ADVERTISEMENT

‘ಮಧುಮತಿ’ ಮತ್ತೆ ತೆರೆಗೆ!

​ಪ್ರಜಾವಾಣಿ ವಾರ್ತೆ
Published 17 ಜನವರಿ 2019, 14:06 IST
Last Updated 17 ಜನವರಿ 2019, 14:06 IST
ಮಧುಮತಿ ಚಿತ್ರದಲ್ಲಿ ವೈಜಯಂತಿಮಾಲಾ
ಮಧುಮತಿ ಚಿತ್ರದಲ್ಲಿ ವೈಜಯಂತಿಮಾಲಾ   

‘ದಿಲ್‌ ತಡಪ್‌ ತಡಪ್‌ ಕೆ ಕೇಹ್‌ ರಹಾ...’

1958ರಲ್ಲಿ ತೆರೆ ಕಂಡ, ಆಗಿನ ಸೂಪರ್‌ ಹಿಟ್‌ ಚಿತ್ರ ‘ಮಧುಮತಿ’ ನೆನಪಾಯಿತೇ? ಮರೆಯಲು ಸಾಧ್ಯವೇ ಇಲ್ಲದ ಸಿನಿಮಾ ಮತ್ತು ಹಾಡುಗಳಿಂದ ಪ್ರೇಕ್ಷಕರ ಮನಗೆದ್ದಿದ್ದ ಪರಿಪೂರ್ಣ ಚಿತ್ರವದು. ಮಧುಮತಿ ತೆರೆಗೆ ಬಂದು ಬರೋಬ್ಬರಿ 60 ವರ್ಷಗಳಾಗಿವೆ. ಈಗವಳು ಮತ್ತೆ ಸುದ್ದಿಯಲ್ಲಿದ್ದಾಳೆ. ಕಾರಣವೇನು ಊಹಿಸಬಲ್ಲಿರಾ?

‘ಮಧುಮತಿ’ ಮತ್ತೆ ತೆರೆಗೆ ಬರಲಿದ್ದಾಳೆ. ಹೌದು, ಬಣ್ಣ ಬಣ್ಣದ ಬಟ್ಟೆಗಳ ತುಂಡುಗಳಿಂದ ಕೌದಿಯೊಂದು ರೂಪುಗೊಳ್ಳುವಂತೆ, ಹಿಂದಿ ಚಿತ್ರರಂಗದಲ್ಲಿ ಆ ಕಾಲದಲ್ಲಿ ದಿಗ್ಗಜರೆನಿಸಿಕೊಂಡವರನ್ನೆಲ್ಲ ಬಾಚಿಕೊಂಡು ಬಿಮಲ್‌ ರಾಯ್‌ ಅವರು ಹೆಣೆದ ಚಿತ್ರ ‘ಮಧುಮತಿ’.ದಿಲೀಪ್‌ ಕುಮಾರ್‌ ಮತ್ತು ವೈಜಯಂತಿಮಾಲಾ ಜೋಡಿಯ ಮೋಡಿ, ಜಾನಿ ವಾಕರ್‌ ಮತ್ತು ಪ್ರಾಣ್‌ ಜೋಡಿಯ ಅಮೋಘ ನಟನೆ ಚಿತ್ರಕ್ಕೆ ಮುಕುಟಪ್ರಾಯವಾಗಿತ್ತು.

ADVERTISEMENT

ಹಿನ್ನೆಲೆ ಗಾಯನದ್ದು ಮತ್ತೊಂದು ಕತೆ. ಮೊಹಮ್ಮದ್‌ ರಫಿ, ಮುಖೇಶ್‌, ಮನ್ನಾ ಡೇ, ಲತಾ ಮಂಗೇಶ್ಕರ್‌, ಆಶಾ ಬೋಂಸ್ಲೆ, ಮುಬಾರಕ್‌ ಬೇಗಂ, ಸಬಿತಾ ಚೌಧರಿ, ಗುಲಾಮ್‌ ಮೊಹಮ್ಮದ್‌ ಮತ್ತು ದ್ವಿಜೇನ್‌ ಮುಖೋಪಾಧ್ಯಾಯ ಅವರಂತಹ ಅತಿರಥ ಮಹಾರಥ ಗಾಯಕರು! ‘ಮಧುಮತಿ’ಯ ಹಾಡುಗಳಿಗೂ ವಿಶಿಷ್ಟವಾದ ಹಿನ್ನೆಲೆ ಇದೆ. ಮೊದಲು ಸಂಗೀತ ಸಂಯೋಜನೆ (ಸಾಹಿಲ್‌ ಚೌಧರಿ) ಮಾಡಿ, ಬಳಿಕ ಗೀತಸಾಹಿತ್ಯ (ಶೈಲೇಂದ್ರ) ರಚಿಸಲಾಗಿತ್ತು!

