ADVERTISEMENT

ಭಾವದ ಅಲೆಯಲಿ ತೇಲಿದ ಅನು

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 19:30 IST
Last Updated 5 ಏಪ್ರಿಲ್ 2020, 19:30 IST
ಮೇಘಾ ಶೆಟ್ಟಿ ಮತ್ತು ಅನಿರುದ್ಧ್‌ ಚಿತ್ರ: ರಂಜು ಪಿ.
ಮೇಘಾ ಶೆಟ್ಟಿ ಮತ್ತು ಅನಿರುದ್ಧ್‌ ಚಿತ್ರ: ರಂಜು ಪಿ.   

‘ಅಡುಗೆ ಮನೆಯಲ್ಲಿ ಇರುವುದು ಒಂದೇ ಚಪಾತಿ. ನಾನು, ಅಪ್ಪ, ಅಮ್ಮ ಅದನ್ನೇ ಮೂರು ಭಾಗ ಮಾಡಿ ಹಂಚಿಕೊಂಡು ತಿನ್ನುತ್ತೇವೆ. ಕಡುಬಡತನಕ್ಕೆ ಸಾಕ್ಷಿಯಾದ ದೃಶ್ಯವದು. ಧಾರಾವಾಹಿಯಲ್ಲಿನ ಆ ಎಪಿಸೋಡ್‌ ಮುಗಿದ ಮಾರನೇ ದಿನ ನನಗೊಂದು ಎಸ್‌ಎಂಎಸ್‌ ಸಂದೇಶ ಬಂತು. ನಮ್ಮ ಕುಟುಂಬವೂ ಅಂತಹ ಪರಿಸ್ಥಿತಿ ಎದುರಿಸಿತ್ತು ಎಂಬ ಒಕ್ಕಣೆ ಅದರಲ್ಲಿತ್ತು. ಅದನ್ನು ಓದಿ ನನ್ನ ಮನಸ್ಸು ದುಃಖದಲ್ಲಿ ಮುಳುಗಿತು. ಸೆಟ್‌ಗೆ ಬರುತ್ತಿದ್ದ ಹಲವು ಅಭಿಮಾನಿಗಳು ಅಂತಹ ನೈಜ ಘಟನೆಗಳನ್ನು ತೋಡಿಕೊಂಡಾಗ ಮನಸ್ಸಿಗೆ ನೋವಾಗುತ್ತಿತ್ತು’

–ಹೀಗೆಂದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಜೊತೆ ಜೊತೆಯಲಿ’ ಧಾರಾವಾಹಿ ಖ್ಯಾತಿಯ ಅನು ಸಿರಿಮನೆ ಭಾವುಕರಾಗಿಯೇ ಹೇಳಿದರು. ಅವರ ಮೂಲ ಹೆಸರು ಮೇಘಾ ಶೆಟ್ಟಿ. ಜನರ ಮನದಲ್ಲಿ ‘ಅನು’ ಹೆಸರಿನಲ್ಲಿಯೇ ಅವರು ಪ್ರಸಿದ್ಧಿ. ಸದ್ಯ ಈ ಧಾರಾವಾಹಿ ಮರುಪ್ರಸಾರವಾಗುತ್ತಿದೆ.

ಈ ಧಾರಾವಾಹಿಯಲ್ಲಿನ ಹಲವು ಸನ್ನಿವೇಶಗಳು ಬಹಳಷ್ಟು ಜನರ ದೈನಂದಿನ ಬದುಕಿನ ಭಾಗವಾಗಿದ್ದು ಕಾಕತಾಳೀಯ ಎಂದು ಅವರು ಹೇಳುತ್ತಾರೆ. ‘ನಾನು ಧಾರಾವಾಹಿಯಲ್ಲಿ ತಂದೆ–ತಾಯಿಯನ್ನು ಬಿಟ್ಟು ಹುಬ್ಬಳ್ಳಿಗೆ ಹೋಗುವ ಸ್ಥಿತಿ ಬರುತ್ತದೆ. ಆಗ ಒಂಟಿಯಾಗಿ ಸಾಕಷ್ಟು ನೋವು ಅನುಭವಿಸುತ್ತೇನೆ. ತಾಳಿ ಅಡವಿಡುವ ಸನ್ನಿವೇಶವೂ ಇದೆ. ಅಂತಹ ಪರಿಸ್ಥಿತಿಯನ್ನು ನಮ್ಮ ಮನೆಯಲ್ಲಿಯೂ ಅನುಭವಿಸಿದ್ದೇವೆ ಎಂದು ಹಲವರು ನನ್ನೊಟ್ಟಿಗೆ ನೋವು ತೋಡಿಕೊಂಡಿದ್ದಾರೆ’ ಎನ್ನುವಾಗ ಅವರ ಮೊಗದಲ್ಲಿ ವಿಷಾದವಿತ್ತು.

