ADVERTISEMENT

‘ಲುಂಗಿ’ಯ ರೆಡಿಮೇಡ್‌ ಪ್ರೇಮಕಥೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2019, 8:26 IST
Last Updated 9 ಸೆಪ್ಟೆಂಬರ್ 2019, 8:26 IST
ಅರ್ಜುನ್ ಲೂಯಿಸ್, ಅಕ್ಷಿತ್ ಶೆಟ್ಟಿ
ಅರ್ಜುನ್ ಲೂಯಿಸ್, ಅಕ್ಷಿತ್ ಶೆಟ್ಟಿ   

‘ಲುಂಗಿ’ ಎಂಬುದು ಹಳ್ಳಿಗರಿಗೆ ಹಾಗೂ ಪಟ್ಟಣದ ಕೆಲವರಿಗೆ ಯಾವತ್ತಿಗೂ ಬೇಕಾಗುವ ವಸ್ತ್ರ. ಆದರೆ ಮಂಗಳೂರಿನ ಸಿನಿಮಾ ತಂಡವೊಂದಕ್ಕೆ ‘ಲುಂಗಿ’ ಅಂದರೆ ರೆಡಿಮೇಡ್‌ ಪ್ರೇಮಕಥೆ.

ಒಂದು ವರ್ಷದ ಹಿಂದೆ ಸೆಟ್ಟೇರಿದ್ದ ಈ ಚಿತ್ರದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯಿತು.ಈ ರೆಡಿಮೇಡ್‌ ಲವ್ ಸ್ಟೋರಿಯ ಕಥೆಯನ್ನು ಚುಟುಕಾಗಿ ಹಂಚಿಕೊಂಡವರು ನಿರ್ಮಾಪಕ ಮುಕೇಶ್ ಹೆಗ್ಡೆ. ‘ಈ ಸಿನಿಮಾ ನಿರ್ಮಾಣಕ್ಕೆ ಕೈಹಾಕುವ ಮೊದಲು ನಾನು ಎರಡು ತುಳು ಚಿತ್ರಗಳನ್ನು ನಿರ್ಮಾಣ ಮಾಡಿದ್ದೆ. ಅವು ಹಾಸ್ಯ ಪ್ರಧಾನ ಸಿನಿಮಾಗಳಾಗಿದ್ದವು. ತುಳು ಸಿನಿಮಾಗಳ ವೀಕ್ಷಕರ ವ್ಯಾಪ್ತಿ ಸೀಮಿತ. ಹಾಗಾಗಿ, ತುಳು ಸಿನಿಮಾ ನಂತರ ಮುಂದೇನು ಎಂಬ ಪ್ರಶ್ನೆ ಮೂಡಿತು. ಆ ಹೊತ್ತಿನಲ್ಲಿ ಮೂಡಿದ ಆಲೋಚನೆ, ಕನ್ನಡ ಸಿನಿಮಾ ನಿರ್ಮಾಣ’ ಎಂದರು ಮುಕೇಶ್.

ಮುಕೇಶ್ ಅವರು ಈ ಚಿತ್ರದ ನಿರ್ಮಾಣಕ್ಕೆ ಕೈಹಾಕುವ ಮೊದಲು ಇನ್ನೊಂದು ಚಿತ್ರದ ಕಥೆಯನ್ನು ಕೇಳಿದ್ದರು. ಆದರೆ, ಅದು ಅವರಿಗೆ ಇಷ್ಟವಾಗಿರಲಿಲ್ಲ. ಅವರಿಗೆ ಇಷ್ಟವಾಗಿದ್ದು ‘ಲುಂಗಿ’ ಚಿತ್ರದ ಕಥೆ. ಅದೇ ಈಗ ಸಿನಿಮಾ ಆಗಿ ವೀಕ್ಷಕರ ಎದುರು ಬರಲಿದೆ. ಅಂದಹಾಗೆ, ಈ ಚಿತ್ರದ ನಾಯಕ ನಟ ಪ್ರಣವ್ ಹೆಗ್ಡೆ. ಇವರು ಮುಕೇಶ್ ಅವರ ಪುತ್ರ. ಸಿನಿಮಾದಲ್ಲಿ ಅಭಿನಯಿಸಬೇಕು ಎಂದು ಪ್ರಣವ್ ಅವರು ರಂಗಾಯಣದಲ್ಲಿ ಹಾಗೂ ನಟ ರಾಜ್ ಬಿ. ಶೆಟ್ಟಿ ಅವರಲ್ಲಿ ತರಬೇತಿ ಕೂಡ ಪಡೆದಿದ್ದಾರೆ.

