ADVERTISEMENT

‘ಮಂಗಳಾಪುರಂ’ ಚಿತ್ರದಲ್ಲಿ ರಿಷಿಗೆ ಜೋಡಿಯಾದ ಗೌತಮಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 21:31 IST
Last Updated 31 ಆಗಸ್ಟ್ 2025, 21:31 IST
ಗೌತಮಿ ಜಾಧವ್‌
ಗೌತಮಿ ಜಾಧವ್‌   

‘ಸತ್ಯ’ ಧಾರಾವಾಹಿ, ‘ಬಿಗ್‌ಬಾಸ್‌’ ಮೂಲಕ ಜನಪ್ರಿಯವಾಗಿದ್ದ ನಟಿ ಗೌತಮಿ ಜಾಧವ್ ‘ಮಂಗಳಾಪುರಂ’ ಚಿತ್ರದ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ ನಟ ರಿಷಿಗೆ ಅವರು ಜೋಡಿಯಾಗಿದ್ದಾರೆ. 

ಗೌತಮಿ ಈ ಹಿಂದೆ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಯಾವುದೂ ಜನಪ್ರಿಯತೆ ನೀಡಿರಲಿಲ್ಲ. ಬಳಿಕ ಕಿರುತೆರೆಯಲ್ಲಿ ಸಕ್ರಿಯರಾದ ಅವರು ಮತ್ತೆ ಬೆಳ್ಳಿತೆರೆಗೆ ಮರಳಿದ್ದಾರೆ.  

ತುಳು ಚಿತ್ರರಂಗದಲ್ಲಿ ‘ಉಮಿಲ್’ ಹಾಗೂ ‘ದೊಂಬರಾಟ’ ಸಿನಿಮಾ‌ ನಿರ್ದೇಶಿಸಿದ್ದ ರಂಜಿತ್ ರಾಜ್ ಸುವರ್ಣ ನಿರ್ದೇಶನದ ಚಿತ್ರವಿದು. ‘ಮಂಗಳಾಪುರಂ’ ಎಂಬ ಊರಿನಲ್ಲಿ ನಡೆಯುವ ಮರ್ಡರ್ ಮಿಸ್ಟ್ರಿ ಕಥೆ ಹೊಂದಿರುವ ಚಿತ್ರ ಮೂಡಬಿದ್ರೆ ಸುತ್ತಮುತ್ತ ಚಿತ್ರೀಕರಣಗೊಳ್ಳುತ್ತಿದೆ. 

ADVERTISEMENT

‘ಆಸ್ತಿಕರ ನಾಡಿಗೆ ನಾಸ್ತಿಕ‌ನ ಮಡದಿ ಸುಕನ್ಯಾಳಾಗಿ ಬರುತ್ತಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ’ ಎಂದು ‘ಮಂಗಳಾಪುರಂ’ ಸಿನಿಮಾದ ತಮ್ಮ ಪಾತ್ರ ಪರಿಚಯಿಸುವ ಪೋಸ್ಟರ್ ಅನ್ನು ಗೌತಮಿ ಈ ಹಿಂದೆ ಹಂಚಿಕೊಂಡಿದ್ದರು.

ಶ್ರೀ ವರಾಹಿ ಕ್ರಿಯೇಷನ್ಸ್‌ನಡಿ ಪ್ರಸನ್ನ ತಂತ್ರಿ ಮೂಡಬಿದ್ರೆ ಹಾಗೂ‌ ರಾಮ್ ಪ್ರಸಾದ್ ಬಂಡವಾಳ ಹೂಡಲಿದ್ದಾರೆ. ಕಾರ್ಕಳ, ತೀರ್ಥಹಳ್ಳಿ‌, ಮಡಿಕೇರಿ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಅನೂಪ್ ಸೀಳಿನ್ ಸಂಗೀತ ನಿರ್ದೇಶನ, ಅಭಿಷೇಕ್ ಕಾಸರಗೋಡು ಛಾಯಾಚಿತ್ರಗ್ರಹಣವಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.