ADVERTISEMENT

ಬಹಳಷ್ಟು ತಾಯಂದಿರು ಶೂಟಿಂಗ್‌ ಸೆಟ್‌ಗೆ ಬಂದು ‘ನಿಮ್ಮಂತಹ ಮಗಳು ನಮಗೆ ಬೇಕು’ ಎಂದಾಗ ಅವರು ಖುಷಿಯ ಅಲೆಯಲ್ಲಿ ತೇಲಿ ಹೋಗುತ್ತಿದ್ದರಂತೆ. ಪುಟ್ಟ ಮಕ್ಕಳು ಸೆಟ್‌ ಬಂದು ಅವರ ಕೈಯಿಂದಲೇ ಊಟ ತಿಂದು ಹೋಗುತ್ತಾರಂತೆ.

ಕಿರುತೆರೆ ಮೂಲಕ ಸಾಕಷ್ಟು ಹೆಸರು ಮಾಡಿರುವ ಅವರಿಗೆ ಸಿನಿಮಾದಲ್ಲಿ ನಟಿಸುವ ಅವಕಾಶಗಳು ಬರುತ್ತಿವೆ. ಕನ್ನಡ, ತೆಲುಗು, ತಮಿಳಿನಿಂದಲೂ ಆಫರ್‌ ಬಂದಿದೆಯಂತೆ. ‘ಬೆಳ್ಳಿತೆರೆಯಲ್ಲಿ ನಟಿಸಲು ಅವಕಾಶಗಳು ಬರುತ್ತಿರುವುದು ದಿಟ. ಮನೆ ಹುಡುಗಿಯ ಪಾತ್ರಗಳಲ್ಲಿ ನಟಿಸಲು ಇಷ್ಟ. ಕಥೆ ಚೆನ್ನಾಗಿದ್ದರೆ ಒಪ್ಪಿಕೊಳ್ಳುತ್ತೇನೆ. ಒಳ್ಳೆಯ ಬ್ಯಾನರ್‌ ಮೂಲಕ ಹಿರಿತೆರೆ ಪ್ರವೇಶಿಸಲು ಇಷ್ಟ. ಕೊರೊನಾ ಸೋಂಕಿನ ಭೀತಿ ಕಡಿಮೆಯಾದ ಬಳಿಕಷ್ಟೇ ಸಿನಿಮಾದ ಮಾತುಕತೆ’ ಎಂಬುದು ಅವರ ವಿವರಣೆ.

ಚಿತ್ರದುರ್ಗದಲ್ಲಿ ನಡೆದ ‘ಜೊತೆ ಜೊತೆಯಲಿ’ ಧಾರಾವಾಹಿ ಮತ್ತು ಜನರ ನಡುವಿನ ಸಂವಾದವನ್ನು ಅವರ ಎಂದಿಗೂ ಮರೆಯಲು ಸಾಧ್ಯವಿಲ್ಲವಂತೆ. ‘ಜನರ ಅಭಿಮಾನವನ್ನು ಅಂದೇ ನಾನು ಮೊದಲ ಬಾರಿಗೆ ನೋಡಿದ್ದು. ಸಿನಿಮಾದ ಮಾದರಿಯಲ್ಲಿಯೇ ಕಟೌಟ್‌ ಅಳವಡಿಸಿದ್ದರು. ಧಾರಾವಾಹಿಯು ಸಿನಿಮಾ ಮಾದರಿಯಲ್ಲಿಯೇ ಜನಪ್ರಿಯವಾಗಿದ್ದು ಹೆಮ್ಮೆಯ ಸಂಗತಿ’ ಎನ್ನುತ್ತಾರೆ ಮೇಘಾ ಶೆಟ್ಟಿ.

ಪ್ರಸ್ತುತ ಕೊರೊನಾ ಸೋಂಕಿನಿಂದ ಬೀದಿನಾಯಿಗಳಿಗೆ ಮತ್ತು ಪಕ್ಷಿಗಳಿಗೆ ಆಹಾರದ ಕೊರತೆ ಎದುರಾಗಿದೆ. ಮನೆಯಲ್ಲಿಯೇ ಇರುವ ಅವರು ಅವುಗಳಿಗೆ ಆಹಾರ ಒದಗಿಸುವ ಕೆಲಸ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.