ಕಿರುತೆರೆಯಲ್ಲಿ ‘ರಾಮಾಚಾರಿ’ ಧಾರಾವಾಹಿ ಮೂಲಕ ಗುರುತಿಸಿಕೊಂಡಿರುವ ಕೊಡಗು ಮೂಲದ ನಟಿ ಮೌನ ಗುಡ್ಡಮನೆ ಇದೀಗ ಬೆಳ್ಳಿತೆರೆಗೆ ಹೆಜ್ಜೆ ಇಡುತ್ತಿದ್ದಾರೆ. ಸತತ ಮೂರೂವರೆ ವರ್ಷ ‘ಚಾರು’ ಪಾತ್ರಧಾರಿಯಾಗಿ ಮನೆಮನ ತಲುಪಿರುವ ಮೌನ ಅವರ ಚೊಚ್ಚಲ ಸಿನಿಮಾ ರಿಲೀಸ್‌ಗೆ ಸಜ್ಜಾಗುತ್ತಿದೆ. ಯೋಗರಾಜ್ ಸಿನಿಮಾಸ್ ಅರ್ಪಿಸುವ, ಕೆ.ರಾಮನಾರಾಯಣ್ ನಿರ್ದೇಶನದ ‘ಕುಲದಲ್ಲಿ ಕೀಳ್ಯಾವುದೋ’ ಮೇ 23ರಂದು ಬಿಡುಗಡೆಯಾಗುತ್ತಿದ್ದು, ಈ ಸಂದರ್ಭದಲ್ಲಿ ಮಾತಿಗೆ ಸಿಕ್ಕ ಮೌನ ತಮ್ಮ ಸಿನಿಪಯಣದ ಕನಸುಗಳನ್ನು ತೆರೆದಿಟ್ಟಿದ್ದಾರೆ...
‘ಕೊಡಗು ಜಿಲ್ಲೆಯ ಸೋಮವಾರಪೇಟೆಯ ನಾನು ಮಧ್ಯಮ ವರ್ಗದ ಕುಟುಂಬದಿಂದ ಬಂದವಳು. ಕಿರುತೆರೆ ಪ್ರವೇಶಕ್ಕೂ ಮುನ್ನ ಮಾಡೆಲಿಂಗ್ ಮಾಡುತ್ತಿದ್ದೆ. ಮಂಗಳೂರಿನಲ್ಲಿ ಶಿಕ್ಷಣ ಪಡೆಯುತ್ತಿರುವ ಸಂದರ್ಭದಲ್ಲೇ ಮಾಡೆಲಿಂಗ್ ಲೋಕ ಪರಿಚಯವಾಯಿತು. ಈ ಸಂದರ್ಭದಲ್ಲೇ ‘ರಾಮಾಚಾರಿ’ ಅವಕಾಶ ದೊರೆಯಿತು. ಮನೆಯಲ್ಲಿ ಇದಕ್ಕೆ ಪ್ರೋತ್ಸಾಹ ದೊರೆಯಿತು. ಆದರೆ ನಾನು ಆಸೆ ಪಟ್ಟು ಈ ಕ್ಷೇತ್ರಕ್ಕೆ ಬಂದವಳಲ್ಲ. ನನಗೆ ಸೇನೆಗೆ ಸೇರುವ ಆಸೆ ಇತ್ತು. ಕುಟುಂಬದಲ್ಲಿ ಹಲವರು ಸೇನೆಯಲ್ಲಿದ್ದರು. ಮನೆಯಲ್ಲಿ ಇದಕ್ಕೆ ಬೆಂಬಲ ಸಿಗಲಿಲ್ಲ. ಕೊನೆಗೆ ಧಾರಾವಾಹಿಯತ್ತ ಹೆಜ್ಜೆ ಇಟ್ಟೆ’ ಎಂದು ಬಣ್ಣದ ಲೋಕಕ್ಕೆ ಕಾಲಿಟ್ಟ ಸಂದರ್ಭದಿಂದ ಮಾತು ಆರಂಭಿಸಿದರು ಮೌನ.
