ADVERTISEMENT

ಸಿನಿಮಾ: ಹವ್ಯಾಸಿ ಕಲಾವಿದ ಪ್ರದೀಪ್‌ ಕುಮಾರ್

ಶರತ್‌ ಹೆಗ್ಡೆ
Published 11 ಫೆಬ್ರುವರಿ 2021, 19:30 IST
Last Updated 11 ಫೆಬ್ರುವರಿ 2021, 19:30 IST
ಪ್ರದೀಪ್‌ ಕುಮಾರ್‌, ಸಂಭ್ರಮ
ಪ್ರದೀಪ್‌ ಕುಮಾರ್‌, ಸಂಭ್ರಮ   

ಸಿನಿಮಾ ಕ್ಷೇತ್ರದ ಆಕರ್ಷಣೆ ಹೇಗಾಯಿತು?

ಸಿನಿಮಾ ಮಾಡಬೇಕು ಎಂಬುದು ಬಾಲ್ಯದಿಂದಲೂ ಇದ್ದ ಕನಸು. ಸಾಮಾನ್ಯ ಮನುಷ್ಯನೊಬ್ಬ ಸಿನಿಮಾ ಮಾಡುವುದು ತುಂಬಾ ಕಷ್ಟ. ಆದರೂ ಕನಸು ಈಡೇರಿಸಿಕೊಳ್ಳಬೇಕಿತ್ತು. ನಾನು ಎಂಜಿನಿಯರಿಂಗ್‌ ಕೆಲಸ ಮಾಡುತ್ತಿರಬೇಕಾದರೆ ಲೈಮ್‌ಲೈಟ್‌ ಆ್ಯಕ್ಟಿಂಗ್‌ ಅಕಾಡೆಮಿಗೆ ಹೋದೆ. ಅಲ್ಲಿ ಆರು ತಿಂಗಳ ಬೇಸಿಕ್‌ ಕೋರ್ಸ್‌ ಮುಗಿಸಿದೆ. ಅಲ್ಲಿ ಇಬ್ಬರು ಗೆಳೆಯರು ಸಿಕ್ಕಿದರು. ಅವರ ಜೊತೆ ಸೇರಿಕೊಂಡು ಸಿನಿಮಾ ಮಾಡಲೇಬೇಕು ಎಂಬ ಯೋಜನೆ ರೂಪಿಸಿದೆವು.

ನಿರ್ಮಾಣಕ್ಕೆ ಬಂಡವಾಳ ಹೇಗೆ ಸಾಧ್ಯವಾಯಿತು?

ADVERTISEMENT

ಸಿನಿಮಾಕ್ಕೆ ದುಡ್ಡು ಬೇಕಿತ್ತಲ್ಲಾ. ಅದಕ್ಕೂ ಮುಂಚೆ ಒಂದು ಹೋಟೆಲ್‌ ತೆರೆದೆ. ಕ್ರಮೇಣ ಆದಾಯ ಬರಲು ಶುರುವಾ
ಯಿತು. ಇನ್ನು ಸಿನಿಮಾ ಕನಸು ಈಡೇರಿಕೆಗೆ ನನ್ನ ಬಳಿ ತಂಡ ಇರಲಿಲ್ಲ. ಅದಕ್ಕಾಗಿ ನಾನು ಕೆಲವು ಚಿತ್ರತಂಡಗಳಲ್ಲಿ ಸಹಾಯಕ ಕ್ಯಾಮೆರಾಮನ್‌, ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದೆ. ಆ ತಂಡದ ನೆರವು ಪಡೆದು ಸ್ವಲ್ಪ ದುಡ್ಡು ಸೇರಿಸಿ ಸಿನಿಮಾ ಮಾಡಲು ಮುಂದಾದೆ. ₹ 50 ಲಕ್ಷದೊಳಗೆ ಸಿನಿಮಾ ಮಾಡಬೇಕು ಅಂದುಕೊಂಡಿದ್ದೆವು. ಈಗ ಬಜೆಟ್‌ ₹ 85 ಲಕ್ಷಕ್ಕೆ ಏರಿದೆ. ಸ್ವಲ್ಪ ವೆಚ್ಚ ಹೆಚ್ಚಾಯಿತೇನೋ ಅನಿಸಿದೆ. ಈಗ ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿರುವುದರಿಂದ ಸಿನಿಮಾದ ಹೂಡಿಕೆ ವಾಪಸ್‌ ಬರುವ ಬಗ್ಗೆ ನಿರೀಕ್ಷೆ ಇಲ್ಲ. ಏಕೆಂದರೆ ಈಗಿನ ಪರಿಸ್ಥಿತಿಯಲ್ಲಿ ಸಿನಿಮಾದಿಂದ ಹೂಡಿದ ಬಂಡವಾಳ ಅಥವಾ ಲಾಭ ಪಡೆಯುವುದು ಅಷ್ಟು ಸುಲಭ ಅಲ್ಲ. ಆದ್ದರಿಂದ ಬಗ್ಗೆ ಹೆಚ್ಚು ಆಲೋಚನೆ ಮಾಡುವುದೂ ಇಲ್ಲ. ಅಲ್ಲದೆ ನಾನು ಇದರ ಮೇಲೆ ಅವಲಂಬಿತನೂ ಅಲ್ಲ.

