ADVERTISEMENT

ಸಿನಿಮಾ ವಿಮರ್ಶೆ | ಬಂಡಾಯದ ಕಹಳೆ; ಪ್ರೇಮದ ಲೀಲೆ

ವಿಕ್ರಂ ಕಾಂತಿಕೆರೆ
Published 12 ಮಾರ್ಚ್ 2020, 15:44 IST
Last Updated 12 ಮಾರ್ಚ್ 2020, 15:44 IST
   

ಚಿತ್ರ: ನರಗುಂದ ಬಂಡಾಯ (ಕನ್ನಡ)
ನಿರ್ಮಾಣ: ಎಸ್.ಜಿ.ವಿರಕ್ತಮಠ
ನಿರ್ದೇಶನ: ನಾಗೇಂದ್ರ ಮಾಗಡಿ
ತಾರಾಗಣ: ರಕ್ಷ್, ಶುಭಾ ಪೂಂಜಾ,ಅವಿನಾಶ್,ಸಾಧು ಕೋಕಿಲ,ಭವ್ಯಾ,ಶಿವಕುಮಾರ್,ರವಿ ಚೇತನ್,ಸಿದ್ದರಾಜ ಕಲ್ಯಾಣ್ಕರ್,ನೀನಾಸಮ್ ಅಶ್ವತ್ಥ್,ಮುಗು ಸುರೇಶ್.

***

ಡ್ರೋನ್‌ನಲ್ಲಿ ಸೆರೆಯಾದ ಉತ್ತರ ಕರ್ನಾಟಕದ ‘ಬಯಲಿನ’ ಬಿಸಿ ವಾತಾವರಣದಲ್ಲಿ ಬಗೆಬಗೆಯ ಬಂಡಾಯದ ಕಹಳೆ ಮೊಳಗುತ್ತಲೇ ಸಾಗುವ ಚಿತ್ರ, ನರಗುಂದ ಬಂಡಾಯ. ಸಾಕ್ಷ್ಯಚಿತ್ರದಂಥ ಕಥೆಯು ಹೆಣ್ಣು-ಗಂಡಿನ ಪ್ರೇಮ, ಸೋದರರ ಪ್ರೀತಿ, ಅತ್ತಿಗೆಯ ವಾತ್ಯಲ್ಯ, ಗೆಳೆಯರ ‘ದೋಸ್ತಿ’ಯ ಅಪ್ಪುಗೆಯೂ ಸೇರಿ ಸಿನಿಮಾದ ರೂಪ ಪಡೆದಿದೆ. ಗ್ರಾಮೀಣ ವಾತಾವರಣದಲ್ಲಿ ಗ್ಲಾಮರ್ ಮಿಶ್ರಿತ ಹಾಡುಗಳೂ ರಿಂಗಣಿಸಿ ಎಲ್ಲ ವರ್ಗಕ್ಕೂ ಸಲ್ಲುವ ಚಿತ್ರವಾಗಿಸುವ ಪ್ರಯತ್ನ ಫಲ ಕಂಡುಕೊಂಡಿದೆ.

ADVERTISEMENT

ಗ್ರಾಮ ಪಂಚಾಯ್ತಿ ಅಧ್ಯಕ್ಷರೂ ಆಗಿರುವ ದೊಡ್ಡಗೌಡರ (ಅವಿನಾಶ್) ಸಹೋದರ ಶಿವು ರೈತರನ್ನು ಹೆಸರಿಸುವ, ತನಗೆ ಮಕ್ಕಳಾಗಲಿಲ್ಲ ಎಂದು ಆಡಿಕೊಂಡ ನಾಲ್ಕೈದು ಜನರನ್ನು ಮನೆಗೆ ಎಳೆದುಕೊಂಡು ಬಂದು ಕಂಬಕ್ಕೆ ಕಟ್ಟಿ ಹಾಕಿ ಹೊಡೆದು ‘ನಿಮ್ಮ ದಮ್ಮಯ್ಯ’ ಹೇಳಿಸುವ ದೃಶ್ಯಗಳ ಮೂಲಕ ಆರಂಭವಾಗುವ ಸಿನಿಮಾ ನಾಯಕ ‘ವೀರ’ ಅರ್ಥಾತ್ ವೀರಪ್ಪ ಬಸಪ್ಪ ಕಡ್ಲಿಕೊಪ್ಪ (ರಕ್ಷ್) ಪೊಲೀಸರ ಗುಂಡೇಟಿಗೆ ಬಲಿಯಾಗಿ ಆತನ ಪ್ರತಿಮೆ ಸ್ಥಾಪನೆಯಾಗುವುದರೊಂದಿಗೆ ಮುಕ್ತಾಯ ಕಾಣುತ್ತದೆ.

