ADVERTISEMENT

‘ಕನ್ನಡ ನಟಿಯರು ಲಿಪ್‌ಲಾಕ್‌ಗೆ ಒ‍ಪ್ಪಲ್ವಂತೆ’

ನಟ ರಾಜ್‌ ಸೂರಿಯನ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಮೇ 2019, 16:18 IST
Last Updated 4 ಮೇ 2019, 16:18 IST
ಆಕರ್ಷಿಕಾ
ಆಕರ್ಷಿಕಾ   

‘ಕನ್ನಡದ ನಟಿಯರು ಲಿಪ್‌ಲಾಕ್‌ಗೆ ಒಪ್ಪಿಕೊಳ್ಳುವುದಿಲ್ಲ. ಪರಭಾಷೆಯ ನಟಿಯರು ಇಂತಹ ಮಡಿವಂತಿಕೆ ತೋರುವುದಿಲ್ಲ’

- ಹೀಗೆ ಹೇಳಿದ್ದು ನಟ ರಾಜ್‌ ಸೂರಿಯನ್. ಕೊನೆಗೆ, ಮುಂಬೈ ಬೆಡಗಿ ಲಿಪ್‌ಲಾಕ್‌ಗೆ ಒಪ್ಪಿಕೊಂಡ ಜೋಷ್‌ನಲ್ಲಿಯೇ ಅವರು ಮಾತಿಗಿಳಿದಿದ್ದರು.

ರಾಜ್‌ ಸೂರಿಯನ್

‘ಕನ್ನಡದಲ್ಲಿ ಈ ಚಿತ್ರಕ್ಕೆ ಮೈ ನೇಮ್ ಈಸ್‌ ರಾಜಾಎಂದು ಹೆಸರಿಡಲಾಗಿದೆ. ತೆಲುಗಿನಲ್ಲಿ ‘ನಾ ಪೇರು ರಾಜಾ’ ಎಂಬ ಟೈಟಲ್‌ ಇಡಲಾಗಿದೆ. ಸೈಕಲಾಜಿಕಲ್‌ ಥ್ರಿಲ್ಲರ್‌ ಚಿತ್ರ ಇದು. ಕನ್ನಡ ಮತ್ತು ತೆಲುಗು ಪ್ರೇಕ್ಷಕರ ಮನಸ್ಥಿತಿಗೆ ತಕ್ಕಂತೆ ಇದನ್ನು ನಿರ್ಮಾಣ ಮಾಡಲಾಗುತ್ತಿದೆ’ ಎಂದು ಅವರು ಹೇಳಿದರು.

ADVERTISEMENT

ನೀವು ಕನ್ನಡದ ಎಷ್ಟು ನಟಿಯರಿಗೆ ಈ ಚಿತ್ರದಲ್ಲಿ ನಟಿಸಲು ಕೇಳಿದ್ದೀರಿ? ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಲು ಅವರು ನುಣುಚಿಕೊಂಡರು.

ರಾಜ್‌ ಈ ಹಿಂದೆ ‘ಸಂಚಾರಿ’ ಮತ್ತು ‘ಜಟಾಯು’ ಚಿತ್ರದಲ್ಲಿ ನಟಿಸಿದ್ದರು. ತೆಲುಗಿಗೆ ಡಬ್ಬಿಂಗ್‌ ಮಾಡಿದ್ದ ಇವುಗಳಿಗೆ ಅಲ್ಲಿನ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತಂತೆ. ಇದೇ ಅವರು ತೆಲುಗಿನಲ್ಲಿಯೂ ಈ ಸಿನಿಮಾ ನಿರ್ಮಿಸಲು ಮೂಲ ಕಾರಣ.

‘ಚಿತ್ರದಲ್ಲಿ ನಾಯಕ ಮತ್ತು ನಾಯಕಿಯ ಲಿಪ್‌ಲಾಕ್‌ ದೃಶ್ಯಗಳು ಸಾಕಷ್ಟಿವೆ. ಇದಕ್ಕೆ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ ಪ್ರಮಾಣಪತ್ರ ಪಡೆಯಲು ಕಷ್ಟವಾಗಬಹುದು’ ಎಂಬ ಆತಂಕವನ್ನೂ ತೋಡಿಕೊಂಡರು.

