
Last Updated 11 ಡಿಸೆಂಬರ್ 2025, 20:07 IST
ಡಾರ್ಲಿಂಗ್‌ ಕೃಷ್ಣ 
ಡಾರ್ಲಿಂಗ್‌ ಕೃಷ್ಣ    

2020ರಲ್ಲಿ ತೆರೆಕಂಡ ‘ಲವ್‌ ಮಾಕ್ಟೇಲ್‌’ ಸಿನಿಮಾ ನಟ ಡಾರ್ಲಿಂಗ್‌ ಕೃಷ್ಣ ಹಾಗೂ ನಟಿ ಮಿಲನಾ ನಾಗರಾಜ್‌ ಸಿನಿಪಯಣಕ್ಕೆ ದೊಡ್ಡ ತಿರುವು ನೀಡಿತ್ತು. ಈ ಸಿನಿಮಾದ ಯಶಸ್ಸು ‘ಲವ್‌ ಮಾಕ್ಟೇಲ್‌’ ಸರಣಿಗೆ ಕಾರಣವಾಯಿತು. 2022ರಲ್ಲಿ ತೆರೆಕಂಡ ಸಿನಿಮಾದ ಸೀಕ್ವೆಲ್‌ ‘ಲವ್‌ ಮಾಕ್ಟೇಲ್‌–2’ ಕೂಡಾ ಯಶಸ್ವಿಯಾಯಿತು. ಇದೀಗ ಮೂರನೇ ಭಾಗ ತೆರೆಗೆ ಬರಲು ಸಜ್ಜಾಗುತ್ತಿದೆ. 2026ರಲ್ಲಿ ಈ ಸಿನಿಮಾ ರಿಲೀಸ್‌ ಆಗಲಿದೆ. 

ಇತ್ತೀಚೆಗೆ ಸಿನಿಮಾದ ಲಿರಿಕಲ್‌ ಹಾಡೊಂದನ್ನು ಡಾರ್ಲಿಂಗ್‌ ಕಷ್ಣ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಾಕಿಕೊಂಡಿದ್ದು, ನಿರ್ದೇಶಕ ಶಶಾಂಕ್‌ ಬರೆದ ಹಾಡಿಗೆ ಸಂಗೀತ ನಿರ್ದೇಶಕ ನಕುಲ್‌ ಅಭ್ಯಂಕರ್‌ ದನಿಯಾಗಿದ್ದಾರೆ. 

ಅಪ್ಪ–ಮಗಳ ಭಾವನಾತ್ಮಕ ಕಥೆ 

ADVERTISEMENT

ಸಿನಿಮಾ ಕುರಿತು ಮಾತನಾಡಿದ ಡಾರ್ಲಿಂಗ್‌ ಕೃಷ್ಣ, ‘ಲವ್‌ ಮಾಕ್ಟೇಲ್‌ ಸಿನಿಮಾದ ಆಯಾ ಭಾಗಗಳ ಪೋಸ್ಟರ್‌ಗಳನ್ನು ನೋಡಿದರೇ ಸಿನಿಮಾದ ಕಥೆಯನ್ನು ಊಹಿಸಬಹುದು. ಮೊದಲೆರಡು ಸಿನಿಮಾಗಳ ಜಾನರ್‌ ಬೇರೆ ಬೇರೆಯದ್ದಾಗಿತ್ತು. ಒಂದನೇ ಭಾಗ ‘ಕಮಿಂಗ್‌ ಆಫ್‌ ಏಜ್‌’ ವಿಭಾಗದಲ್ಲಿತ್ತು. ಎಂದರೆ ಯುವ ಪಾತ್ರಗಳೇ ಹೆಚ್ಚಾಗಿತ್ತು. ಎರಡನೇ ಭಾಗ ಭಾವನಾತ್ಮಕ ಕಥೆಯನ್ನೊಳಗೊಂಡಿತ್ತು. ಮೂರನೇ ಭಾಗದಲ್ಲಿ ಅಪ್ಪ–ಮಗಳ ಕಥೆಯಿದೆ. ಅವರ ನಡುವಿನ ಭಾವನಾತ್ಮಕ ಸವಾರಿಯ ಕಥನವಿದು. ಇದು ‘ಆದಿ’ಯ ಪಯಣವೂ ಹೌದು. ಎರಡನೇ ಭಾಗದ ಕ್ಲೈಮ್ಯಾಕ್ಸ್‌ನಲ್ಲಿ ಬರುವ ದತ್ತು ಮಗಳ ಪಾತ್ರ ಇಲ್ಲಿ ಮುಂದುವರಿದಿದೆ. ಮಗಳಾಗಿ ಸಂವೃತಾ ನಟಿಸಿದ್ದಾಳೆ’ ಎಂದರು.  

‘ಬೆಂಗಳೂರು, ಮೈಸೂರು, ಕಛ್‌, ಜೋಧ್‌ಪುರ್‌, ಜೈಸಲ್ಮೇರ್‌, ಅಂಡಮಾನ್‌, ಜಾರ್ಜಿಯಾದಲ್ಲಿ ಚಿತ್ರದ ಶೂಟಿಂಗ್‌ ನಡೆದಿದೆ. ಜನವರಿ–ಫೆಬ್ರುವರಿಯಲ್ಲಿ ಮೊದಲೆರಡು ಭಾಗಗಳು ತೆರೆಕಂಡಿದ್ದವು. ಇದು ನಮ್ಮ ಲಕ್ಕಿ ತಿಂಗಳು. ಆದರೆ ಮೂರನೇ ಭಾಗದ ಬಿಡುಗಡೆ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಅಪ್ಪ–ಮಗಳ ಕಥೆಯಾಗಿರುವ ಕಾರಣ ಇಡೀ ಕುಟುಂಬ ಜೊತೆಯಾಗಿ ಈ ಸಿನಿಮಾ ನೋಡಬೇಕು. ಫೆಬ್ರುವರಿಯಲ್ಲಿ ಪರೀಕ್ಷೆಗಳು ಇರುವ ಕಾರಣ ಪೋಷಕರು ಮಕ್ಕಳನ್ನು ಓದಿಸುವುದರಲ್ಲಿ ತಲ್ಲೀನರಾಗಿರುತ್ತಾರೆ. ಹೀಗಾಗಿ ರಿಲೀಸ್‌ ದಿನಾಂಕದ ಬಗ್ಗೆ ಇನ್ನಷ್ಟೇ ನಿರ್ಧಾರ ಕೈಗೊಳ್ಳಬೇಕಿದೆ. ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ’ ಎನ್ನುತ್ತಾರೆ ಕೃಷ್ಣ.  

ಸಿನಿಮಾದ ಆಡಿಯೊ ಹಕ್ಕುಗಳನ್ನು ಆನಂದ್‌ ಆಡಿಯೊ ಖರೀಸಿದಿದೆ. ಡಾರ್ಲಿಂಗ್‌ ಕೃಷ್ಣ ಹಾಗೂ ಮಿಲನಾ ನಾಗರಾಜ್‌ ಜೊತೆಗೂಡಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.