ADVERTISEMENT

ನಭಾ ನಟೇಶ್ ತೆಲುಗು ಲುಕ್!

ಪದ್ಮನಾಭ ಭಟ್ಟ‌
Published 29 ಜೂನ್ 2018, 12:05 IST
Last Updated 29 ಜೂನ್ 2018, 12:05 IST
ಫಸ್ಟ್‌ ಲುಕ್‌
ಫಸ್ಟ್‌ ಲುಕ್‌   

ತಮ್ಮ ಮೊದಲ ಸಿನಿಮಾ ‘ವಜ್ರಕಾಯ’ದಲ್ಲಿಯೇ ಸ್ಟಾರ್‌ ನಟ ಶಿವರಾಜ್‌ಕುಮಾರ್ ಜತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡ ಅದೃಷ್ಟವಂತೆ ನಭಾ ನಟೇಶ್‌. ನಂತರ ‘ಲೀ’, ‘ಸಾಹೇಬ’ ಚಿತ್ರಗಳಲ್ಲಿ ನಟಿಸಿದರೂ ಅವರ ಸ್ಟಾರ್‌ ಅಷ್ಟೇನೂ ಬದಲಾಗಲಿಲ್ಲ. ಆದರೆ ಇದೇ ಸಮಯದಲ್ಲಿ ಕನ್ನಡದ ಈ ಚೆಂದುಳ್ಳಿಯ ಮೇಲೆ ತೆಲುಗಿನ ಕಣ್ಣು ಬಿತ್ತು. ‘ಅಧುಗೋ’ ಚಿತ್ರದ ಮೂಲಕ ತೆಲುಗಿಗೆ ಪದಾರ್ಪಣೆ ಮಾಡಿದ ಅವರಿಗೆ ಈಗ ಅಲ್ಲಿಯೇ ಅವಕಾಶಗಳು ಸಾಲುಗಟ್ಟಿ ಬರುತ್ತಿವೆ. ಮೊದಲ ಚಿತ್ರ ಬಿಡುಗಡೆಯಾಗುವುದಕ್ಕೂ ಮುನ್ನವೇ ‘ನನ್ನು ದೋಚು ಕುಂದುವಟೆ’ ಚಿತ್ರದಲ್ಲಿ ಮಹೇಶ್ ಬಾಬು ಅವರ ಸಂಬಂಧಿ ಸುಧೀರ್ ಬಾಬು ಅವರ ಜತೆಗೆ ತೆರೆಯನ್ನು ಹಂಚಿಕೊಳ್ಳುವ ಅವಕಾಶ ಸಿಕ್ಕಿದೆ.ಈ ಹಿಂದೆ ‘ಸಮ್ಮೋಹನ’ದಂಥ ಸೂಪರ್‌ಹಿಟ್‌ ಚಿತ್ರ ಕೊಟ್ಟ ನಟ ಸುಧೀರ್.

ಇಂದು (ಜೂನ್ 29)‘ನನ್ನು ದೋಚು ಕುಂದುವಟೆ’ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ. ಆಫೀಸ್‌ ಸೆಟ್‌ಅಪ್‌ನಲ್ಲಿ ಟೇಬಲ್‌ ಮೇಲೆ ಕೂತು ನಭಾ ಸೆಲ್ಫಿ ತೆಗೆದುಕೊಳ್ಳುತ್ತಿರುವ, ಅವಳನ್ನು ಕೊಂಚ ಅಸಹನೆಯಲ್ಲಿಯೇ ಸುಧೀರ್ ನೋಡುತ್ತ ನಿಂತಿರುವ ಚಿತ್ರ ಮೊದಲ ನೋಟಕ್ಕೆ ಸೆಳೆಯುವಂತಿದೆ.