ಉತ್ತರ ಕರ್ನಾಟಕದ ಸಂಸ್ಕೃತಿಯನ್ನು ಬಿಂಬಿಸುವ ಚಿತ್ರದ ಪೂರ್ತಿ ಆ ಭಾಗದ ಭಾಷೆಯನ್ನೇ ಸಮರ್ಥವಾಗಿ ಬಳಸಿಕೊಳ್ಳಲು ಸಮರ್ಥವಾಗಿರುವುದು ಚಿತ್ರ ತಂಡದ ಹೆಗ್ಗಳಿಕೆ. ಮಟ್ಕಾ ರಾಜನ (ಸಾಧು ಕೋಕಿಲ) ದಂಧೆ ವಿರುದ್ಧ ಮಹಿಳೆಯರ ಹೋರಾಟ ಮತ್ತು ಆತನಿಗೆ ಒನಕೆಯ ಹೊಡೆತ, ದೊಡ್ಡಗೌಡ್ರ ಹಾಗೂ ಅವರ ಮಗನ ಮುಂದೆ ಸೆಟೆದು ನಿಂತು ‘ಕಡ್ಡಿ ಮುರ್ದಂಗೆ’ ಮಾತನಾಡುವ, ಪ್ರಿಯಕರನನ್ನು ಹೋರಾಟಕ್ಕೆ ಧುಮುಕುವಂತೆ ಹುರಿದುಂಬಿಸುವ ರಾಮಣ್ಣನ ಮಗಳು ರಾಣಿ (ಶುಭಾ ಪೂಂಜಾ) ಮುಂತಾದ ಪಾತ್ರಗಳೆಲ್ಲವೂ ಮಣ್ಣಿನ ಮಕ್ಕಳ ಹೋರಾಟದ ಮನೋಭಾವ, ಛಲದ ಜೀವನವನ್ನು ಕಟ್ಟಿಕೊಟ್ಟಿವೆ.

ಗಾದೆ-ನಾಣ್ಣುಡಿಗಳು ಸಂಭಾಷಣೆಯ ನಡುವೆ ಮಲಪ್ರಭಾ ನದಿಯಂತೆ ಹರಿದರೆ, ನಾಯಕ ಮತ್ತು ನಾಯಕಿಯರು ಚಿತ್ರದ ತುಂಬ ನವಿಲುತೀರ್ಥ ಜಲಾಶಯದ ನೀರಿನಂತೆ ತುಂಬಿ ನಿಂತಿದ್ದಾರೆ.

ಕಿರುತೆರೆಯಿಂದ ಬಂದ ರಕ್ಷ್ ನಾಯಕನಾಗಿ ಕಾಣಿಸಿಕೊಂಡ ಮೊದಲ ಚಿತ್ರ ಇದು. ಸಂಭಾಷಣೆಯಲ್ಲಿ ಧಾರಾವಾಹಿಯ ‘ಓಘ’ದ ಧಾಟಿ ಇದ್ದರೂ ಭಾವಾಭಿನಯ ಮತ್ತು ಆ್ಯಕ್ಷನ್ ನಲ್ಲಿ ಪ್ರಬುದ್ಧತೆ ಮೆರೆದಿರುವುದು ಪ್ರಶಂಸನೀಯ. ನಾಯಕಿ ಗ್ಲಾಮರಸ್ ಆಗಿರಬೇಕು ಎಂಬ ‘ಹಠ’ವನ್ನು ಗ್ರಾಮೀಣ ವಾತಾವರಣದ ಚಿತ್ರದಲ್ಲೂ ಸಾಧಿಸಲು ಹೊರಟಿರುವುದು ನೈಜತೆಗೆ ಅಡ್ಡಿಯಾಗಿದೆ.