ಇಷ್ಟೇ ಅಲ್ಲ. ಅಸ್ಸಾಂನ ಚಹಾ ತೋಟಗಳಲ್ಲಿ ಸಾಮಾನ್ಯವಾಗಿ ಕೇಳಿಬರುವ ಜನಪದ ಹಾಡುಗಳನ್ನು ತಮ್ಮ ಸಂಗೀತ ಸಂಯೋಜನೆಗೆ ಬಳಸಿಕೊಂಡಿದ್ದರು ಸಾಹಿಲ್‌ ಅವರು. ಲೆಜೆಂಡರಿ ಹಾಡು ‘ದಿಲ್‌ ತಡಪ್‌ ತಡಪ್‌..’ಗೆ ಹಂಗೇರಿಯ ಜನಪದ ಹಾಡುಗಳ ಸೌಂಡ್‌ ಟ್ರ್ಯಾಕ್‌ ಬಳಸಲಾಗಿತ್ತು.

ಈಗ ‘ಮಧುಮತಿ’ಯ ವರ್ತಮಾನಕ್ಕೆ ಬರೋಣ. ಬಿಮಲ್‌ ರಾಯ್‌ ಅವರ ಮಗಳು ರಿಂಕಿ ರಾಯ್‌ ಭಟ್ಟಾಚಾರ್ಯ ಅವರಿಗೆ, ಸಾರ್ವಕಾಲಿಕ ‘ಮಧುಮತಿ’ಯನ್ನು ಮತ್ತೆ ಹೊಸ ತಲೆಮಾರಿಗೆ ಪರಿಚಯಿಸುವ ಉಮೇದು ಬಂದಿದೆ. ರಿಂಕಿಗೆ ಈ ಯೋಚನೆ ಬಂದದ್ದು ಮುಂಬೈನಲ್ಲಿ ಇತ್ತೀಚೆಗೆ ನಡೆದಬಿಮಲ್ ರಾಯ್‌ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ. ತಮ್ಮ ತಂದೆಯ ಚಿತ್ರಗಳನ್ನು ಮತ್ತೆ ನೋಡುವ ಉತ್ಸಾಹ ಇದೆಯೇ ಎಂದು ಆ ವೇದಿಕೆಯಿಂದ ಅವರು ಸಭಿಕರನ್ನು ಪ್ರಶ್ನಿಸಿದಾಗ ‘ಮಧುಮತಿ’ ಬಗ್ಗೆ ಬಹುತೇಕರು ಆಸಕ್ತಿ ವ್ಯಕ್ತಪಡಿಸಿದರಂತೆ.

ಹಳೆಯ ಸಿನಿಮಾಗಳ ಮುಂದುವರಿದ ಭಾಗವನ್ನು ‘ಸೀಕ್ವೆಲ್‌’ಗಳ ಹೆಸರಿನಲ್ಲಿ ತೆರೆಗೆ ತರುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ಅಂತಹುದರಲ್ಲಿಭಾರತೀಯ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಿದ ಚಿತ್ರಗಳನ್ನು ಮತ್ತೆ ತೆರೆಗೆ ತರುವುದು ಸ್ತುತ್ಯರ್ಹ ಪ್ರಯತ್ನ ಎಂದು ಅಭಿಮಾನಿಗಳು ಮತ್ತು ಲೆಜೆಂಡರಿ ಸಿನಿಮಾಪ್ರಿಯರು ರಿಂಕಿಯ ಬೆನ್ನು ತಟ್ಟುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.