ಅಂದಹಾಗೆ ಲಿಪ್‌ಲಾಕ್‌ ದೃಶ್ಯಗಳಲ್ಲಿ ಚೆನ್ನಾಗಿ ನಟಿಸಿರುವ ಅವರಿಗೆ ಹುಡುಗಿಯರ ಬಳಿ ಹೇಗೆ ಮಾತನಾಡಬೇಕೆಂಬುದು ಗೊತ್ತಿಲ್ಲವಂತೆ. ‘ಗಂಡ ಮತ್ತು ಹೆಂಡತಿ ಹೇಗಿರಬೇಕೆಂಬುದನ್ನು ನಿರ್ದೇಶಕರಿಂದ ಕೇಳಿ ತಿಳಿದುಕೊಂಡೆ. ರೊಮ್ಯಾಂಟಿಕ್‌ ದೃಶ್ಯಗಳಲ್ಲಿ ನಟಿಸಲು ಇದರಿಂದ ಸಹಕಾರಿಯಾಯಿತು’ ಎಂದರು. ರೊಮ್ಯಾಂಟಿಕ್‌ ಪದ ಕೇಳಿದಾಗ ಅವರ ಪಕ್ಕದಲ್ಲಿ ಕುಳಿತಿದ್ದ ನಾಯಕಿ ಆಕರ್ಷಿಕಾ ಮನದಲ್ಲಿ ಏನನ್ನೋ ಅರ್ಥೈಸಿಕೊಂಡು ನಕ್ಕರು.

ನಿರ್ದೇಶಕ ಅಶ್ವಿನ್‌ ಕೃಷ್ಣಗೆ ಇದು ಮೊದಲ ಚಿತ್ರ. ‘ರಾಜಾ ಮತ್ತು ಜೆಸ್ಸಿಯದು ಹೊಸ ದಾಂಪತ್ಯ. ಫಾರ್ಮ್‌ಹೌಸ್‌ವೊಂದರಲ್ಲಿ ಇಬ್ಬರೂ ಇರುತ್ತಾರೆ. ಅಲ್ಲಿ ಜೆಸ್ಸಿ ತೊಂದರೆಗೆ ಸಿಲುಕುತ್ತಾಳೆ. ಕಷ್ಟದ ಸಂಕೋಲೆಯಿಂದ ಆಕೆಯನ್ನು ರಾಜಾ ಹೇಗೆ ಬಿಡುಗಡೆಗೊಳಿಸುತ್ತಾನೆ ಎನ್ನುವುದೇ ಚಿತ್ರದ ತಿರುಳು’ ಎಂದು ವಿವರಿಸಿದರು.

ನಸ್ರೀನ್‌

ಮುಂಬೈ ಮೂಲದ ಆಕರ್ಷಿಕಾ ಈ ಚಿತ್ರದ ನಾಯಕಿ. ಇದು ಅವರಿಗೆ ಮೊದಲ ಚಿತ್ರ. ‘ಚಿತ್ರದಲ್ಲಿ ನಟಿಸಲು ನಾನು ಯಾವುದೇ ಷರತ್ತು ವಿಧಿಸಿಲ್ಲ. ಬೋಲ್ಡ್‌ ಆಗಿ ಕಾಣಿಸಿಕೊಂಡಿದ್ದೇನೆ’ ಎಂದಷ್ಟೇ ಹೇಳಿದರು.

ಮತ್ತೊಬ್ಬ ನಾಯಕಿಯಾಗಿ ಮುಂಬೈ ಮೂಲದ ನಸ್ರೀನ್ ಬೋಲ್ಡ್‌ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ‘ರೊಮ್ಯಾಂಟಿಕ್‌ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದೇನೆ’ ಎಂದರು.

ಸಿನಿಮಾದಲ್ಲಿ ನಾಲ್ಕು ಹಾಡುಗಳಿದ್ದು ಮೆಲ್ವಿನ್‌ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ವೆಂಕಟ್‌ ಅವರದು. ಪ್ರಭು ಸೂರ್ಯ ಮತ್ತು ಕಿರಣ್‌ ಆರ್ಥಿಕ ಇಂಧನ ಒದಗಿಸಿದ್ದಾರೆ. ಚಿತ್ರದ ಮುಕ್ಕಾಲು ಭಾಗದಷ್ಟು ಶೂಟಿಂಗ್‌ ಪೂರ್ಣಗೊಂಡಿದ್ದು, ಇನ್ನೆರಡು ತಿಂಗಳಲ್ಲಿ ತೆರೆಯ ಮೇಲೆ ಬರಲು ಚಿತ್ರತಂಡ ಯೋಜನೆ ರೂಪಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.