ADVERTISEMENT

‘ಈ ಚಿತ್ರದ ಕೆಲಸಗಳನ್ನು ಒಂದು ವರ್ಷದ ಹಿಂದೆ ಆರಂಭಿಸಿದೆವು. ಈಗ ನಮಗೆ ತೃಪ್ತಿ ಬರುವ ರೀತಿಯಲ್ಲಿ ಸಿನಿಮಾ ಮೂಡಿಬಂದಿದೆ’ ಎಂದರು ಪ್ರಣವ್. ಚಿತ್ರದ ನಾಯಕಿ ರಾಧಿಕಾ ರಾವ್ ಅವರಿಗೆ ಇದು ಮೊದಲ ಕನ್ನಡ ಸಿನಿಮಾ. ‘ಚಿತ್ರದ ಕಥೆ ಕೇಳಿದ ತಕ್ಷಣ ಸಿನಿಮಾದಲ್ಲಿ ನಟಿಸಬೇಕು ಎಂದು ಅನಿಸಿತು. ಅದರಲ್ಲೂ ಇದು ಮಂಗಳೂರು ತಂಡ ಎಂಬುದು ಗೊತ್ತಾದಾಗ ಮತ್ತಷ್ಟು ಖುಷಿ ಆಯಿತು’ ಎಂದರು ರಾಧಿಕಾ. ಆದರೆ ಮಂಗಳೂರು ಶೈಲಿಯ ಕನ್ನಡ ಮಾತನಾಡಲು ರಾಧಿಕಾ ತುಸು ಹೆಣಗಾಟ ನಡೆಸಬೇಕಾಗಿತ್ತಂತೆ.

ಚಿತ್ರದ ನಿರ್ದೇಶನ ಅರ್ಜುನ್ ಲೂಯಿಸ್ ಮತ್ತು ಅಕ್ಷಿತ್ ಶೆಟ್ಟಿ ಅವರದ್ದು. ತಾವು ಚಿತ್ರರಂಗಕ್ಕೆ ಹೊಸಬರೆಂದೂ, ಚಿತ್ರದ ಬಗ್ಗೆ ಪ್ರಚಾರ ನಡೆಸಲು ತಮ್ಮಿಂದ ಕಷ್ಟವೆಂದೂ ಅವರಿಬ್ಬರು ನಿರ್ಮಾಪಕರಲ್ಲಿ ಹೇಳಿಕೊಂಡಿದ್ದರಂತೆ. ‘ಆದರೆ, ಇದಕ್ಕೆಲ್ಲ ಹೆಚ್ಚಿಗೆ ತಲೆಕೆಡಿಸಿಕೊಳ್ಳದ ನಿರ್ಮಾಪಕರು, ಸಿನಿಮಾಕ್ಕೆ ಬಂಡವಾಳ ಹಾಕಿದರು’ ಎನ್ನುವುದು ಅರ್ಜುನ್ ಮತ್ತು ಅಕ್ಷಿತ್ ಅವರ ಮಾತುಗಳು.

ಸಿನಿಮಾ ಸಿದ್ಧಪಡಿಸಿದ್ದೇನೋ ಆಯಿತು, ಅದನ್ನು ಬಿಡುಗಡೆ ಮಾಡುವುದು ಹೇಗೆ ಎಂಬ ಚಿಂತೆ ಈ ತಂಡವನ್ನು ಕಾಡುತ್ತಿತ್ತು. ಆದರೆ, ತಂಡದ ನೆರವಿಗೆ ಬಂದಿರುವ ರಕ್ಷಿತ್ ಶೆಟ್ಟಿ ಮತ್ತು ರಂಜಿತ್ ಶೆಟ್ಟಿ ಚಿತ್ರದ ಬಿಡುಗಡೆಗೆ ಸಹಾಯ ಮಾಡುತ್ತಿದ್ದಾರೆ. ಚಿತ್ರವನ್ನು ಜಯಣ್ಣ ಕಂಬೈನ್ಸ್‌ ಮೂಲಕ ಬಿಡುಗಡೆ ಮಾಡಲಾಗುತ್ತಿದೆ. ಟ್ರೇಲರ್‌ ಬಿಡುಗಡೆ ವೇಳೆ ರಕ್ಷಿತ್ ಅವರಿಗೆ ಒಂದು ಲುಂಗಿ ನೀಡಿ ಗೌರವಿಸಲಾಯಿತು!

‘ಇದು ನೌಕರಿ ಮಾಡಲು ಒಲ್ಲದ, ಸ್ವಂತ ಉದ್ಯೋಗದ ಕಡೆ ಒಲವು ಇರುವ ಯುವಕನ ಕಥೆ’ ಎಂದು ಚಿತ್ರತಂಡ ಈ ಹಿಂದೆ ತಿಳಿಸಿತ್ತು. ಅಹಲ್ಯಾ ಸುರೇಶ್ ಅವರು ಈ ಚಿತ್ರದ ಇನ್ನೊಬ್ಬಳು ನಾಯಕಿ. ‘ಸರ್ಕಾರಿ ಹಿ.ಪ್ರಾ.ಶಾಲೆ ಕಾಸರಗೋಡು’ ಸಿನಿಮಾದ ಭುಜಂಗ ಅಲಿಯಾಸ್ ಪ್ರಕಾಶ್ ತೂಮಿನಾಡ್ ಈ ಚಿತ್ರದಲ್ಲಿ ಒಂದು ಪಾತ್ರ ನಿಭಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.