ಕಲಾವಿದ ಯಾರು?

ಹಲವು ಕಥೆಗಳನ್ನು ಓದಿದ್ದೆ. ಅವುಗಳ ಪೈಕಿ ಕಲಾವಿದ ಕಥೆ ಇಷ್ಟವಾಯಿತು. ವ್ಯಂಗ್ಯಚಿತ್ರಕಾರನ ಬದುಕಿನ ಮೇಲೆ ಒಂದು ಸಿನಿಮಾ ಮಾಡೋಣ ಎಂದು ಹೊರಟೆ. ಇಲ್ಲಿ ವ್ಯಂಗ್ಯಚಿತ್ರಕಾರನ ಪ್ರೇಮಕಥೆ, ಅವನು ಎದುರಿಸುವ ಸಮಸ್ಯೆಗಳು ಮತ್ತು ವ್ಯಂಗ್ಯಚಿತ್ರಗಳ ಮೂಲಕವೇ ಆತ ಹೇಗೆ ಸಮಸ್ಯೆಗಳಿಂದ ಬಿಡಿಸಿಕೊಳ್ಳುತ್ತಾನೆ ಎಂಬ ವಿಷಯ ಇದೆ. ಇದೊಂದು ಪ್ರಯೋಗ ಅಷ್ಟೆ. ಜನರು ಹೇಗೆ ಸ್ವೀಕರಿಸುತ್ತಾರೆ ಎಂಬ ಕಾತರ ಇದೆ.

‘ಕಲಾವಿದ’ನ ಬಗ್ಗೆ ಅಧ್ಯಯನ ಹೇಗಿತ್ತು?

ಹೌದು. ಕಲಾವಿದ ಹೇಗಿರುತ್ತಾನೆ, ಅವನ ಹಾವಭಾವ, ಬದುಕಿನ ಬಗ್ಗೆ ವ್ಯಂಗ್ಯಚಿತ್ರಕಾರ ಕಾಂತೇಶ್‌ ಬಡಿಗೇರ್‌ ಅವರ ಬಳಿ ಮಾಹಿತಿ ಪಡೆದೆವು. ಅವರು ಹೇಳಿದ ವಿಷಯಗಳನ್ನು ಸಿನಿಮಾದಲ್ಲಿ ಅಳವಡಿಸಿಕೊಂಡಿದ್ದೇವೆ.

ಎಂಜಿನಿಯರಿಂಗ್‌, ಹೋಟೆಲ್‌, ಸಿನಿಮಾ... ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ತೊಡಗಿಕೊಂಡ ಬಗೆ ಹೇಗೆ?

