ADVERTISEMENT

ನವೀನ್ ಶಂಕರ್ ಸಂದರ್ಶನ: 'ಜನ ರೊಕ್ಕ ಕೊಡಬೇಕು ಅಂದ್ರೆ, ಸಿನಿಮಾ ಮಜ ಕೊಡಬೇಕು'

ವಿನಾಯಕ ಕೆ.ಎಸ್.
Published 8 ಜೂನ್ 2025, 23:30 IST
Last Updated 8 ಜೂನ್ 2025, 23:30 IST
<div class="paragraphs"><p>ನವೀನ್‌ ಶಂಕರ್‌</p></div>

ನವೀನ್‌ ಶಂಕರ್‌

   
ಶಿವರಾಜ್‌ಕುಮಾರ್‌ ನಟನೆಯ ‘131’ ಚಿತ್ರದ ಪ್ರಮುಖ ಖಳನಾಯಕನಾಗಿ ನಟ ನವೀನ್‌ ಶಂಕರ್‌ ಬಣ್ಣ ಹಚ್ಚಿದ್ದಾರೆ. ‍ಪ್ರತಿ ಚಿತ್ರದಲ್ಲಿಯೂ ಭಿನ್ನ ಪಾತ್ರಗಳನ್ನು ಆಯ್ದುಕೊಳ್ಳುವ ಅವರು ತಮ್ಮ ಸಿನಿಪಯಣದ ಕುರಿತು ಮಾತನಾಡಿದ್ದಾರೆ...

‘131’ ಕಾರ್ತಿಕ್ ಅದ್ವೈತ್ ನಿರ್ದೇಶನದ ಮಾಸ್‌, ಆ್ಯಕ್ಷನ್‌ ಚಿತ್ರ. ಇವರು ಮೊದಲು ತಮಿಳಿನಲ್ಲಿ ಒಂದು ಸಿನಿಮಾ ಮಾಡಿದ್ದರು. ಶಿವಣ್ಣ ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗುವ ಮೊದಲು ಒಂದು ಶೆಡ್ಯೂಲ್‌ ಚಿತ್ರೀಕರಣವಾಗಿತ್ತು. ಮುಂದಿನ ಶೆಡ್ಯೂಲ್‌ ಚಿತ್ರೀಕರಣವಾಗಬೇಕು. ನನ್ನದು ಖಳನಾಯಕನ ಪಾತ್ರ. ಪ್ರಬಲ ವ್ಯಕ್ತಿತ್ವ ಹೊಂದಿರುವ, ತುಂಬ ಇಂಟೆನ್ಸ್‌ ಆಗಿರುವ ಪಾತ್ರವಿದು. ಬಹಳ ಬುದ್ಧಿವಂತ, ಜತೆಗೆ ಕ್ರೂರ ವ್ಯಕ್ತಿ ಆಗಿರುತ್ತೇನೆ’ ಎಂದು ತಮ್ಮ ಪಾತ್ರ ಪರಿಚಯದೊಂದಿಗೆ ಮಾತು ಪ್ರಾರಂಭಿಸಿದರು ನವೀನ್‌.

ನಾಯಕ ಹಾಗೂ ಖಳನಾಯಕನಾಗಿ ನವೀನ್‌ ಗಮನ ಸೆಳೆದಿದ್ದಾರೆ. ಇತ್ತೀಚೆಗೆ ತೆರೆಕಂಡ ‘ನೋಡಿದವರು ಏನಂತಾರೆ’ ಚಿತ್ರದಲ್ಲಿ ನಾಯಕನಾಗಿ ಅವರ ನಟನೆ ಅದ್ಭುತವಾಗಿತ್ತು. ‘ಹೋಯ್ಸಳ’ ಮತ್ತು ‘ಸಲಾರ್‌’ ಸಿನಿಮಾಗಳಲ್ಲಿ ಖಳನಾಯಕನಾಗಿ ಜನಮನ್ನಣೆ ಗಳಿಸಿದ್ದರು.

ADVERTISEMENT

‘ಕೆಆರ್‌ಜಿ ನಿರ್ಮಾಣ ಸಂಸ್ಥೆಯ ‘ಕ್ರಿಕೆಟ್‌–11’ ಚಿತ್ರ ಸ್ಥಗಿತಗೊಂಡಿದೆ. ಅವರದ್ದೇ ಆದ ಕಾರಣಗಳಿಂದ ಆ ಸಿನಿಮಾ ಸೆಟ್ಟೇರಿಲ್ಲ. ‘ಗುಲ್ಟು’ ಸಿನಿಮಾ ನಿರ್ದೇಶಕರು ಮತ್ತು ನಾನು ಒಂದು ಸ್ಕ್ರಿಪ್ಟ್‌ ಮಾಡುತ್ತಿದ್ದೇವೆ. ಅದು ಪೂರ್ಣಗೊಳ್ಳಲು ಎಷ್ಟು ದಿನ ಆಗುತ್ತದೆಯೆಂದು ಗೊತ್ತಿಲ್ಲ. ಅದನ್ನು ಬಿಟ್ಟು ಬೇರೆ ಯಾವ ಸಿನಿಮಾಗಳೂ ಇಲ್ಲ. ಇವತ್ತು ಚಿತ್ರರಂಗದಲ್ಲಿ ಪ್ರತಿಯೊಬ್ಬರೂ ಸಂಕಷ್ಟದಲ್ಲಿದ್ದಾರೆ. ಸಿನಿಮಾ ಮೊದಲಿನಷ್ಟು ಸುಲಭವಾಗಿಲ್ಲ. ನಾವು ಇಂದು ಜಾಗತಿಕವಾಗಿ ಹೋರಾಡಬೇಕಿದೆ. ಇತರೆ ಭಾಷೆಗಳ ವಿರುದ್ಧ ಹೋರಾಡಬೇಕು. ನನ್ನ ಹುಟ್ಟೂರು ಇಳಕಲ್‌ನಂಥ ಸಣ್ಣ ಊರಿನಲ್ಲಿ ಇವತ್ತು ಎಲ್ಲ ಭಾಷೆಗಳ ಸಿನಿಮಾ ಬಿಡುಗಡೆಯಾಗುತ್ತಿದೆ’ ಎಂದು ಸದ್ಯದ ಪರಿಸ್ಥಿತಿ ತೆರೆದಿಟ್ಟರು.