‘ಧಾರಾವಾಹಿಯಲ್ಲಿನ ನನ್ನ ನಟನೆಯನ್ನು ಗಮನಿಸಿಯೇ ‘ಕುಲದಲ್ಲಿ...’ ಸಿನಿಮಾದ ಆಫರ್ ಬಂದಿತು. ಈ ಸಿನಿಮಾದ ನಿರ್ಮಾಪಕರು ಕೊಡಗಿನವರು. ತಮ್ಮದೇ ಊರಿನ ಹುಡುಗಿಗೆ ಅವಕಾಶ ಕೊಡಬೇಕು ಎಂದು ಅವರಿಗೆ ಇತ್ತು. ‘ರಾಮಾಚಾರಿ’ ಸಂದರ್ಭದಲ್ಲೇ ಹಲವು ಸಿನಿಮಾಗಳ ಆಫರ್‌ಗಳು ಬಂದಿದ್ದವು. ಆದರೆ ಧಾರಾವಾಹಿಯ ಒಪ್ಪಂದವಿದ್ದ ಕಾರಣ ಸಿನಿಮಾದತ್ತ ಗಮನಹರಿಸಿರಲಿಲ್ಲ. ಯೋಗರಾಜ್ ಭಟ್ ಬ್ಯಾನರ್‌ನಡಿಯ ಸಿನಿಮಾ ಎಂದಾಗ ಬಿಡಲು ಮನಸಾಗಲಿಲ್ಲ. ಸಿನಿಮಾದಲ್ಲಿ ದೊರೆಯುವ ಅನುಭವ ಹಾಗೂ ಕಥೆಯ ಕಾರಣಕ್ಕೆ ಈ ಸಿನಿಮಾ ಒಪ್ಪಿಕೊಂಡೆ’ ಎಂದರು.
‘ಸಿನಿಮಾ ಎಂದರೆ ಬೇರೆಯೇ ಲೋಕ. ಧಾರಾವಾಹಿ ನಾಲ್ಕು ಗೋಡೆಯ ನಡುವೆ ನಡೆಯುವ ಕಥೆ. ಸಿನಿಮಾದಲ್ಲಿ ಪ್ರತಿಯೊಂದು ಪಾತ್ರದ ಮೇಲೆ ಕಥೆಯಿದೆ. ನನ್ನದು ಹಳ್ಳಿಯ ಮುಗ್ಧ ಮುದ್ದು ಹುಡುಗಿಯ ಪಾತ್ರ. ಇದರಲ್ಲಿ ಗ್ಲಾಮರಸ್ ಪಾತ್ರವಿಲ್ಲ. ತಾಂತ್ರಿಕವಾಗಿ ಈ ಲೋಕ ಹೊಸ ಅನುಭವವನ್ನೇ ನೀಡಿತು. ನಮ್ಮ ಊರಿನ ಪುಷ್ಪಗಿರಿ ಬೆಟ್ಟದಲ್ಲೇ ಸಿನಿಮಾದ ಹಾಡಿನ ಚಿತ್ರೀಕರಣ ಮಾಡಿದೆವು. ‘ರಾಮಾಚಾರಿ’ ಧಾರಾವಾಹಿ ಮುಂದುವರಿಯಲಿದೆ. ಈ ಸಿನಿಮಾ ಬಿಡುಗಡೆ ಬಳಿಕ ಒಳ್ಳೆಯ ಅವಕಾಶಗಳು ದೊರಕಿದರೆ ಸಿನಿಮಾದಲ್ಲೂ ಮುಂದುವರಿಯುತ್ತೇನೆ. ಧಾರಾವಾಹಿ ನಂಟೂ ಮುಂದುವರಿಯಲಿದೆ’ ಎಂದು ಮಾತಿಗೆ ವಿರಾಮವಿತ್ತರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.