ಎನ್‌ ಟಿ ಆರ್‌ ಅವರ ಸಿನಿಮಾದ ಜನಪ್ರಿಯ ಗೀತೆಯೊಂದರ ಸಾಲಿನಿಂದ ‘ನನ್ನು ದೋಚು ಕುಂದುವಟೆ’ ಚಿತ್ರದ ಶೀರ್ಷಿಕೆಯನ್ನು ತೆಗೆದುಕೊಳ್ಳಲಾಗಿದೆ. ರಾಜಶೇಖರ ನಾಯ್ಡು ಈ ಚಿತ್ರಕ್ಕೆ ಆ್ಯಕ್ಷನ್ ಕಟ್‌ ಹೇಳುತ್ತಿದ್ದಾರೆ. ಇದು ಅವರ ನಿರ್ದೇಶನದ ಮೊದಲ ಸಿನಿಮಾ. ‘ಈ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆ. ಒಂದಿಷ್ಟು ಹಾಡುಗಳ ಚಿತ್ರೀಕರಿಸುವುದಷ್ಟೇ ಬಾಕಿ ಇದೆ. ಸಾಕಷ್ಟು ಮನರಂಜನೆ ಇರುವ, ರೊಮ್ಯಾಂಟಿಕ್ ಕಾಮಿಡಿ ಚಿತ್ರವಿದು’ ಎಂದು ವಿವರಿಸುತ್ತಾರೆ ನಭಾ ನಟೇಶ್‌.

ADVERTISEMENT

‘ಈ ಚಿತ್ರದಲ್ಲಿ ಪಕ್ಕಾ ತರ್ಲೆ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಎಲ್ಲರನ್ನೂ ಕಾಲೆಳೆದುಕೊಂಡಿರುವ, ತಮಾಷೆ ಮಾಡಿ ನಗಿಸುವ, ಕೀಟಲೆಗಳನ್ನು ಮಾಡುತ್ತಿರುವ ಹುಡುಗಿಯ ಪಾತ್ರ ನನ್ನದು’ ಎನ್ನುವ ನಭಾ ಇಷ್ಟರ ಹೊರತು ಇನ್ನೊಂದು ಚಿಕ್ಕ ಸುಳಿವನ್ನೂ ಬಿಟ್ಟುಕೊಡುವುದಿಲ್ಲ. ಹಂತ ಹಂತವಾಗಿ ಟೀಸರ್, ಟ್ರೇಲರ್, ಹಾಡುಗಳನ್ನು ಬಿಡುಗಡೆ ಮಾಡಲು ತಂಡ ಪ್ರಚಾರತಂತ್ರ ರೂಪಿಸಿದೆ.

ಈ ಚಿತ್ರದ ಚಿತ್ರೀಕರಣಕ್ಕೂ ಮುನ್ನ ನಭಾಗೆ ತೆಲುಗು ಬರುತ್ತಲೇ ಇರಲಿಲ್ಲವಂತೆ. ‘ಈ ತಂಡ ತುಂಬ ಚೆನ್ನಾಗಿತ್ತು. ಕಂಫರ್ಟ್‌ ಆಗಿ ಕೆಲಸ ಮಾಡಲು ಸಾಧ್ಯವಾಯ್ತು. ಈಗ ನಾನು ತೆಲುಗು ಭಾಷೆಯನ್ನೂ ಚೆನ್ನಾಗಿ ಮಾತನಾಡಲು ಕಲಿತುಕೊಂಡಿದ್ದೇನೆ’ ಎಂದು ಖುಷಿಯಿಂದ ಹೇಳಿಕೊಳ್ಳುವ ನಭಾಗೆ ತೆಲುಗಿನಲ್ಲಿ ಅವಕಾಶಗಳು ಒಂದರ ಹಿಂದೊಂದರಂತೆ ಬರುತ್ತಿವೆಯಂತೆ.

’ತೆಲುಗಿನಲ್ಲಿ ಎರಡು ಸಿನಿಮಾಗಳಲ್ಲಿ ನಟಿಸಿದ್ದೇನೆ. ಅವೆರಡೂ ಇನ್ನೂ ಬಿಡುಗಡೆಯಾಗಿಲ್ಲ. ಆದರೆ ಅವನ್ನು ಎಡಿಟಿಂಗ್ ಟೇಬಲ್‌ನಲ್ಲಿ ನೋಡಿಯೇ ಸಾಕಷ್ಟು ಜನರು ನನ್ನ ನಟನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಾಕಷ್ಟು ಅವಕಾಶಗಳೂ ಬರುತ್ತಿವೆ’ ಎನ್ನುವ ಅವರು ಕನ್ನಡದಲ್ಲಿಯೂ ಒಂದೆರಡು ಒಳ್ಳೆಯ ಕಥೆಗಳನ್ನು ಒಪ್ಪಿಕೊಳ್ಳುವ ಸಿದ್ಧತೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.