‘ಜನ ಒಟಿಟಿಗೆ ಶಿಫ್ಟ್‌ ಆಗಿದಾರೆ. ಅವರನ್ನು ಚಿತ್ರಮಂದಿರಕ್ಕೆ ಕರೆದುಕೊಂಡು ಬರಬೇಕೆಂದರೆ ನೋಡದಿರಲು ಸಾಧ್ಯವೇ ಇಲ್ಲ ಎಂಬಂಥ ಸಿನಿಮಾಗಳನ್ನು ಕೊಡಬೇಕು. ಆವರೇಜ್‌ ಸಿನಿಮಾಗಳನ್ನು ಕೊಟ್ಟರೆ ಒಟಿಟಿಲಿ ನೋಡಿಕೊಳ್ಳೋಣ ಎನ್ನುತ್ತಾರೆ. ಇಂದು ಎರಡೂ ರೀತಿಯಲ್ಲೂ ಉತ್ಕೃಷ್ಟವಾಗಿರುವ ಸಿನಿಮಾಗಳು ಬೇಕು. ಒಂದು ಕಂಟೆಂಟ್‌ ತುಂಬ ಚೆನ್ನಾಗಿರಬೇಕು, ಜತೆಗೆ ವಿಷ್ಯುವಲಿ ಜನರನ್ನು ಆಕರ್ಷಿಸಬೇಕು. ಇಲ್ಲವಾದಲ್ಲಿ ಅದ್ದೂರಿತನದೊಂದಿಗೆ ದೊಡ್ಡ ಸ್ಟಾರ್‌ನಟನಿರಬೇಕು. ಸಿನಿಮಾ ಎಂಬುದು ಜನಕ್ಕೆ ಮನರಂಜನೆ, ಸಿನಿಮಾ ಅಂದ್ರೆ ಬಿಸಿನೆಸ್‌. ಜನ ಟಿಕೆಟ್‌ಗೆ ರೊಕ್ಕ ಕೊಡಬೇಕು ಅಂದ್ರೆ, ನಾವು ಅವರಿಗೆ ಸಿನಿಮಾದಿಂದ ಮಜ ಕೊಡಬೇಕು. ಸಿನಿಮಾ ಮನರಂಜನೀಯವಾಗಿದ್ದರೆ ಪ್ರೇಕ್ಷಕರು ಹಣ ಕೊಟ್ಟು ಟಿಕೆಟ್‌ ಪಡೆಯುತ್ತಾರೆ’ ಎಂಬ ಅಭಿಮತ ಅವರದ್ದು.

ಭಿನ್ನ ಪಾತ್ರಗಳ ಮೂಲಕ ಛಾಪು
‘ಗುಲ್ಟು’ ಚಿತ್ರದಿಂದ ಚಿತ್ರರಂಗಕ್ಕೆ ಕಾಲಿಟ್ಟ ನವೀನ್‌, ನಟಿಸಿದ್ದು ನಾಲ್ಕಾರು ಚಿತ್ರಗಳಲ್ಲಿ ಮಾತ್ರ. ಆದರೆ ಪ್ರತಿ ಸಲ ಭಿನ್ನ ಪಾತ್ರಗಳಿಂದಲೇ ಛಾಪು ಮೂಡಿಸುತ್ತಿದ್ದಾರೆ. ‘ಭಿನ್ನವಾದ ಕಥೆ ಮತ್ತು ಪಾತ್ರಗಳನ್ನೇ ಒಪ್ಪಿಕೊಳ್ಳುವೆ. ನಟನಾಗಿ ಪ್ರಯೋಗ ಮಾಡಬೇಕು. ನಮಗೆ ಸವಾಲು ಎನಿಸುವ ಪಾತ್ರಗಳನ್ನು ನಿಭಾಯಿಸಬೇಕು. ಆಗಲೇ ನಾವಿಲ್ಲಿ ನೆಲೆ ಕಂಡುಕೊಳ್ಳಲು ಸಾಧ್ಯ’ ಎನ್ನುತ್ತಾರೆ ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.