ನನ್ನದು ಮಲ್ಟಿಟಾಸ್ಕಿಂಗ್‌ ವ್ಯಕ್ತಿತ್ವ. ಈ ಹಿಂದೆ ಒಂದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಈಗ ನನ್ನದೇ ಒಂದು ಕಂಪನಿ ಸ್ಥಾಪಿಸಿದ್ದೇನೆ. ಡೈನೋಟ್ರಾನಿಕ್ಸ್‌ ಅಂತ. ಅದು ಕೈಗಾರಿಕೆಗಳಿಗೆ ಸಂಬಂಧಿಸಿದ ಫ್ಯಾಬ್ರಿಕೇಷನ್‌ ಕೆಲಸ ಮಾಡುತ್ತಿದೆ. ಜನರ ಹೃದಯ ಮುಟ್ಟಬೇಕು ಎಂಬ ಆಸೆ ಇದೆ. ಅದಕ್ಕಾಗಿ ಸಿನಿಮಾ ಮಾಡಿದ್ದೇನೆ. ಇಂದಿಗೂ ನಾನು ನನ್ನ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದೇನೆ.

ಹೋಟೆಲ್‌ ಶುರು ಮಾಡುವಾಗ ಏನು ಅನುಭವ ಇತ್ತು?

ನಾನು ಜನರನ್ನು ಚೆನ್ನಾಗಿ ನಿರ್ವಹಿಸಬಲ್ಲೆ. ನನಗೆ ಈಗಲೂ ಅನ್ನ ಮಾಡಲು ಅಕ್ಕಿಗೆ ಎಷ್ಟು ನೀರು ಹಾಕಬೇಕು ಎಂದು ಗೊತ್ತಿಲ್ಲ. ನನ್ನ ತಂಡ ಈಗಲೂ ನನ್ನ ಜೊತೆ ಬೆಂಬಲಿಸುತ್ತಿದ್ದಾರೆ. ಅವರಿಂದಾಗಿ ನಡೆಸುತ್ತಿದ್ದೇನೆ.

ಮುಂದಿನ ಹಾದಿ ಏನು?

ಹೋಟೆಲ್‌ ಲಾಭದಾಯಕವಾಗಿದ್ದರೂ ಸಿನಿಮಾ ಕಾರಣಕ್ಕಾಗಿ ಮಾರಬೇಕಾಯಿತು. ಈಗ ಬಿಗ್‌ಬಾಸ್‌ ಕಿಚನ್‌ ಹೆಸರಿನ ಹೋಟೆಲ್‌ ಮಾಡುತ್ತಿದ್ದೇನೆ. ಚಿತ್ರದ ಸಹ ನಿರ್ಮಾಪಕ ಸುರೇಶ್‌ ಅವರು ಹೋಟೆಲ್‌ ನೋಡಿಕೊಳ್ಳುತ್ತಿದ್ದಾರೆ. ಹೋಟಲ್‌ನ ಆಡಳಿತ ವಿಭಾಗದಲ್ಲಷ್ಟೇ ನಾನು ಕೆಲಸ ಮಾಡುತ್ತೇನೆ. ಬೇರೆ ಜವಾಬ್ದಾರಿಗಳು ಇರುವುದಿಲ್ಲ. ಎಂಜಿನಿಯರಿಂಗ್‌ನಲ್ಲಿ ಸದಾ ಇರುತ್ತೇನೆ. ಸಿನಿಮಾ ನನ್ನ ಹವ್ಯಾಸ. ಹಾಗೆಂದು ಅದನ್ನು ಬಿಡುವುದಿಲ್ಲ. ಇನ್ನೊಂದು ಸ್ಕ್ರಿಪ್ಟ್‌ ಸಿದ್ಧವಾಗಿದೆ. ಅದರ ಕುರಿತು ಮುಂದೆ ಹೇಳುತ್ತೇನೆ. ವರ್ಷಕ್ಕೆ ಇಂತಿಷ್ಟೇ ಸಿನಿಮಾ ಎಂದು ಈಗಲೇ ಭರವಸೆ ನೀಡಲಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.