ನವಿಲುತೀರ್ಥ ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿ ಮಾಡುತ್ತ ಹಾಯಾಗಿದ್ದ ರೈತಾಪಿ ಜನರು ನೀರಿನ ಕರ ಮತ್ತು ಅಭಿವೃದ್ಧಿ ಕರದ ರೂಪದಲ್ಲಿ ಎಕರೆಗೆ ರೂ 2500 ಪ್ರತಿ ಮನೆಯವರು ನೀಡಬೇಕೆಂಬ ಸರ್ಕಾರದ ಆದೇಶ ಬಂದ ನಂತರ ದುಗುಡಕ್ಕೆ ಒಳಗಾಗುತ್ತಾರೆ. ಊರ ಗೌಡ ಇದರ ಲಾಭ ಪಡೆದುಕೊಳ್ಳಲು ನೋಡುತ್ತಿದ್ದಾಗಲೇ ಚಿಕ್ಕ ನರಗುಂದ, ಮೊರಬ, ತಿರ್ಲಾಪುರ, ಬೆನಕನಕೊಪ್ಪದಲ್ಲಿ ರಣ ಕಹಳೆ ಮೊಳಗುತ್ತದೆ; ‘ವೀರ’ನ ಮುಂದಾಳತ್ವದಲ್ಲಿ ನರಗುಂದ ಬಂಡಾಯ ಫಿಕ್ಸ್ ಆಗುತ್ತದೆ. ಈ ನಡುವೆ ವೀರನಿಗೆ ಇನ್ನಿರುವುದು ಆರೇ ತಿಂಗಳ ಆಯುಷ್ಯ ಎಂಬ ಸ್ವಾಮೀಜಿಯ ಭವಿಷ್ಯವಾಣಿಗೆ ಹೆದರಿದ ಅಣ್ಣ ಮತ್ತು ಅತ್ತಿಗೆ ಆತನನ್ನು ಹೋರಾಟಕ್ಕೆ ಧುಮುಕದಂತೆ ತಡೆಯುತ್ತಾರೆ. ಪ್ರೇಯಸಿ ರಾಣಿ ಭರ್ಜರಿ ಡಯಲಾಗ್ ಸಿಡಿಸಿ ಆತ ರಣಾಂಗಣಕ್ಕೆ ಧುಮುಕುವಂತೆ ಮಾಡುತ್ತಾಳೆ. ದೊಡ್ಡಗೌಡರ ಚೇಲಾ ಪೊಲೀಸ್ ಅಧಿಕಾರಿಯ ಗುಂಡೇಟಿಗೆ ವೀರ ಬಲಿಯಾಗುತ್ತಾನೆ. ಆತನ ಪ್ರತಿಮೆಗೆ ಪ್ರತಿ ವರ್ಷ ಪೂಜೆ ನಡೆಯುತ್ತಿದ್ದರೂ ಉತ್ತರ ಕರ್ನಾಟಕದ ಪರಿಸ್ಥಿತಿ ಸುಧಾರಿಸಿಲ್ಲ ಎಂಬ ನೋವಿನ ಮಾತುಗಳೊಂದಿಗೆ ತೆರೆ ಸರಿಯುತ್ತದೆ.

ಎರಡು ಪ್ರೇಮಗೀತೆಗಳು ಸೇರಿದಂತೆ ಒಟ್ಟು ಮೂರು ಹಾಡುಗಳಿರುವ ಚಿತ್ರದಲ್ಲಿ ಬಂಡಾಯದ ಗೀತೆ ‘ಬಂಡಾಯ..ಬಂಡಾಯ...ಇದು ನರಗುಂದ ಬಂಡಾಯ..’ ಹೋರಾಟದ ಧನಿಯೊಂದಿಗೆ ಮೋಹಕವಾಗಿ ಮೂಡಿಬಂದಿದೆ.

ಆರ್.ಗಿರಿ ಮತ್ತು ಆನಂದ್ ಅವರ ಕ್ಯಾಮರಾಗಳು ಬಯಲು ಸೀಮೆಯ ಚಿತ್ರಣವನ್ನು ಮೋಹಕವಾಗಿ ಸೆರೆ ಹಿಡಿದಿವೆ. ಚಿತ್ರದ ಪೂರ್ತಿ ಉತ್ತರ ಕರ್ನಾಟಕದ ರೈತರ ನೋವಿನ ಧ್ವನಿಯೇ ಅಡಗಿದೆ. ನೈಜ ಕಥೆಯನ್ನು ತೆರೆಗೆ ಭಟ್ಟಿ ಇಳಿಸುವಾಗ ನುಸುಳಿಕೊಳ್ಳಬಹುದಾದ ಕ್ಷೀಷೆಗಳಿಗೆ ಅವಕಾಶ ಸಿಗದಂತೆ ಮಾಡುವಲ್ಲಿ ಓಂಕಾರ್ ಫಿಲ್ಮ್ಸ್ ಮತ್ತು ಶೇಖರ್ ಯಳವಿಗಿ ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.